ಬೈಂದೂರು: ಎಲ್ಲೂರಿನಿಂದ ಕುಡೂರಿ ನವರಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಿ 2 ತಿಂಗಳಲ್ಲೇ ಬಿರುಕು ಬಿಟ್ಟಿದೆ. ಹಲವು ವರ್ಷಗಳ ಬೇಡಿಕೆ ಬಳಿಕ ಮಂಜೂರಾದ ರಸ್ತೆ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಸಂಚರಿಸಲು ಸಾಧ್ಯವಾಗದಂತಾಗಿದೆ. ಹತ್ತರಿಂದ ಹದಿನೈದು ಕಡೆ ಬಿರುಕು ಬಿಟ್ಟಿದೆ. ಇದು ಬೈಂದೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಕೊಲ್ಲೂರು ಮುಖ್ಯ ರಸ್ತೆಯಿಂದ ಎಲ್ಲೂರಿಂದ ಕುಡೂರುವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಃಸ್ಥಿತಿ.
ಹಲವಾರು ವರ್ಷಗಳಿಂದ ಧೂಳುಮಯ ಮಣ್ಣಿನ ರಸ್ತೆಯಿಂದ ಕೂಡಿರುವ ಇಲ್ಲಿನ ರಸ್ತೆಗೆ ಕಾಂಕ್ರೀಟ್ ಕಾಮ ಗಾರಿ ಮಾಡು ವಂತೆ ಸ್ಥಳೀಯರು ಹಲವು ಬಾರಿ ಸಂಬಂಧಿತರಿಗೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿದ ಶಾಸಕ ಬಿ.ಎಂ. ಸುಕುಮಾರ್‌ಶೆಟ್ಟಿಯವರು ಕಳೆದ ವರ್ಷ ರಾಜ್ಯ ಸರಕಾರದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕೊಲ್ಲೂರು ಮುಖ್ಯ ರಸ್ತೆಯಿಂದ ಕುಡೂರುವರೆಗೆ ಹಾಗೂ ಹುಂಚಿ° ಎಲ್ಲೂರು ಮಾರ್ಗದ ಸುಮಾರು 2 ಕಿ.ಮೀ. ದೂರದ ರಸ್ತೆ ಅಭಿವೃದ್ಧಿಗೆ 2.70 ಕೋಟಿ ರೂ. ಅನುದಾನ ಒದಗಿಸಿದ್ದರು.
ಕಳೆದ ಒಂದೆರಡು ತಿಂಗಳ ಹಿಂದಷ್ಟೆ ಎರಡು ರಸ್ತೆ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಕೊಲ್ಲೂರು ಮುಖ್ಯ ರಸ್ತೆಯಿಂದ ಕುಡೂರುವರೆಗೆ ಸಂಪರ್ಕ ಕಲ್ಪಿಸುವ ಒಂದು ಕಿ.ಮೀ. ದೂರದ ರಸ್ತೆಯು ಈಗಾಗಲೇ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಅಲ್ಲದೇ ಅಸಮರ್ಪಕ ಚರಂಡಿ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಗುಡ್ಡದ ನೀರು ರಸ್ತೆಯಲ್ಲಿ ಹರಿದು ಹೋಗುವ ಸಾಧ್ಯತೆಯಿರುವುದರಿಂದ ಶೀಘ್ರ ಇದನ್ನು ಸರಿಪಡಿಸಿಕೊಡಬೇಕು ಎಂದು ಸ್ಥಳೀಯರು ಆಗ್ರ ಹಿಸುತ್ತಿದ್ದಾರೆ.
ಇಲ್ಲಿನ ರಸ್ತೆ ಅಸಮರ್ಪಕ ಕಾಮಗಾರಿಯಿಂದಾಗಿ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಸಂಬಂಧಿತ ಎಂಜಿನಿಯರ್ ಗಮನಕ್ಕೆ ತಂದರೂ, ಅವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಹೀಗೆ ಮುಂದುವರೆದರೆ ವರ್ಷಾಂತ್ಯದಲ್ಲೇ ಕಾಂಕ್ರೀಟ್ ಕಾಮ ಗಾ ರಿ ಕಿತ್ತುಹೋಗುವ ಸಾಧ್ಯತೆಯಿದೆ. ಇನ್ನಾದರೂ ಅಧಿಕಾರಿಗಳು ಗಮನ ಹರಿಸಿ ಕಾಮಗಾರಿ ಸರಿಪಡಿಸಿಕೊಡಬೇಕು.
– ಸ್ಥಳೀಯ ನಿವಾಸಿಗಳು
ಗೋಳಿಹೊಳೆ ಗ್ರಾಮದ ಕುಡೂರು ರಸ್ತೆಯ ಅಸಮರ್ಪಕ ಕಾಮಗಾರಿಯ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.
– ಅಲ್ವಿನ್, ಎಂಜಿನಿಯರ್