Advertisement
ಚೀನದಲ್ಲಿ ಪ್ರಗತಿಯ ಓಟ ಮನೋವೇಗದಲ್ಲಿ ಸಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹೇಗಾದರೂ ಮಾಡಿ ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿ ಸೂಪರ್ ಪವರ್ ಆಗಬೇಕೆಂಬ ಉದ್ದೇಶದಿಂದ ಚೀನ ರಾಷ್ಟ್ರ ಆರ್ಥಿಕ ಪ್ರಗತಿಯತ್ತ ದಾಪುಗಾಲಿಟ್ಟಿದೆ. ಅದರಲ್ಲೂ ಉತ್ಪಾದನಾ ಕ್ಷೇತ್ರದ ಪ್ರತಿವಲಯದಲ್ಲೂ ತನ್ನ ಮೊಹರು ಬೀಳಬೇಕೆಂಬ ಹಠವೂ ಅದಕ್ಕಿದೆ. ಇದರ ಹಿನ್ನೆಲೆಯಲ್ಲೇ ಮೂರು ದಶಕಗಳಿಂದ ಕೈಗಾರೀಕರಣ ಸೇರಿದಂತೆ ಎಲ್ಲ ಬಗೆಯ ಅಭಿವೃದ್ಧಿಗೆ ಸ್ಥಳೀಯ ಸರಕಾರ ಬಹಳ ಮಹತ್ವ ನೀಡಿತು.
ಯೆಲ್ಲೋ ರಿವರ್‌ನ ನೆಲೆಯಲ್ಲೂ ಇಂದು ಆಗಿರುವ ತಪ್ಪು ಇದೇ. ಚೀನ ಕೂಡ ಸೂಪರ್ ಅಭಿವೃದ್ಧಿಯ ಎದುರು ನದಿಯೂ ಸೇರಿದಂತೆ ಎಲ್ಲವನ್ನೂ ಬಲಿಗೊಟ್ಟಿದೆ. ಅದರ ಪರಿಣಾಮವನ್ನು ಈಗ ಈ ಹಳದಿ ನದಿ ಅನುಭವಿಸುತ್ತಿದೆ. ಉತ್ತರ ಚೀನ ಬದುಕಿರುವುದೇ ಈ ನದಿಯ ಕೃಪಾಕಟಾಕ್ಷದಿಂದ. ಸುಮಾರು 155 ದಶಲಕ್ಷ ಜನರಿಗೆ ನೀರು ಪೂರೈಸುತ್ತದೆ. ಇದು ಶೇ. 12ರಷ್ಟು ಚೀನದ ಜನಸಂಖ್ಯೆಗೆ ಸಮ. ಸುಮಾರು 18 ದಶಲಕ್ಷ ಎಕ್ರೆಗಳಿಗೆ ನೀರು ಹರಿಸುತ್ತದೆ. ಕೃಷಿ ಚಟುವಟಿಕೆಗಳಿಗೆ ಇದೇ ಆಧಾರ. ಒಟ್ಟೂ ಈ ನದಿ ಪಾತ್ರದಲ್ಲಿ ಸುಮಾರು 400 ದಶಲಕ್ಷ ಮಂದಿ ಬದುಕುತ್ತಿದ್ದಾರೆ. ಅಂದರೆ ಆರ್ಥಿಕ ಅಭಿವೃದ್ಧಿಯಲ್ಲಿ ಇದರ ಪಾತ್ರವೇನೆಂದು ಸಹಜವಾಗಿಯೇ ಲೆಕ್ಕ ಹಾಕಬಹುದು. ಇಲ್ಲೂ ಆದದ್ದು ಇದೇ ತಪ್ಪು ಯೆಲ್ಲೋ ರಿವರ್‌ನ ನೆಲೆಯಲ್ಲೂ ಇಂದು ಆಗಿರುವ ತಪ್ಪು ಇದೇ.
Related Articles
Advertisement
ಚೀನದ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದನಾ ಪ್ರದೇಶವೂ ಇದರ ವ್ಯಾಪ್ತಿಯಲ್ಲೇ ಬರುತ್ತದೆ. ಇದರೊಂದಿಗೆ ಈ ನದಿ ತೀರದಲ್ಲಿ ಬರುವ ಬಹುತೇಕ ನಗರಗಳು ಅತಿ ಹೆಚ್ಚು ಜನಸಂದಣಿಯನ್ನು ಹೊಂದಿವೆ. ಚೀನದ ಸುಮಾರು 20 ಪೆಟ್ರೋಕೆಮಿಕಲ್ ಕೈಗಾರಿಕೆಗಳ ಪೈಕಿ 4 ಸಾವಿರಕ್ಕೂ ಹೆಚ್ಚು ಸ್ಥಾಪನೆಗೊಂಡಿರುವುದು ಈ ನದಿಯ ಪಾತ್ರದಲ್ಲೇ. ಇದರೊಂದಿಗೆ ನದಿಯ ಪ್ರವಾಹವನ್ನು ಕಡಿಮೆಗೊಳಿಸಲು ಕಟ್ಟಿದ ಹಲವು ಅಣೆಕಟ್ಟುಗಳು-ಒಟ್ಟೂ ಎಲ್ಲವೂ ಅಭಿವೃದ್ಧಿಯ ನೆಲೆಯಲ್ಲೇ ಆಗಿರುವಂಥದ್ದು.ಒಂದೆಡೆ ಕ್ಷಿಪ್ರಗತಿಯ ಅಭಿವೃದ್ಧಿ, ದಿಢೀರನೆ ಹುಟ್ಟಿಕೊಂಡ ನಗರಗಳು, ಮೂಲ ಸೌಲಭ್ಯಗಳ ಕೊರತೆ, ಕೈಗಾರಿಕೆಗಳು, ಹೆಚ್ಚಿದ ಜನಸಂಖ್ಯೆ-ಎಲ್ಲದರ ಪರಿಣಾಮವಾಗಿ ಇಂದು ಜಗತ್ತಿನ ಅತಿ ಕಲುಷಿತಗೊಂಡ ಹತ್ತು ನದಿಗಳ ಪಟ್ಟಿಯಲ್ಲಿ ಈ ಯೆಲ್ಲೋ ರಿವರ್ ಸಹ ಸೇರುವಂತಾಗಿದೆ. ಕೈಗಾರಿಕೆಗಳೂ ಸೇರಿದಂತೆ ಇತರೆ ತ್ಯಾಜ್ಯ ವಿಲೇವಾರಿಯಿಂದ ನದಿಯ ನೀರು ಸಂಪೂರ್ಣ ಕಲುಷಿತಗೊಂಡಿದ್ದರೆ, ಅಣೆಕಟ್ಟುಗಳು ಇತ್ಯಾದಿಯಿಂದ ಈ ನದಿಯಲ್ಲಿದ್ದ ಹಲವು ಮೀನಿನ ಪ್ರಭೇದಗಳು ಕಣ್ಮರೆಯಾದವು. ಕೈಗಾರಿಕೆಗಳಿಂದ ಬಿಡುಗಡೆಯಾಗುತ್ತಿರುವ ರಾಸಾಯನಿಕದಿಂದ ಕೆಲವೆಡೆ ನೀರೇ ವಿಚಿತ್ರ ಬಣ್ಣಕ್ಕೆ ತಿರುಗಿದೆ. ಇದನ್ನು ಕುಡಿಯವುದಕ್ಕಾಗಲೀ, ಕೃಷಿಗಾಗಲೀ ಬಳಸಲು ಯೋಗ್ಯವಾಗಿಲ್ಲ. ಆಡು-ಮೇಕೆಗಳು ಈ ನೀರನ್ನು ಕುಡಿದರೆ ಸಾಯುತ್ತವೆ. ಆ ಮಟ್ಟಿಗೆ ನೀರು ವಿಷಮಯವಾಗಿದೆ.
ಮೂರನೇ ಒಂದು ಭಾಗ ಕಲುಷಿತ2006ರಲ್ಲಿ ಈನದಿಯ ಪ್ರಾಂತ್ಯದಲ್ಲೇ ಬರುವ ನಗರ ಲಾಂಜೋವಿನ ಸುತ್ತ ಇಡೀ ನೀರು ಇದ್ದಕ್ಕಿದ್ದಂತೆ ಕೆಂಪಾಯಿತು. ಬಳಿಕ ಅದಕ್ಕೆ ಕಾರಣ ಹುಡುಕಿದಾಗ ತಿಳಿದುಬಂದ ಅಂಶವೆಂದರೆ ಸುತ್ತಲಿನ ಒಳಚರಂಡಿಗಳಿಂದ ಸಂಸ್ಕರಿಸದ ತ್ಯಾಜ್ಯ ನೀರು ಸೇರಿದ ಪರಿಣಾಮವೆಂಬುದು. 2005ರಲ್ಲಿ ಸುಮಾರು ಆರು ಟನ್‌ನಷ್ಟು ಡೀಸೆಲ್ ನದಿಯ ಉಪನದಿಗಳ ಪಾತ್ರದಲ್ಲಿ ಸೇರಿತ್ತು. ಇದರಿಂದ ಸುಮಾರು 100 ಕಿ.ಮೀ.ನಷ್ಟು ಉದ್ದದ ನದಿ ಪಾತ್ರ ಕಲುಷಿತಗೊಂಡಿತು. ಹೀಗೆ ಲೆಕ್ಕ ಹಾಕುತ್ತಾ ಹೋದರೆ, ಪ್ರತಿ ವರ್ಷ ನದಿಗೆ ಸೇರುವ ಸಂಸ್ಕರಿಸದ ತ್ಯಾಜ್ಯ ಸುಮಾರು ಒಂದು ದಶಲಕ್ಷ ಟನ್. ಇವಿಷ್ಟು ಪ್ರಮಾಣ ಕ್ಸಿಯಾನ್ ಎಂಬ ನಗರವೊಂದ ರಿಂದ ಮಾತ್ರ. ಇನ್ನು ಉಳಿದ ನಗರಗಳ ಕೊಡುಗೆಯೂ ಕಡಿಮೆ ಯೇನಿಲ್ಲ. 2008ರಲ್ಲಿ ಬಿಡುಗಡೆಯಾದ ಒಂದು ವರದಿ ಪ್ರಕಾರ, ಯೆಲ್ಲೋ ರಿವರ್‌ನ ಮೂರನೇ ಒಂದು ಭಾಗ ಕೈಗಾರಿಕೆಗಳಿಂದ ಸಂಪೂರ್ಣ ಕಲುಷಿತವಾಗಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯ ಕ್ರಮದ ವರದಿ ಪ್ರಕಾರ 1996ರ ಸಂದರ್ಭದಲ್ಲಿ ಸುಮಾರು 4.29 ಬಿಲಿಯನ್ ಟನ್‌ನಷ್ಟು ಕೈಗಾರಿಕೆ ಹಾಗೂ ಒಳಚರಂಡಿ ತ್ಯಾಜ್ಯವನ್ನು ನದಿಗೆ ಬಿಡಲಾಗಿತ್ತು. ಅಂದ ಮೇಲೆ ನದಿ ಹೇಗೆ ಬದುಕೀತು ಅಲ್ಲವೇ? ಅಷ್ಟೇ ಏಕೆ? ಯೆಲ್ಲೋ ರಿವರ್ ಸಂರಕ್ಷಣಾ ಸಮಿತಿಯು ನದಿಯ ವಿವಿಧೆಡೆ ನೀರಿನ ಗುಣಮಟ್ಟ ಪರಿಶೀಲನೆಗೆ ಮಾದರಿಗಳನ್ನು ಸಂಗ್ರಹಿಸಿತು. ಇವುಗಳಲ್ಲಿ ಹಲವೆಡೆ ಅಪಾಯಕಾರಿ ಮಟ್ಟದಲ್ಲಿದೆ. ಅಂದರೆ ಕುಡಿಯಲಾಗಲೀ, ಕೃಷಿಗಾಗಲೀ, ಕೈಗಾರಿಕೆಗಳಿಗಾಗಲೀ ಬಳಸಲು ಯೋಗ್ಯವೇ ಅಲ್ಲ. ಜತೆಗೆ ಈ ಮಾಲಿನ್ಯದ ಲೆಕ್ಕವನ್ನೂ ಹಾಕಲಾಯಿತು. ಈ ಪೈಕಿ ಶೇ.73ರಷ್ಟು ಮಾಲಿನ್ಯ ಕೈಗಾರಿಕೆಗಳಿಂದ ಆಗಿದ್ದರೆ, ಶೇ. 23ರಷ್ಟು ಜನವಸತಿ ಪ್ರದೇಶಗಳಿಂದ ಆಗಿದೆ. ಉಳಿದ
ಪ್ರಮಾಣಕ್ಕೆ ಬೇರೆ ಕಾರಣಗಳಿವೆ. ಇತ್ಯಾದಿ ಎಂದು ಕರೆಯಬಹು ದೆನ್ನಿ. ಆದ ಕಾರಣ ಶೇ. 50ರಷ್ಟು ನದಿ ಈಗಾಗಲೇ ಸತ್ತಿದೆ. ಇನ್ನೂ ದುರಂತವೆಂದರೆ, ನದಿಯ ಕೆಲವು ಪಾತ್ರಗಳಲ್ಲಿ ಕಲುಷಿತ ನೀರಿನ ಸೇವನೆ ಇತ್ಯಾದಿ ಕಾರಣಗಳಿಗೆ ಕ್ಯಾನ್ಸರ್, ದೋಷಪೂರಿತ ಜನನ, ನೀರಿನಿಂದ ಬರುವ ಕೆಲವು ರೋಗಗಳ ಸಂಖ್ಯೆ ಹೆಚ್ಚುತ್ತಿದೆ ಎಂದೂ ಹೇಳಲಾಗುತ್ತಿದೆ. ಅದರಲ್ಲೂ ಕಾಗದದ ಕೈಗಾರಿಕೆಗಳು ಸೇರಿದಂತೆ ಹಲವು ಕೈಗಾರಿಕೆಗಳು ಈ ದುರಂತಕ್ಕೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸುತ್ತಿವೆ. ಆರ್ಥಿಕ ಅಭಿವೃದ್ಧಿಗೆ ಬಹಳ ಮುಖ್ಯವೆನಿಸಿದ ನದಿಯನ್ನೇ ಆ ಅಭಿವೃದ್ಧಿಯ ಅರ್ಥವಿಲ್ಲದ ವೇಗ ಕೊಲ್ಲುತ್ತಿದೆ ಎನ್ನುವುದಾದರೆ ವಿಪರ್ಯಾಸವಲ್ಲದೇ ಮತ್ತೇನು? ಯಾವ ಬಗೆಯ ಅಭಿವೃದ್ಧಿ?
ಈ ಪ್ರಶ್ನೆ ಹುಟ್ಟಿಕೊಳ್ಳುವುದೇ ಇಲ್ಲಿ. ನಮಗ್ಯಾವ ಬಗೆಯ ಅಭಿವೃದ್ಧಿ ಅವಶ್ಯ ಎಂಬುದನ್ನು ಅರ್ಥೈಸಿಕೊಳ್ಳದಿದ್ದರೆ ಆಗುವ ಅನಾಹುತ ಇದು. ಎಲ್ಲವನ್ನೂ ಕರಗಿಸಿ ಖಾಲಿ ಮಾಡಿದರೆ ಮುಂದಿನ ತಲೆಮಾರು ಏನು ಮಾಡಬೇಕೆಂಬುದಕ್ಕೆ ನಮ್ಮನ್ನಾಳುವ ಯಾರ ಬಳಿಯಲ್ಲೂ ಉತ್ತರವಿಲ್ಲ. ಈ ಮಾತು ನಮ್ಮ ದೇಶಕ್ಕಷ್ಟೇ ಅನ್ವಯವಾಗದು, ಅರ್ಥವಿಲ್ಲದ ಪ್ರಗತಿಯ ಬೆನ್ನ ಹಿಂದೆ ಬಿದ್ದ ಎಲ್ಲ ರಾಷ್ಟ್ರಗಳಿಗೂ ಅನ್ವಯವಾಗುವಂಥದ್ದು. ವಿವೇಕಯುತ ಪ್ರಗತಿಗೆ ಮುನ್ನುಡಿ ಬರೆಯುವ ಮತ್ತು ಬರೆಯಲು ಆಗ್ರಹಿಸುವ ಹೊತ್ತು ಇದು. ಇದೇ ಅತ್ಯಂತ ತುರ್ತಾಗಿ ಆಗಬೇಕಾದ ಕೆಲಸವೂ ಹೌದು. *ಅರವಿಂದ ನಾವಡ