Advertisement

ಎಲೆಚುಕ್ಕಿ ರೋಗಕ್ಕೆ ಸೋಗೆಗೆ ಕತ್ತರಿ ಮದ್ದು: ಸಿಪಿಸಿಆರ್‌ಐ ವಿಜ್ಞಾನಿಗಳ ಸಲಹೆ

01:23 AM Dec 14, 2022 | Team Udayavani |

ಮಂಗಳೂರು: ಎಲೆಚುಕ್ಕಿ ರೋಗಕ್ಕೆ ಅಡಿಕೆ ಮರದ ಸೋಗೆಗಳನ್ನು ಕತ್ತರಿಸಿ ಬೆಂಕಿ ಹಾಕಿ ಸುಡುವುದು ಹಾಗೂ ಮರಕ್ಕೆ ಔಷಧ ಸಿಂಪಡಣೆ ಪೂರ್ಣ ಯಶಸ್ವಿ ಎನ್ನಲಾಗದು; ಆದರೆ ರೋಗದಿಂದ ಇಡೀ ತೋಟವನ್ನೇ ಕಳೆದುಕೊಳ್ಳುವ ಬದಲು ಮರ ಉಳಿಸಿಕೊಳ್ಳುವುದು ಸಾಧ್ಯ.

Advertisement

ಸೋಗೆ ಕತ್ತರಿಸುವ ವಿಧಾನವನ್ನು ಅನು ಸರಿಸಿದ ಕೆಲವೇ ಮಂದಿ ಬೆಳೆಗಾರರ ಮಾತಿನ ಸಾರವಿದು. ಕಳೆದ ವರ್ಷವೇ ಸುಳ್ಯದ ಕೆಲವೆಡೆ ಎಲೆಚುಕ್ಕಿ ರೋಗ ಕಾಣಿಸಿತ್ತು. ಈ ಬಾರಿಯ ಮಳೆಗಾಲ ದಿಂದೀಚೆಗೆ ಹಲವು ತಾಲೂಕುಗಳಲ್ಲಿ ಉಲ್ಬಣಿ ಸಿದೆ. ಮೈಲುತುತ್ತು ಸೇರಿದಂತೆ ಹಲವು ವಿಧದ ಶಿಲೀಂಧ್ರ ನಾಶಕಗಳನ್ನು ಸಿಂಪಡಿಸಿದರೂ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಸಿಪಿಸಿಆರ್‌ಐ ವಿಜ್ಞಾನಿಗಳ ಸಲಹೆಯಂತೆ ಕೆಲವೇ ರೈತರು ಧೈರ್ಯ ತೋರಿಸಿ ಅಡಿಕೆ ಮರದ ಸೋಗೆ ಕತ್ತರಿಸಲು ಮುಂದಾಗಿದ್ದಾರೆ.

ಸತೀಶ್‌ ರಾವ್‌ ದಾಸರಬೈಲು ಅವರಿಗೆ 3 ಎಕ್ರೆ ಅಡಿಕೆ ತೋಟವಿದ್ದು, ಜುಲೈ ಬಳಿಕ ಎಲೆಚುಕ್ಕಿ ರೋಗ ವಿಜೃಂಭಿಸಿತ್ತು. ಮಳೆ ಇದ್ದು ಏನೂ ಮಾಡಲಾಗಲಿಲ್ಲ. ಮೈಲು ತುತ್ತು ಬಿಟ್ಟಾಗ ಒಮ್ಮೆ ನಿಯಂತ್ರಣಕ್ಕೆ ಬಂದರೂ ಬಳಿಕ ಹೆಚ್ಚಾಯಿತು.

“ಸಿಪಿಸಿಆರ್‌ಐ ವಿಜ್ಞಾನಿ ಡಾ| ಭವಿಷ್‌ ಅವರ ಸಲಹೆಯಂತೆ ಸೆಪ್ಟಂಬರ್‌ ವೇಳೆಗೆ ಎಲೆ ಕತ್ತರಿಸುವ ನಿರ್ಧಾರಕ್ಕೆ ಬಂದೆ. ಬಹುತೇಕ ಮರಗಳ ಕೆಳಗಿನ ಮೂರು-ನಾಲ್ಕು ಸೋಗೆಗಳನ್ನು ಬುಡದಿಂದಲೇ ಎಂದರೆ, ಹಾಳೆಯ ಸಮೀಪದಿಂದಲೇ ಕತ್ತರಿಸಿ ತೆಗೆದು ದೂರ ಒಯ್ದು ಸುಟ್ಟೆವು. ಆಗ ಮತ್ತೆ ಮಳೆಯಾದ್ದರಿಂದ ಕೆಲವು ದಿನ ಔಷಧ ಬಿಡಲಾಗಲಿಲ್ಲ, 15 ದಿನ ಬಿಟ್ಟು ಅನಂತರ ಪ್ರಾಪಿಕೊನಾಜೋಲ್‌(propoconazole 25EC) ಎಂಬ ಶಿಲೀಂಧ್ರನಾಶಕವನ್ನು ಅಂಟು ದ್ರಾವಣ ಸೇರಿಸಿ ಸಿಂಪಡಣೆ ಮಾಡಿದೆ. ಇದರಿಂದ ಒಮ್ಮೆ ಶೇ. 80ರಷ್ಟು ರೋಗ ನಿಯಂತ್ರಣವಾದದ್ದು ಹೌದು. ಎಲೆಗಳೆಲ್ಲ ಹಸುರಾದವು, ಆದರೆ ತೀರಾ ಇತ್ತೀಚೆಗೆ ಮತ್ತೆ ರೋಗ ಮರುಕಳಿಸುವ ಲಕ್ಷಣ ಕಾಣುತ್ತಿದೆ. ಮತ್ತೆ ಸಿಂಪಡಣೆ ಮಾಡಲು ಮಳೆ ಬಿಡಬೇಕು’ ಎನ್ನುತ್ತಾರೆ ಸತೀಶ್‌.

ಶೇ. 50 ಫಸಲು ಹೋಗಿದೆ, ದೊಡ್ಡದಾದ ಅಡಿಕೆ ಒಡೆದು ಬೀಳುವುದು ಮುಂತಾಗಿ ಹಾಳಾಗಿ ಹೋಗಿದೆ. ಫಸಲು ನಷ್ಟ ಮುಂದಿನ ವರ್ಷದ್ದು, ಪ್ರಸ್ತುತ ಮರವನ್ನು ಉಳಿಸುವುದೇ ಸವಾಲು ಎನ್ನುತ್ತಾರೆ ಅವರು.

Advertisement

ವೆಂಕಟಮುರಳಿ ಅವರೂ ಒಂದು ತಿಂಗಳ ಹಿಂದೆ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. 8 ಎಕ್ರೆಯಲ್ಲಿ ಅಡಿಕೆ ತೋಟ ಇರುವ ಅವರ ಒಂದು ಸಾವಿರ ಮರಗಳು ಎಲೆಚುಕ್ಕಿ ರೋಗ ಬಾಧಿತ. ಅವರು ಗಮನಿಸಿದಂತೆ 50 ಅಡಿಗಳಷ್ಟು ಎತ್ತರದ ಮರಗಳಿಗೆ ರೋಗ ಬಾಧೆ ತೀರಾ ಕಡಿಮೆ. ಎಡೆಸಸಿಗಳಿಗೆ, ಎಳೆಯ ಮರಗಳಿಗೆ ಜಾಸ್ತಿ. ಬಿಸಿಲಿರುವ ಜಾಗದಲ್ಲಿ ರೋಗ ಹರಡುವುದು ಬೇಗ. ಅವರೂ ಆರಂಭದಲ್ಲಿ ಹೆಕ್ಸಕೊನಾಜೋಲ್‌ ಎಂಬ ರಾಸಾಯನಿಕವನ್ನು ಅಂಟು ಜತೆಗೆ ಸಿಂಪಡಿಸಿ ನೋಡಿದ್ದಾರೆ. ಒಮ್ಮೆ ಶೇ. 30ರಷ್ಟು ನಿಯಂತ್ರಣಕ್ಕೆ ಬಂದರೂ ಮಳೆ ಆರಂಭವಾದ ಬಳಿಕ ರೋಗ ಮತ್ತೆ ಹಬ್ಬತೊಡಗಿತು.

ಕೊನೆಗೆ ಮರಗಳನ್ನು ಉಳಿಸಿಕೊಳ್ಳುವ ಯೋಜನೆಯಾಗಿ ಸೋಗೆ ಕತ್ತರಿಸಲು ಮುಂದಾದರು. ಕತ್ತರಿಸಿದ ಬಳಿಕ ಟೆಬ್ಯುಕನಾಜೋಲ್‌ ಸಿಂಪಡಿಸಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ. ಸದ್ಯಕ್ಕೆ ರೋಗ ನಿಯಂತ್ರಣ ಆಗಿದೆ. ಆದರೆ ರೋಗ ಬಂದಿರದ ಬೇರೆ ಮರಗಳಲ್ಲಿ ಮತ್ತೆ ಎಲೆಚುಕ್ಕಿ ರೋಗ ಕಾಣಿಸತೊಡಗಿದೆ ಎನ್ನುತ್ತಾರೆ ಮುರಳಿ.

ಸದ್ಯಕ್ಕೆ ಇದುವೇ ಪರಿಹಾರ
ಎಲೆಚುಕ್ಕಿ ರೋಗ ಬಾಧಿತ 42,504 ಹೆಕ್ಟೇರ್‌ ಪ್ರದೇಶದಲ್ಲಿ ಸೋಗೆ ಕತ್ತರಿಸುವ ಅಭಿಯಾನ ಕೈಗೊಳ್ಳುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅದನ್ನು ಪಾಲಿಸುತ್ತಿರುವ ಕೆಲವು ಕೃಷಿಕರ ಅನುಭವಗಳನ್ನು ಸಂಗ್ರಹಿಸುವ ಪ್ರಯತ್ನವನ್ನು “ಉದಯವಾಣಿ’ ಮಾಡಿದೆ. ಈ ಸಮಸ್ಯೆಗೆ ಸರಿಯಾದ ಪರಿಹಾರ ಸಿಗುವ ವರೆಗೆ ಸೋಗೆ ಕತ್ತರಿಸುವುದೇ ಸೂಕ್ತ. ಮರ ಏರಿ ಅಡಿಕೆ ಕೊಯ್ಯುವ ರೀತಿಯಲ್ಲೇ ಸೋಗೆ ಯನ್ನು ಬುಡದಿಂದ ಕತ್ತರಿಸಬಹುದು ಅಥವಾ ಉದ್ದದ ಕಾರ್ಬನ್‌ ಫೈಬರ್‌ ದೋಟಿ ಬಳಸಿಯೂ ಕತ್ತರಿಸಬಹುದು. ಒಮ್ಮೆಗೆ ಅಡಿಕೆ ಫಸಲು ಕುಸಿಯುವುದು ಖಚಿತ, ಆದರೆ ಕನಿಷ್ಠ ಮರಗಳನ್ನಾದರೂ ಉಳಿಸಿಕೊಳ್ಳಬಹುದು ಎನ್ನುವುದು ಈ ರೈತರ ಮಾತಿನ ಸಾರ.

ಅಡಿಕೆ ಸೋಗೆ ಕತ್ತರಿಸಿದಾಗ ಅರ್ಧದಷ್ಟು ಶಿಲೀಂಧ್ರ ಇಲ್ಲವಾಗುತ್ತದೆ, ಬಳಿಕ ಸಿಂಪಡಣೆಗೆ ಕಡಿಮೆ ಔಷಧ ಸಾಕಾಗುತ್ತದೆ ಹಾಗೂ ಹೆಚ್ಚು ಪರಿಣಾಮಕಾರಿ ಕೂಡ. ಸಿಪಿಸಿಆರ್‌ಐ ವಿಜ್ಞಾನಿಗಳೂ ಅದನ್ನೇ ಹೇಳಿ ದ್ದಾರೆ. ಆದರೂ ಇದು ಹೆಚ್ಚು ಶ್ರಮ ಬೇಕಾ ಗುವುದ ರಿಂದ ಇನ್ನೂ ಹೆಚ್ಚು ಮಂದಿ ರೈತರು ಬಳಸಿಲ್ಲ.
-ಎಚ್‌.ಆರ್‌. ನಾಯಕ್‌, ಜಂಟಿ ನಿರ್ದೇಶಕರು, ತೋಟಗಾರಿಕಾ ಇಲಾಖೆ

- ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next