ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರುವ ಚಿತ್ರಗಳ ಪೈಕಿ ಯೆಲ್ಲೋ ಗ್ಯಾಂಗ್ಸ್ ಚಿತ್ರವೂ ಒಂದು. ಈ ಹಿಂದೆ ಟೀಸರ್ ನೋಡಿ ನಿರೀಕ್ಷೆ ಮೂಡಿಸಿದ್ದ ಚಿತ್ರತಂಡ ಹೊಸದೊಂದು ಟ್ರೈಲರ್ ರಿಲೀಸ್ ಮಾಡಿ ಯೆಲ್ಲೂ ಗ್ಯಾಂಗ್ಸ್ ಮೇಲಿನ ಭರವಸೆಯನ್ನ ಹೆಚ್ಚಿಸಿಕೊಳ್ಳುವಂತೆ ಮಾಡಿದೆ. ಹೌದು, ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ಯೆಲ್ಲೋ ಗ್ಯಾಂಗ್ಸ್ ಕಾಳಧನ, ಡ್ರಗ್ಸ್ ಮಾಫಿಯಾ ದ ಸುತ್ತ ಹೆಣೆದ ಕಥೆ ಎಂಬ ಸುಳಿವು ಸಿಕ್ಕಿತ್ತು. ಹಾಗಾಗಿಯೇ ಥ್ರಿಲ್ಲಿಂಗ್ ಎಲಿಮೆಂಟ್ ಹೊತ್ತ ಯೆಲ್ಲೋ ಗ್ಯಾಂಗ್ಸ್ ಮೇಲೆ ಸಿನಿಪ್ರಿಯರ ಚಿತ್ತ ನೆಟ್ಟಿತ್ತು. ಈಗ ಬಿಡುಗಡೆಗೊಂಡಿರೋ ಟ್ರೈಲರ್ ನೋಡಿದರೆ ಯಾರೇ ಆದರೂ ಮೈಮರೆಯುವಂತಿದೆ. ಈ ಸಿನಿಮಾಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುವಲ್ಲಿ ಈ ಟ್ರೈಲರ್ ಯಶ ಕಂಡಿದೆ.
ಯಾಕಂದ್ರೆ ಯೆಲ್ಲೋ ಗ್ಯಾಂಗ್ಸ್ ಚಿತ್ರವನ್ನ ನೋಡಲೇಬೇಕೆನಿಸೋ ರೋಚಕತೆಯ ದೃಶ್ಯ, ಡೈಲಾಗ್ ಗಳನ್ನ ಒಟ್ಟುಗೂಡಿಸಿ ಟ್ರೈಲರ್ ರೂಪಿಸಿದೆ ಚಿತ್ರತಂಡ. ಮೋಡಿ ಮಾಡುವ ಸಂಭಾಷಣೆ, ಬೆದರಿಕೆ ಕರೆಗಳು, ಚೇಸಿಂಗ್ ಸನ್ನಿವೇಶ, ಹಣಕ್ಕಾಗಿ ಹರಿಯುವ ರಕ್ತ, ಪೊಲೀಸ್ ಹೀಗೆ ಸಾಕಷ್ಟು ವಿಚಾರಗಳಿವೆ. ಟ್ರೈಲರ್ ಜನರಿಗೆ ಹಿಡಿಸಿತೆಂದರೆ, ಸಿನೆಮಾ ಅರ್ಧ ಗೆದ್ದಂತೆ. ಯಾಕಂದ್ರೆ ಒಟ್ಟು ಸಿನೆಮಾವನ್ನ ನಿಮಿಷಗಳಲ್ಲಿ ಹೇಳುವ ಮ್ಯಾಜಿಕ್ ನಡೆಯೋದು ಟ್ರೈಲರ್ ಮೂಲಕ ಮಾತ್ರ.
ಈ ವಿಚಾರದಲ್ಲಿ ಚೊಚ್ಚಲ ನಿರ್ದೇಶನದಲ್ಲೇ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಗೆದ್ದಂತಿದೆ. ವಿಭಿನ್ನ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿರುವ ಈ ಟ್ರೈಲರ್ ನ ದೃಶ್ಯಗಳೇ ಇದೊಂದು ಭಿನ್ನ ಜಾಡಿನ ಚಿತ್ರವೆಂಬುದನ್ನೂ ಸಾರಿ ಹೇಳಿವೆ. ನಿಖರವಾಗಿ ಹೇಳಬೇಕೆಂದರೆ, ಇದೊಂದು ಪಕ್ಕಾ ಪ್ರಾಮಿಸಿಂಗ್ ಟ್ರೈಲರ್.
ಡ್ರಗ್ ಡೀಲ್ ಸುತ್ತಾ ತೆರೆದುಕೊಂಡು, ಕಾಳಧನ ಕೇಂದ್ರಿತವಾಗಿ ಚಲಿಸುವ ಅಪರೂಪದ ಕಥಾನಕವನ್ನೊಳಗೊಂಡಿರುವ ಈ ಯೆಲ್ಲೋ ಗ್ಯಾಂಗ್ಸ್ ಗೆ ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ ಸಂಭಾಷಣೆ ಬರೆದಿದ್ದು , ತಾರಾಬಳಗದಲ್ಲಿ ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ರೋಹಿತ್ ಸೋವರ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಹ್ಯಾಂಡ್ ಹೆಲ್ಡ್ ತಂತ್ರಜ್ಞಾನದಲ್ಲಿ, ಸಾಕಷ್ಟು ಸವಾಲುಗಳನ್ನೆದುರಿಸಿ ಯೆಲ್ಲೋ ಗ್ಯಾಂಗ್ಸ್ ಅನ್ನು ಚಿತ್ರೀಕರಿಸಿ ಕಥೆಯ ತಾಜಾತನವನ್ನ ಕಾಪಾಡಿಕೊಳ್ಳಲಾಗಿದೆ. ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಜೊತೆಗೂಡಿ ಯೆಲ್ಲೋ ಗ್ಯಾಂಗ್ಸ್ ಅನ್ನು ನಿರ್ಮಾಣ ಮಾಡಿದ್ದು, ಮನೋಜ್ ಪಿ, ಜಿ.ಎಂ.ಆರ್ ಕುಮಾರ್(ಕೆವಿಜಿ), ಪ್ರವೀಣ್ ಡಿ.ಎಸ್ ಮತ್ತು ಜೆ.ಎನ್.ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಹಣ ಹೂಡಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ಇವಲ್ಲೆರ ಪರಿಶ್ರಮದ ಯೆಲ್ಲೋ ಗ್ಯಾಂಗ್ಸ್ ಇದೇ ನವೆಂಬರ್ ೧೧ ರಂದು ತೆರೆಕಾಣಲಿದೆ.