ನೆಲಮಂಗಲ: ಪಟ್ಟಣದ ಜಕ್ಕಸಂದ್ರ ರಸ್ತೆಯ ಯೆಲ್ಲೋ ಎಕ್ಸ್‌ಪ್ರೆಸ್ ಸ್ಪೆಷಲ್ ಎಡಿಷನ್ ಫೋಕ್ಸ್‌ವೇಗನ್ ಹೆಸರಿನ ಕಂಪನಿ, ಸಾರ್ವಜನಿಕರಿಗೆ ಮೋಸ ಮಾಡುತ್ತಿದೆ ಎಂಬ ಆರೋಪ ಹೆಚ್ಚಾದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಹಿಂದಿನ ಉಪವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿತ್ತು. ಆದರೆ ಕಾರ್ಯಾಚರಣೆ ನಡೆಸಿ ತಿಂಗಳಾದರೂ ಮಾಹಿತಿ ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ದಿಢೀರ್ ದಾಳಿ: ಜು.22ರ ಬೆಳಗ್ಗೆ 9ರಿಂದ ರಾತ್ರಿ 8 ರವರೆಗೂ ಸುದೀರ್ಘವಾಗಿ ಪರಿಶೀಲನೆ ಮಾಡಿ, ದಾಖಲಾತಿ ವಶಕ್ಕೆ ಪಡೆದ ಅಧಿಕಾರಿಗಳು, ಪಟ್ಟಣದ ಹಾಲಿ ಡೇ ಫಾರ್ಮ್ ಹೌಸ್‌ನಲ್ಲಿ ಹಿಂದಿನ ಜಿಲ್ಲಾಧಿಕಾರಿ ಕರೀಗೌಡರ ಜೊತೆ ಚರ್ಚೆ ಮಾಡಿ, ಯೆಲ್ಲೋ ಎಕ್ಸ್‌ಪ್ರೆಸ್ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಜತೆಗೆ ತನಿಖೆ ನಡೆಸಬೇಕು.
ಆರೋಪಿಗಳು ತಪ್ಪಿಸಿಕೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಕರೀಗೌಡರು ಮಾಧ್ಯಮ ಪ್ರತಿನಿಧಿಗಳ ಬಳಿ ಸುದ್ದಿ ಪ್ರಕಟವಾಗದಂತೆ ಮನವಿ ಮಾಡಿದ್ದರು. ಸಾಮಾಜಿಕ ಕಳಕಳಿಯಿಂದ ಮನವಿಗೆ ಮನ್ನಣೆ ಕೊಟ್ಟರೆ ಆದರೆ ಈಗ ಜಿಲ್ಲಾಧಿಕಾರಿ ಕರೀಗೌಡ ವರ್ಗಾವಣೆಯಾಗಿದ್ದಾರೆ. ಜತಗೆ ಮಾಹಿತಿಯನ್ನೂ ಬಹಿರಂಗೊಳಿಸಿಲ್ಲ. ಹೀಗಾಗಿ ಯೆಲ್ಲೋ ಎಕ್ಸಪ್ರಸ್ ಕುರಿತ ಪ್ರಕರಣದ ಸ್ಥಿತಿ ಹೇಗಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
ಏನಿದು ಯೆಲ್ಲೋಎಕ್ಸ್‌ಪ್ರೆಸ್?: ಪಟ್ಟಣದ ಜಕ್ಕಸಂದ್ರ ರಸ್ತೆಯಲ್ಲಿ ಪ್ರಾರಂಭವಾಗಿರುವ ಈ ಕಂಪನಿಗೆ ರಾಜ್ಯದ ಮೂಲೆಮೂಲೆಗಳಿಂದ ಹೂಡಿಕೆದಾರರಿದ್ದಾರೆ. ಈ ಕಂಪನಿಯು ಕಾರ್‌ಗಳನ್ನು ಗುತ್ತಿಗೆಯೋಜನೆಯ ಮೂಲಕ 2.50 ಲಕ್ಷ ರೂ. ಡೌನ್‌ಪೇಮೆಂಟ್ ಪಾವತಿಸಿಕೊಂಡು, ಹೂಡಿಕೆದಾರರ ಹೆಸರಿನಲ್ಲಿ ಕಾರನ್ನು ನೋಂದಾಯಿಸುತ್ತದೆ. ಅಲ್ಲದೆ 4 ವರ್ಷದವರೆಗೆ ಹೂಡಿಕೆದಾರನಿಗೆ ಪ್ರತಿ ತಿಂಗಳು 10 ಸಾವಿರ, ಗುತ್ತಿಗೆ ಮುಗಿದ ನಂತರ 2.50 ಲಕ್ಷ ವಾಪಸ್ ನೀಡುತ್ತದೆ. ಈಗಾಗಲೇ ಕಂಪನಿಗೆ 2 ಸಾವಿರಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಸತ್ಯ ಮರೆ ಮಾಚಿದರೇ?: ಐಎಂಎ ಪ್ರಕರಣ ಮರುಕಳಿಸಬಾರದು ಎಂದು 2.50 ಲಕ್ಷ ಹೂಡಿಕೆ ಮಾಡಿಕೊಳ್ಳುತ್ತಿದ್ದ ಕಂಪನಿ ಮೇಲೆ ದಾಳಿ ನಡೆಸಿದ ಎಸಿ ಹಾಗೂ ಪೊಲೀಸರ ತಂಡ 10 ಗಂಟೆಗಳ ಕಾಲ ಪರಿಶೀಲನೆ ಮಾಡಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಜಿಲ್ಲಾಧಿಕಾರಿ ಈ ದಾಳಿಯ ಹಿನ್ನಲೆ ತಾಲೂಕಿಗೆ ಧಾವಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಪೊಲೀಸ್ ಇಲಾಖೆಗೆ ಕಂಪನಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿ, ಕಾರು ರಸ್ತೆಗೆ ಬಂದರೆ ವಶಕ್ಕೆ ಪಡೆಯಿರಿ, ಯಾರೊಬ್ಬರು ಮತ್ತೆ ಹೂಡಿಕೆ ಮಾಡದಂತೆ ನೋಡಿಕೊಳ್ಳಿ ಎಂದು ಹಾಲಿ ಡೇ ಪಾರ್ಮ್ ಹೌಸ್‌ನ ಬಹಿರಂಗಸಭೆಯಲ್ಲಿ ಹೇಳಿದ್ದರು. ಆದರೆ ಈಗ ಅಧಿಕಾರಿಗಳ ಮೇಲೆ ಸಂದೇಹ ಮೂಡುತ್ತಿದ್ದು, ಪ್ರಕರಣ ಮುಚ್ಚಿಹಾಕುವುದಕ್ಕೆ ಯತ್ನ ನಡೆಯುತ್ತಿದೆಯೇ? ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಸತ್ಯ ಮರೆಮಾಚಲಾಗುತ್ತಿದೆಯೇ ಎಂಬ ಸಂದೇಹ ಮೂಡುತ್ತಿದೆ.
ಮತ್ತೊಂದು ಐಎಂಎ ಪ್ರಕರಣವೇ?: ರಾಜ್ಯರಾಜಧಾನಿಯಲ್ಲಿ ರಾಜಕಾರಣಿಗಳ ಕರಿನೆರಳಿನಲ್ಲಿ ರಾಜರೋಷವಾಗಿ ಕಂಪನಿ ನಡೆಸುತ್ತಿದ್ದ ಬಹುಕೋಟಿ ವಂಚನೆ ಐಎಂಎ ಕಂಪನಿ ನಿಜ ಬಣ್ಣ ಬಯಲಾಗುತಿದ್ದಂತೆ ಪ್ರಕರಣಕ್ಕೆ ಸಂಬಂಧಪಟ್ಟ ತಹಶೀಲ್ದಾರ್, ಉಪ ಆಯುಕ್ತರು, ಜಿಲ್ಲಾಧಿಕಾರಿ ಬಂಧನಕ್ಕೊಳಗಾದರು. ಅದೇ ರೀತಿ ಯೆಲ್ಲೋ ಎಕ್ಸ್‌ಪ್ರೆಸ್ ಕಂಪನಿಯಲ್ಲಿ ಮೋಸವಾಗಿದೆ ಎಂದು ಜಿಲ್ಲಾಧಿಕಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ ಪರಿಣಾಮವೇ ಮಾಧ್ಯಮದವರನ್ನು ಮನವಿಮಾಡಿ ಪೊಲೀಸರಿಗೆ ಆದೇಶ ನೀಡಿದ್ದರು. ಈ ಕಂಪನಿ ಅಧ್ಯಕ್ಷ ನಿವೃತ್ತ ಕೆಎಸ್‌ಪಿಎಸ್ ಪೊಲೀಸ್ ಅಧಿಕಾರಿಯಾಗಿದ್ದು, ಹೀಗಾಗಿ ಇನ್ನೊಂದು ಐಎಂಎ ಪ್ರಕರಣವೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ತನಿಖೆಯ ವರದಿ ಯಾವಾಗ?: ಕಂಪನಿಯ ಮೇಲೆ ದಾಳಿ ಮಾಡಿ ತಿಂಗಳಾದರೂ ಅಧಿಕಾರಿಗಳು ವರದಿ ಬಹಿರಂಗಗೊಳಿಸಿಲ್ಲ. ಕಂಪನಿ ಕಾರ್ಯಚಟುವಟಿಕೆ ಯಥಾಸ್ಥಿತಿಯಂತೆ ಮುಂದುವರೆದಿದೆ. ಉತ್ಸಾಹದಿಂದ ದಾಳಿ ಮಾಡಿದ ಅಧಿಕಾರಿಗಳು ಆರೋಪಿಗಳ ಉಪಹಾರದಿಂದ ಸುಮ್ಮನಾದರೇ? ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಬೆಂಗಳೂರು ಗ್ರಾಮಾಂತರ ಡಿಸಿ ಹಾಗೂ ಎಸಿಯಾಗಿ ಬಂದಿರುವ ಅಧಿಕಾರಿಗಳು ಶೀಘ್ರದಲ್ಲಿ ತನಿಖೆಯ ವರದಿ ಬರಂಗಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ತನಿಖೆಗೆ ಎಸಿ ಸೂಚಿಸಿದ್ದಾರೆ. ತಪ್ಪು ಯಾರೇ ಮಾಡಿದರೂ ಸರಿ, ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
-ರವಿ.ಡಿ.ಚೆನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪಟ್ಟಣದ ಯೆಲ್ಲೋ ಎಕ್ಸ್‌ಪ್ರೆಸ್ ಕಂಪನಿ ಮೇಲೆ ದಾಳಿ ನಡೆಸಿ, ಸತ್ಯತೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡದಿರುವುದು ಬೇಸರ ತಂದಿದೆ. ತಕ್ಷಣ ತನಿಖೆಯ ವರದಿ ಬಹಿರಂಗ ಗೊಳಿಸಬೇಕು. ಮತ್ತೊಂದು ಐಎಂಎ ಪ್ರಕರಣವಾಗದಂತೆ ಎಚ್ಚರವಹಿಸಬೇಕು.
-ಗಂಗಾಧರ್, ಸ್ಥಳೀಯ ನಿವಾಸಿ