“ಯೆಲ್ಲೋ ಬೋರ್ಡ್’- ಹೀಗೊಂದು ಸಿನಿಮಾದ ಹೆಸರು ನೀವು ಕೇಳಿರಬಹುದು. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.
ಈ ಹಿಂದೆ “ಫಸ್ಟ್‌ರ್‍ಯಾಂಕ್ ರಾಜು’ ಮತ್ತು “ರಾಜು ಕನ್ನಡ ಮೀಡಿಯಂ’ ಮೊದಲಾದ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ, ಹಲವು ಶಾರ್ಟ್ ಫಿಲಂಗಳನ್ನು ನಿರ್ದೇಶಿಸಿರುವ ತ್ರಿಲೋಕ್ ರೆಡ್ಡಿ “ಯೆಲ್ಲೋ ಬೋರ್ಡ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ವಿಂಟೇಜ್ ಫಿಲಂಸ್’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.
ಕನ್ನಡದಲ್ಲಿ “ಜಾಲಿಡೇಸ್’, “ಟೈಗರ್’ ಚಿತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ಪ್ರದೀಪ್ “ಯೆಲ್ಲೋ ಬೋರ್ಡ್’ ಚಿತ್ರದಲ್ಲಿ ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಡ್ರೈವರ್ ಪಾತ್ರ ಮಾಡಿರುವ ಪ್ರದೀಪ್ ಪಾತ್ರಕ್ಕಾಗಿ ಸಾಕಷ್ಟು ಬಾರಿ ಕ್ಯಾಬ್-ಟ್ಯಾಕ್ಸಿಗಳಲ್ಲಿ ಓಡಾಡಿದ್ದಾರಂತೆ. ಇಡೀ ಸಿನಿಮಾದ ಕಥೆ ಡ್ರೈವರ್ ಒಬ್ಬನ ಸುತ್ತ ನಡೆಯಲಿದೆಯಂತೆ. ಹಾಗಾಗಿ ಡ್ರೈವರ್‌ಗಳ ಲೈಫ್ ಸ್ಟೈಲ್, ಅವರ ಮಾತುಕತೆ, ಬಾಡಿ ಲಾಂಗ್ವೇಜ್, ಮ್ಯಾನರಿಸಂ ತಿಳಿದುಕೊಳ್ಳುವ ಸಲುವಾಗಿ ಪ್ರದೀಪ್ ಅನೇಕ ಬಾರಿ ಕ್ಯಾಬ್-ಟ್ಯಾಕ್ಸಿಗಳಲ್ಲಿ ಓಡಾಟ ಮಾಡುತ್ತಿದ್ದರು. ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ಹೋಮ್ ವರ್ಕ್ ಮಾಡಿದ್ದ ಪ್ರದೀಪ್, ಕೊನೆಗೂ ಕ್ಯಾಬ್ ಡ್ರೈವರ್ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ ಎನ್ನುತ್ತದೆ ಚಿತ್ರತಂಡ.
ಪ್ರದೀಪ್ ಜೊತೆಗೆ ಅಹಲ್ಯಾ ಸುರೇಶ್, ಸ್ನೇಹಾ, ಸಾಧುಕೋಕಿಲ, ಅಮಿತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಹುಭಾಗ ಬೆಂಗಳೂರಿನಲ್ಲೇ ಚಿತ್ರೀಕರಿಸಿರುವ ಚಿತ್ರತಂಡ, ಒಂದು ಹಾಡನ್ನು ಗೋಕರ್ಣದಲ್ಲಿ ಚಿತ್ರೀಕರಿಸಿದೆ. ಸದ್ಯ ನಿಧಾನವಾಗಿ “ಯೆಲ್ಲೋ ಬೋರ್ಡ್’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಶೀಘ್ರದಲ್ಲಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ