Advertisement

ಚೂರಿಯಂಥ ಕೊಕ್ಕಿನ ಹಳದಿ ಗುಪ್ಪಿ 

09:56 AM Oct 06, 2018 | |

 ಇದು ನೀರು ಹಕ್ಕಿ. ಕೊಳದ ಬಕ ಹಕ್ಕಿಗೂ ಇದಕ್ಕೂ ತುಂಬಾ ಹೋಲಿಕೆ ಇದೆ. ಆದರೆ ಕೊಳದ ಬಕ ಕುಳಿತು ಕೊಳ್ಳುವ ರೀತಿ, ಅದರ ಮೈ ಬಣ್ಣ, ಬೆನ್ನು ಮತ್ತು ಕುತ್ತಿಗೆಯಲ್ಲಿಯ ಗೆರೆ ಕಂದು ಬಣ್ಣದಿಂದ ಕೂಡಿದೆ.  ಹಳದಿ ಗುಪ್ಪಿಯ ಮೈಮೇಲಿನ ಗೆರೆ ತಿಳಿ ಕಂದು ಇದ್ದು,  ಹಳದಿ ಛಾಯೆಯಿಂದ ಕೂಡಿರುತ್ತದೆ. Yellow bittern (Lxobrychus sinensis  (Gmelin) RM -Indian Pond heron+, Village hen ಹಾರುವಾಗ, ಇದರ ರೆಕ್ಕೆಯ ಅಂಚು ಮತ್ತು ಅಡಿಯಲ್ಲಿ ಕಾಣುವ ಕಂದುಕಪ್ಪು, ಹಳದಿ ಬಣ್ಣದಿಂದಲೇ ಗುಪ್ಪಿಯನ್ನು ಗುರುತಿಸಬಹುದು. ಜೌಗು, ಕೆಸರು, ಗಜನಿ, ಬತ್ತದ ಗದ್ದೆ, ನೀರು ಹರಿಯುವ ಕೊಳೆ, ಮಳೆಗಾಲದಲ್ಲಿ ನೀರು ತುಂಬಿದ ತೇಲು ಸಸ್ಯ ಗಳಾದ ಕವಳೆ, ಜೊಂಡು ಹುಲ್ಲು, ಕಮಲ ಮೊದಲಾದ ಜಲಸಸ್ಯಗಳು ಇರುವ ಹಳ್ಳ ಕೆರೆಗಳ ಸಮೀಪ  ಇರುತ್ತದೆ. 

Advertisement

ಇದು ಸ್ವಲ್ಪ ಸಂಕೋಚದ ಹಕ್ಕಿ.  ಧ್ಯಾನಾಸಕ್ತವಾದಂತೆ ಸುಮ್ಮನೆ ಕುಳಿತಿರುತ್ತವೆ.  ಬೇಟೆ ಸಮೀಪಕ್ಕೆ ಬಂದ ತಕ್ಷಣ  ಕೊಡಲಿಯಂತಿರುವ ತನ್ನ ಚುಂಚಿನಿಂದ ಇರಿದು, ಮೀನು, ಕೀಟ, ಮೃದ್ವಂಗಿಗಳನ್ನು ಬೇಟೆಯಾಡುವುದು ಸಾಮಾನ್ಯ. 

ಕೆಲವೊಮ್ಮೆ ಮೆಂಗ್ರೋ ಗಿಡಗಳ ಸಂದಿಯಲ್ಲಿ ಅಡಗಿ ಕುಳಿತು ಬೇಟೆ ಬಂದ ತಕ್ಷಣ ಎರಗಿ ಹಿಡಿದು ತಿನ್ನುತ್ತದೆ. ಯಾರಾದರೂ ಹತ್ತಿರ ಬಂದರೆ ಗಾಬರಿಯಿಂದ  ಕೂಗುತ್ತಾ ಹಾರಿ ಮರೆಯಾಗುವುದು. 

ಕೊಳದ ಬಕಕ್ಕಿಂತ ಇದರ ಕುತ್ತಿಗೆ ಚಿಕ್ಕದು. ರೆಕ್ಕೆಯ ಅಗಲ 45-55 ಸೆಂ.ಮೀ ಇದೆ. 80 ರಿಂದ 100 ಗ್ರಾಂ ಭಾರ ಇರುತ್ತದೆ. ಚಿಕ್ಕ ಕುತ್ತಿಗೆ ಇದ್ದರೂ ಭರ್ಚಿಯಂತಿರುವ ಉದ್ದ ದಪ್ಪ ಕೊಕ್ಕು ಇದಕ್ಕಿದೆ. ಗಂಡು ಹಕ್ಕಿ ಹಳದಿಛಾಯೆಯ ಮಸಕು ಕಂದು ಬಣ್ಣದಿಂದ ಕೂಡಿದೆ. ಚುಂಚನ್ನು ಅಗಲಿಸಿದಾಗ ಒಳಗಡೆ ಕುತ್ತಿಗೆಯಲ್ಲಿರುವ ಭಾಗ ಮತ್ತು ನಾಲಿಗೆಯ ಗುಲಾಬಿ ಬಣ್ಣ ಕಾಣುತ್ತದೆ. ಈ ಮಾಂಸಖಂಡಗಳಿಂದ ಕೂಗಲು ಮತ್ತು ಮರಿಮಾಡುವ ಸಮಯದಲ್ಲಿ ಹೆಣ್ಣಿನ ಜೊತೆ ಸಂಭಾಷಿಸಲು ಸಹಾಯಕವಾಗಿದೆ.  ಇದರ ಬಾಲದ ರಚನೆ ಒತ್ತೂತ್ತಾದ ಗರಿಗಳಿಂದ ಕೂಡಿದೆ. 

Advertisement

ಕೆಸರಿನ ಸಸ್ಯಗಳಾದ ಕವಳೆ, ಜೊಂಡು ಹುಲ್ಲು ಇರುವ ಪ್ರದೇಶವನ್ನೆ ಆರಿಸಿಕೊಂಡು ಅಲ್ಲಿಯೇ ಗೂಡು ಕಟ್ಟುವುದು ಈ ಹಕ್ಕಿಯ ವೈಶಿಷ್ಟé.  ಹುಲ್ಲಿನ ದಂಟನ್ನು ಸೇರಿಸಿ, ಅಟ್ಟಣಿಗೆ ನಿರ್ಮಿಸುತ್ತದೆ. ಅದರ ಮೇಲೆ ಮೆತ್ತನೆ ಹಾಸು ಹಾಕಿ,  ಜಲಸಸ್ಯಗಳ ಎಲೆ ಇರಿಸಿ,  ಅದರ ಮೇಲೆ ಹುಲ್ಲಿನ ಹಾಸು ಹಾಕಿ ಗೂಡು ರಚಿಸುತ್ತದೆ.  ಇರುನೆಲೆ ಘೋಷಿಸಲು ಬೇರೆ, ಬೇರೆ, ದನಿ ಹೊರಡಿಸುತ್ತದೆ.  ಜುಟ್ಟನ್ನು ಕುಣಿಸುವುದು, ಒಂದು ರೆಕ್ಕೆ ಎತ್ತಿ ಸುತ್ತುವುದು, ಬಾಲವನ್ನು ನಿಮಿರಿಸುವುದು ಮುಂತಾದ ಪ್ರಣಯ ಚಟುವಟಿಕೆ ತೋರ್ಪಡಿಸುತ್ತದೆ. 

 ಈ ಹಕ್ಕಿ ಒಂದೊಂದು ದಿನ ಒಂದು ಮೊಟ್ಟೆ ಇಡುತ್ತದೆ. ಮೊದಲಿಟ್ಟ ಮೊಟ್ಟೆ ಮೊದಲು ಮರಿಯಾಗುವುದು. ಗಂಡು -ಹೆಣ್ಣು 3 ವಾರಗಳ ವರೆಗೆ ಕಾವುಕೊಡುವ ಕೆಲಸದಲ್ಲಿ ನಿರತವಾಗಿರುತ್ತವೆ. 19 ಅಥವಾ 17- 20 ದಿನ ಕಾವು ಕೊಡುವ ಸಮಯ. ಮೊಟ್ಟೆ ಒಡೆದು ಹೊರಬಂದ ಮರಿ ತಿಳಿ ಗುಲಾಬಿ ಬಣ್ಣ ಇರುತ್ತದೆ. 15 ದಿನಗಳವರೆಗೆ ಗೂಡಿನ ಹುಲ್ಲಿನ ಹಚ್ಚಡದ ಮೇಲೆ ಏರುವುದು. ಕೆಳಗೆ ಇಳಿಯುವುದು ಹೀಗೆ ಆಟವಾಡುತ್ತದೆ.  ಸುಮಾರು 20 ದಿನ ಮರಿ ತನ್ನ ಬಾಲ್ಯಾವಸ್ಥೆ ಚಟುವಟಿಕೆಯಲ್ಲಿ ಕಳೆಯುವುದು.

ಪಿ.ವಿ.ಭಟ್‌ ಮೂರೂರು   

Advertisement

Udayavani is now on Telegram. Click here to join our channel and stay updated with the latest news.

Next