Advertisement
ಮರಹಕ್ಕಿ, ಬಿಳಿಹೊಟ್ಟೆ ಕದಗ , ಕಾಗೆ ಗುಂಪಿಗೆ ಸೇರಿದ ವಿಶೇಷ ಗುಣವುಳ್ಳ ಹಕ್ಕಿಯೇ ಈ ಉದ್ದ ಬಾಲದ ಮೆಗೆಪೈ ಉರುಫ್ ಮೆಗೆಪಿ ಹಕ್ಕಿ. ಇದರ ಬಾಲ ತುಂಬಾ ಉದ್ದ ಇದೆ. ಅಂದರೆ ಸುಮಾರು 46 ಸೆಂ.ಮೀ. ಉದ್ದ ಇದೆ. ಬಾಲದ ಮೇಲೆ ಎರಡು ಉದ್ದದ ಗೆರಿಗಳಿವೆ. ಈ ಹಕ್ಕಿ ಗರಿ ಬಿಚ್ಚಿ ನಿಂತರೆ, ಅದು ತೆರೆದರೆ ನವಿಲನ್ನು ನೆನಪಿಸುತ್ತದೆ. ಬಾಲದ ಅಡಿಯಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಗರಿಯ ಜೊತೆಗೆ ಬಾಲದಲ್ಲಿ ಮೇಲಿನಿಂದ ಕೆಳಗಡೆಗೆ ಸಮಾನಾಂತರವಾಗಿ -ಕಪ್ಪು ಬಣ್ಣದ ಪಟ್ಟಿ ಕೂಡ ಇದೆ. ಈ ಕಪ್ಪು ಪಟ್ಟಿ ಸುಮಾರು ಒಂದು ಇಂಚಿನಷ್ಟಿರುತ್ತದೆ. ಇಡೀ ಹಕ್ಕಿ ಆಕರ್ಷಕವಾಗಿ ಕಾಣುವುದು ಇದೇ ಕಾರಣಕ್ಕೆ. ಹೊಟ್ಟೆ ಮತ್ತು ತಲೆಯ ಮೇಲಿರುವ ಬಿಳೀಬಣ್ಣದಿಂದಲೇ ಇದು ಮೆಗಪಿ ಹಕ್ಕಿ ಅಂಥ ಗುರುತಿಸಲು ಸುಲಭವಾಗಿರುವುದು.
Related Articles
ತೇರಿ-ಗರ್ವಾಲಿ, ಕುಮಾನ್, ನೇಪಾಳದಲ್ಲಿ ಕೆಂಪು ಚುಂಚಿರುವ ಮತ್ತು ನೆತ್ತಿಯ ಕೆಳಗಿರುವ ಬಿಳಿಬಣ್ಣದ ಮೆಗಪಿಗಳೇ ಹೆಚ್ಚು. ಮರದಿಂದ ಮರಕ್ಕೆ ಹಾರುವಾಗ ಇದರ ರೆಕ್ಕೆಗಳು ಬಣ್ಣದ ಬೀಸಣಿಕೆಯಂತೆ ಕಾಣುತ್ತವೆ. ರೆಕ್ಕೆಯಲ್ಲಿರುವ ತಿಳಿನೀಲಿ, ಬಿಳಿ, ಬದನೆಕಾಯಿ ಬಣ್ಣ ಮಿಶ್ರಿತ ಹೊಳೆವ ನೀಲಿ ಬಣ್ಣ ಮತ್ತು ರೆಕ್ಕೆಯ ಅಡಿಯಲ್ಲಿರುವ ತಿಳಿ ಬಿಳಿ ಸಹ ಎದ್ದು ಕಾಣುತ್ತದೆ. ಗಾಳಿಯಲ್ಲಿ ಹಾರುವಾಗ ಉದ್ದದ ಬಾಲ ಗಾಳಿಪಟದ ಬಾಲಂಗೋಚಿಯಂತೆ ಕಾಣಿಸುತ್ತದೆ. ಹುಲ್ಲುಗಾವಲ್ಲಿ ಇರುವ -ಹುಲ್ಲು ಬಣ್ಣದ ಮಿಡತೆ ಇತ್ಯಾದಿಗಳನ್ನು ಇದು ಸ್ವಲ್ಪ ದೂರ ಹಾರಿ- ಗಾಬರಿಗೊಳಿಸಿ, ಅದರ ಮೇಲೆ ಜಿಗಿದು ಹಿಡಿದು ತಿನ್ನುತ್ತದೆ. ಚಿಕ್ಕ ಮೃದ್ವಂಗಿ, ಕೆಲವು ಚಿಕ್ಕ ಹಕ್ಕಿಗಳ ಮೊಟ್ಟೆ, ದುರ್ಬಲ ಮರಿಗಳನ್ನು ಸಹ ಇದು ಕಬಳಿಸುವುದಿದೆ. ಇದು ಸಾಮಾನ್ಯವಾಗಿ 4 ಇಲ್ಲವೇ 10ರ ಗುಂಪಿನಲ್ಲೂ ಕಾಣಸಿಗುತ್ತದೆ. ಒಣ ಹವೆ ಹೆಚ್ಚಿರುವ ಭಾಗದಲ್ಲೇ ಹೆಚ್ಚಾಗಿ ವಾಸವಿರುತ್ತದೆ. ಎತ್ತರದ ಮರದ ಟಿಸಿಲಿನಲ್ಲಿ ಬಟ್ಟಲಿನ ಆಕಾರದ ಗೂಡು ನಿರ್ಮಿಸಿ ಅದರ ಹೊರಮೈಗೆ ಮಣ್ಣಿನಂಥ ಪದಾರ್ಥದಿಂದ ಗಿಲಾವು ಮಾಡಿ ಭದ್ರ ಪಡಿಸುತ್ತದೆ. ಮೇ ಯಿಂದ ಜುಲೈ ಇದು ಮರಿಮಾಡುವ ಸಮಯ. ಬಟ್ಟಲಿನಾಕಾರದ ಗೂಡಿನಲ್ಲಿ ಮಧ್ಯೆ ನಾರು ಬಳಸಿ ಮೆತ್ತನೆ ಹಾಸನ್ನು ಹಾಕುತ್ತದೆ. ಒಂದು ಸಲಕ್ಕೆ 3-4 ಮೊಟ್ಟೆ ಇಡುತ್ತದೆ. ಕಾವು ಕೊಡುವುದು, ಮರಿಗಳ ರಕ್ಷಣೆಯ ಕೆಲಸವನ್ನು ಗಂಡು -ಹೆಣ್ಣು ಸೇರಿ ನಿರ್ವಹಿಸುತ್ತದೆ.
Advertisement