ಸವದತ್ತಿ: ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನದ ಸಭಾಭವನದಲ್ಲಿ ಮಂಗಳವಾರ ನೂತನವಾಗಿ ಆಯ್ಕೆಯಾದ ವ್ಯವಸ್ಥಾಪನಾ ಸಮಿತಿಯ ಮೊದಲ ಸಭೆ ಜರುಗಿತು. ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹಾಗೂ ನೂತನ ಸದಸ್ಯರಿಂದ ಬಸಯ್ಯ ಈರಯ್ಯ ಹೀರೆಮಠ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಬಳಿಕ ಮಾತನಾಡಿದ ಮಾಮನಿ, ಸದಸ್ಯರ ನೇಮಕಾತಿ ವಿಷಯದಲ್ಲಿ ಧಾರ್ಮಿಕದತ್ತಿ ನಿಯಮಗಳ ಮೂಲಕ 9 ಜನ ಸದಸ್ಯರ ಆಯ್ಕೆ ಮಾಡಿ ಸರಕಾರ ಆದೇಶಿಸಿದೆ. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸ್ಥಾನಕ್ಕೆ ಯಾವುದೇ ಪಕ್ಷದ ಪದಾಧಿಕಾರಿಗಳ ಆಯ್ಕೆಯಾಗಬಾರದೆಂದು ಕೆಲ ಸಮಯಪ್ರಜ್ಞೆ ಇಲ್ಲದ ವಿರೋಧಿಗಳು ಅರ್ಜಿ ಸಲ್ಲಿಸಿದ್ದು, ಸರಕಾರ ಈ ಕುರಿತು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಈ ಸಮಿತಿಯ ಮೊದಲ ಸಭೆ ನಡೆಸಲಾಗಿದೆ.
ನೌಕಕರ ನೇಮಕಾತಿ ಕುರಿತು ಕೆಲ ಊಹಾಪೋಹಾಗಳಿವೆ. ಹೊಸ ನೇಮಕಾತಿಗೆ ಅವಕಾಶವಿಲ್ಲ. ಆದರೆ ಸದ್ಯದ ನೌಕಕರ ಮೇಲೆ ಭಕ್ತಾಧಿಗಳಿಗೆ ಸೌಕರ್ಯ ಮಾಡಿಕೊಡಲಾಗುವದು. ದೇವಸ್ಥಾನದ ಮೂರು ನಾಕಾಗಳಲ್ಲಿ ಸಿಬ್ಬಂದಿಗಳನ್ನು ಹೊರತು ಪಡಿಸಿ ಉಳಿದ ವ್ಯಕ್ತಿಗಳು ಹಣ ವಸೂಲಾತಿ ಮಾಡುತ್ತಿದ್ದಾರೆ. ನಾಕಾಗಳಲ್ಲಿ ಸಿಸಿ ಕ್ಯಾಮಾರ ಅಳವಡಿಸಿ ಬೇರೆ ವ್ಯಕ್ತಿಗಳಿಂದ ಹಣ ವಸೂಲು ಮಾಡದಂತೆ ತಡೆಯಿರಿ. ಇಲ್ಲವಾದರೆ ಇದಕ್ಕೆ ನಾಕಾ ಮೇಲ್ವಿಚಾರಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ನೇರ ಹೊಣೆಯಾಗುತ್ತೀರಿ.
ದೇವಸ್ಥಾನದ ನಿವೃತ್ತ ಸಿಬ್ಬಂದಿಗಳು ತಮ್ಮ ಸೇವಾವಧಿ ಮುಗಿದರೂ ಸಹ ನೌಕರಿಗೆ ಹಾಜರಾಗುತ್ತಿದ್ದಾರೆ. ಅಂತವರನ್ನು ಸೇವೆಯಿಂದ ಮುಕ್ತಗೊಳಿಸಿ. ನಿವೃತ್ತಿಯ ನಂತರವೂ ಕಾನೂನು ಹೋರಾಟದ ಮೂಲಕ ನೌಕರಿ ಮುಂದುವರೆಸುತ್ತಿರುವವರ ಕುರಿತು ನ್ಯಾಯಾಲಯದಲ್ಲಿ ಉತ್ತರಿಸಿ, ಅ.30ರ ಒಳಗೆ ಅಂತಹ ನೌಕಕರನ್ನು ಕೈಬಿಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿಗೆ ಆದೇಶಿಸಿದರು.
ನೂತನ ಅಧ್ಯಕ್ಷರ ಮೇಲೆ ಮಹತ್ತರವಾದ ಜವಾಬ್ದಾರಿಯಿದ್ದು, ಭಕ್ತಾಧಿಗಳಿಗೆ ಮೂಲಸೌಕರ್ಯ ಸೇರಿದಂತೆ ದೇವಸ್ಥಾನದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ. ಅರ್ಚಕ ಪ್ರತಿನಿಧಿಯಾಗಿ ಕೊಳ್ಳಪ್ಪಗೌಡ ಗಂದಿಗವಾಡ ನೇತೃತ್ವದಲ್ಲಿ ಅರ್ಚಕ ಸಮುದಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವದು ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹೀರೆಮಠ ಮಾತನಾಡಿ, ಸಮಿತಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಶಾಸಕ ಆನಂದ ಮಾಮನಿ ಹಾಗೂ ಸದಸ್ಯರಿಗೆ ಕೃತಜ್ಞನಾಗಿರುವೆ. ದೇವಸ್ಥಾನದ ಅಭಿವೃದ್ಧಿಗಾಗಿ ಶಾಸಕರ ಮುಂದಾಳತ್ವದಲ್ಲಿ ಶ್ರಮಿಸುವದಾಗಿ ತಿಳಿಸಿದರು.
ಈ ವೇಳೆ ಸದಸ್ಯ ವೈ. ಕಾಳಪ್ಪನವರ, ಲಕ್ಷ್ಮೀ ಸಿ. ಹೂಲಿ, ಈರಣ್ಣ ಚಂದರಗಿ, ರಮೇಶ ಗೋಮಾಡಿ, ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನ ಚೋಳಿನ, ರಾಜೇಂದ್ರ ಬೆಳವಡಿ, ನೆಹರು ಬಡೆಪ್ಪನವರ, ಶರೀಫಸಾಬ ಬಾರಿಗಿಡದ ಹಾಗೂ ನೂತನ ಸದಸ್ಯರು ಇದ್ದರು.