ಯಳಂದೂರು: ತಾಲೂಕಿನ ಬಹುತೇಕ ಶಾಲೆಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಶಾಲೆಗಳು ಜೂಜಾಟ ತಾಣಗಳಾಗಿ ಮಾರ್ಪಟ್ಟಿವೆ ಎಂದು ತಾಲೂಕು ಪಂಚಾಯ್ತಿ ಸದಸ್ಯರು ದೂರಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳ ವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯರು, ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಶಾಲೆಗಳಲ್ಲಿ ಪೊಲೀಸರು ಗಸ್ತು ತಿರುಗಿ ಕಿಡಿಗೇಡಿಗಳ ವಿರುದ್ಧಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಸ್ವಿಫ್ಟ್ ಕಾರೊಂದು ಕೂಲಿಂಗ್ ಹಾಕಿಕೊಂಡುಅಕ್ರಮ ಮದ್ಯ ಸಾಗಿಸಿ ಗ್ರಾಮೀಣ ಭಾಗದಲ್ಲಿ ಅಂಗಡಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೈ. ಕೆ.ಮೋಳೆ ನಾಗರಾಜು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್‌ಐ ರವಿಕುಮಾರ್, ಅಕ್ರಮ ಮದ್ಯ ಸಾಗಾಟಸೇರಿದಂತೆ ಸದಸ್ಯರು ನೀಡಿರುವ ದೂರುಗಳ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದರು.
ಪಿಂಚಣಿಗೆ ಪರದಾಟ: ಗ್ರಾಮೀಣ ಭಾಗದಲ್ಲಿ ಪಿಂಚಣಿ ಹಣ ನೀಡುವ ವ್ಯವಹಾರ ಪ್ರತಿನಿಧಿ ಗಳು (ಬಿಸಿ) ಅನಕ್ಷರಸ್ಥರನ್ನು ವಂಚಿಸುತ್ತಾರೆ. ಹೆಬ್ಬೆಟ್ಟು ಹಾಕಿಸಿ ಕೊಂಡು ಹಣ ನೀಡುತ್ತಿಲ್ಲ. ಕೆಲ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಹಿಂದೇಟು ಹಾಕಲಾಗುತ್ತಿದೆ. ಹಾಗಾಗಿ ವೃದ್ಧರು, ದಿವ್ಯಾಂಗರು, ವಿಧವೆಯರು ಪಿಂಚಣಿ ಹಣ ಪಡೆಯಲು ಪರದಾಡುವ ಸ್ಥಿತಿ ಇದೆ. ಇದನ್ನು ಸರಿಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.
ವಿದ್ಯುತ್ ಸಮಸ್ಯೆ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲಿ ಸಿಂಗಲ್ ಫೇಸ್ ಇರುತ್ತದೆ. ಆದರೆ, ಇದು ಸರಿ ಹೋಗಬೇಕಾದರೆ ಸಾಕಷ್ಟು ಸಮಯ ಹಿಡಿಯುತ್ತಿದೆ ಎಂದು ಸದಸ್ಯರು ದೂರಿದರು. ಈ ವೇಳೆ ಸೆಸ್ಕ್ ನಿಗಮದ ಎಇಇ ಸುರೇಶ್ ಕುಮಾರ್ ಮಾತನಾಡಿ, ತಾಲೂಕಿನ ಗುಂಬಳ್ಳಿ, ಯರಿಯೂರು, ಅಗರ, ಯರಗಂಬಳ್ಳಿಯಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಒಂದೇ ವಿದ್ಯುತ್ ಪರಿವರ್ತಕಗಳ (ಟಿಸಿ) ಮೇಲೆ ಹೆಚ್ಚು ವಿದ್ಯುತ್ ಒತ್ತಡ ಬೀಳುವುದರಿಂದ ಈ ಸಮಸ್ಯೆ ಹೆಚ್ಚಾಗಿದೆ. ಬೆಳಕು ಯೋಜನೆಯಡಿ ಹೊಸ ಟಿಸಿಗಳನ್ನು ಶೀಘ್ರದಲ್ಲೇ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳ ಗೈರು: ಸಭೆ ಶುರುವಾಗುತ್ತಿದ್ದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದಾರೆ. ಹೀಗಾಗಿ ಸಭೆಯನ್ನು ಮುಂದೂಡವಂತೆ ಕೆಲ ಸದಸ್ಯರು ಆಗ್ರಹಿಸಿದರು. ಬಳಿಕ ಮುಂದಿನ ಸಭೆಗಳಿಗೆ ಎಲ್ಲಾ ಇಲಾಖೆ ಅಧಿಕಾರಿಗಳೂ ಭಾಗವಹಿಸಲು ಕ್ರಮ ವಹಿಸಲಾಗುವುದು ಎಂದು ತಾಪಂ ಇಒ ಭರವಸೆ ನೀಡಿದ ಮೇಲೆ ಸಭೆ ಆರಂಭಗೊಂಡಿತು. ಶಿಶು ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಲೋಕೋಪ ಯೋಗಿ, ನೀರಾವರಿ, ಸೆಸ್ಕ್, ಪಂಚಾಯತ್ ರಾಜ್, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ, ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ನಿರಂಜನ್, ವೆಂಕಟೇಶ್, ಪಲ್ಲವಿ, ಪುಟ್ಟು, ಮಲ್ಲಾಜಮ್ಮ, ಪದ್ಮಾವತಿ, ಮಣಿ, ಇಒ ಬಿ.ಎಸ್. ರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.