Advertisement
“ಕಾಣದ ಕಡಲಿಗೆ ಹಂಬಲಿಸಿದೆ ಮನ’ ಎನ್ನುತ್ತದೆ ಕವಿಸಾಲು. ಶಿಕ್ಷಣ, ಸೌಲಭ್ಯ, ಅವಕಾಶ, ಉದ್ಯೋಗಗಳನ್ನು ಅರಸುತ್ತ ಇಂದು ಗ್ರಾಮೀಣ ಪ್ರದೇಶಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನಸಮೂಹವು ಮಹಾನಗರಗಳತ್ತ ವಲಸೆ ಬರುತ್ತಿದೆ. ಇತ್ತ ಮಹಾನಗರಗಳಲ್ಲಿರುವ ಕೆಲ ವರ್ಗಗಳು ತಾವು ಯಾಕಾದರೂ ಇಲ್ಲಿ ಬಂದು ಸಿಕ್ಕಿಹಾಕಿಕೊಂಡೆವೋ ಎನ್ನುವಂತೆ ಅತ್ತ ಇರಲೂ ಆಗದೆ, ಇತ್ತ ಬಿಡಲೂ ಆಗದೆ ತ್ರಿಶಂಕುಸ್ವರ್ಗದಲ್ಲಿ ಒದ್ದಾಡುತ್ತಿವೆ. ವಾಯುಮಾಲಿನ್ಯ, ಫ್ಲೈ-ಓವರುಗಳ ಅಬ್ಬರದಲ್ಲಿ ತಾವು ಕೊನೆಯ ಬಾರಿ ಸೂರ್ಯಾಸ್ತವನ್ನು ನೋಡಿದ್ದಾದರೂ ಯಾವಾಗ ಎಂದು ಹಳಹಳಿಸುತ್ತವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ತಲಾಶೆಗಳಿರುವುದು ಸಹಜವೇ ಅನ್ನಿ. ಒಟ್ಟಿನಲ್ಲಿ ಮಹಾನಗರಗಳೆಂದರೆ ಮುಗಿಯದ ತಲ್ಲಣಗಳು.
ಮಹಾನಗರಗಳ ವೇಗದ ಖದರಿನ ಹೊರತಾಗಿಯೂ ಬದುಕೆಂಬ ಕ್ಯಾನ್ವಾಸಿನಲ್ಲಿ ಬಣ್ಣಗಳನ್ನು ಹಚ್ಚಬಯಸುವ ಜೀವನಪ್ರೀತಿಯುಳ್ಳವರಿಗೆ ದಿಲ್ಲಿಯು ನಿರಾಶೆಯನ್ನೇನೂ ಮಾಡಿಸುವುದಿಲ್ಲ. ಈ ಮಟ್ಟಿಗೆ ದಿಲ್ಲಿಯ “ದಿಲ…’ ದೊಡ್ಡದು. ಎಲ್ಲಾ ಬಗೆಯ ಜನಸಮೂಹವನ್ನೂ ಒಂದಲ್ಲ ಒಂದು ರೀತಿಯಲ್ಲಿ ಆಕರ್ಷಿಸುವ, ಏನಾದರೊಂದು ದಿಲ್ಲಿಯಲ್ಲಿ ಇದ್ದೇ ಇರುವುದು ಈ ಶಹರದ ವೈಶಿಷ್ಟ್ಯಗಳಲ್ಲೊಂದು. ವಿಹಾರಕ್ಕೆ ಉದ್ಯಾನಗಳು, ಖರೀದಿಗೆ ಬಜಾರುಗಳು, ಪ್ರವಾಸಕ್ಕೆ ತಾಣಗಳು, ಆಸಕ್ತಿಗೆ ಮ್ಯೂಸಿಯಮ್ಮುಗಳು, ಭಕ್ತಿಗೆ ಆರಾಧನಾ ಸ್ಥಳಗಳು, ಅಧಿಕಾರದ ಗತ್ತಿಗೆ ಶಕ್ತಿಕೇಂದ್ರಗಳು… ಹೀಗೆ ಆಯ್ಕೆಗಳಿಗಿಲ್ಲಿ ಬರವಿಲ್ಲ. ಪ್ರಾಯಶಃ ದಿಲ್ಲಿಯಲ್ಲಿರುವಷ್ಟು ವಸ್ತು ಸಂಗ್ರಹಾಲಯಗಳು ಭಾರತದ ಯಾವ ಮೂಲೆಯಲ್ಲೂ ಇರಲಾರದು.
Related Articles
Advertisement
ರಾಷ್ಟ್ರರಾಜಧಾನಿಯಾದ ದಿಲ್ಲಿಯು ಸಾಂಸ್ಕೃತಿಕ ಕೇಂದ್ರವೂ ಹೌದು. ಇದು ಸಾಹಿತ್ಯ, ಸಿನೆಮಾ, ಸಂಗೀತ, ರಂಗಭೂಮಿಗಳ ಬೀಡು. ಕಾರ್ನಾಡರ “ತುಘಲಕ್’ ಮತ್ತು ಸ್ವದೇಶ್ ದೀಪಕ್ ರವರ “ಕೋರ್ಟ್ ಮಾರ್ಷಲ…’ ನಂಥ ರಂಗಪ್ರಯೋಗಗಳು ಬಂದು ದಶಕಗಳೇ ಉರುಳಿಹೋದರೂ ದಿಲ್ಲಿಯಲ್ಲಿ ಅವುಗಳಿಂದೂ ಹಚ್ಚಹಸಿರು. ಇಂಡಿಯನ್ ಹ್ಯಾಬಿಟಾಟ್ ಸೆಂಟರ್, ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್‌ನಂಥಾ ಸ್ಥಳಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನೇ ಉಸಿರಾಗಿಸಿಕೊಂಡ, ಈ ಅಮೃತವನ್ನು ಜನಸಾಮಾನ್ಯರಿಗೂ ನಿರಂತರವಾಗಿ ಉಣಬಡಿಸುವಂತಹ ಅಪರೂಪದ ಸ್ಥಳಗಳು. ಇನ್ನು ವಿವಿಧ ದೇಶಗಳ ದೂತಾವಾಸಗಳ ಸಾಂಸ್ಕೃತಿಕ ಕೇಂದ್ರಗಳಲ್ಲಿ ಆಯೋಜಿಸಲಾಗುವ ವಿಶೇಷ ಚಿತ್ರಪ್ರದರ್ಶನಗಳಂತೂ “ವಸುಧೈವ ಕುಟುಂಬಕಂ’ ಧಾಟಿಯ ಸಿನಿಪ್ರಿಯರಿಗೆ ಬೋನಸ್.
ಹೊಸತನದತ್ತ ದಿಲ್ಲಿಸಾಂಸ್ಕೃತಿಕ ನೆಲೆಯಲ್ಲಿ ದಿಲ್ಲಿಯಂಥ ಮಹಾನಗರಿಗಳು ಇಂದು ಸಾಂಪ್ರದಾಯಿಕ ಸೀಮೆಗಳನ್ನು ಕಳಚಿ ಹೊಸತನದತ್ತ ಹೊರಳುತ್ತಿರುವುದೂ ಕೂಡ ಅಪರೂಪದ ಬೆಳವಣಿಗೆಗಳಲ್ಲೊಂದು. ಕೆಫೆಗಳಲ್ಲಿ ಇಂದು ಜನಪ್ರಿಯವಾಗುತ್ತಿರುವ ಕಥಾವಾಚನ ಪ್ರಯೋಗಗಳು, ಕಾವ್ಯಗೋಷ್ಠಿಗಳು ಇದಕ್ಕೊಂದು ಅತ್ಯುತ್ತಮ ನಿದರ್ಶನ. ಅಡುಗೆಯಿಂದ ಆಧ್ಯಾತ್ಮದವರೆಗೂ, ಕಲೆಯಿಂದ ಕಂಪ್ಯೂಟರಿನವರೆಗೂ ನಾನಾಬಗೆಯ ಹವ್ಯಾಸಗಳನ್ನು, ಜೀವನಶೈಲಿಯನ್ನು, ಕೌಶಲಗಳನ್ನು ಕಲಿಸುವ ಲೆಕ್ಕವಿಲ್ಲದಷ್ಟು ಆಸಕ್ತ ತಂಡಗಳು ಇಲ್ಲಿ ಸಕ್ರಿಯವಾಗಿವೆ. ಅದೆಷ್ಟೋ ವರ್ಷಗಳ ಹಿಂದೆ ಮರೆಯಾಗಿದ್ದ ಆಪ್ತ ಗೆಳತಿಯೊಬ್ಬಳು ಅಚಾನಕ್ಕಾಗಿ ನಮ್ಮದೇ ಬೀದಿಯಲ್ಲಿ ಸಿಕ್ಕಾಗ ಮನದಲ್ಲಿ ಖುಷಿಯು ಲಾಸ್ಯವಾಡುವಂತೆ ನಿತ್ಯದ ಜಂಜಾಟದಲ್ಲಿ ಎಂದೋ ಮರೆತಿದ್ದ ಹವ್ಯಾಸಗಳನ್ನು, ನೆನಪುಗಳನ್ನು ಇಂಥ ಸೃಜನಶೀಲ ಚಟುವಟಿಕೆಗಳು ಮತ್ತೆ ಜೀವಂತವಾಗಿಸಬಲ್ಲವು. ಹೆರಿಟೇಜ್ ತಾಣಗಳಲ್ಲಿ ಆಯೋಜಿಸಲಾಗುವ ಕಾಲ್ನಡಿಗೆಯ ವಿಹಾರಗಳು, ಸಮಾನಮನಸ್ಕರು ಜೊತೆಯಾಗಿ ನಡೆಸುವ ವೈವಿಧ್ಯಮಯ ಕಾರ್ಯಕ್ರಮಗಳು ಬದುಕನ್ನು ಮತ್ತಷ್ಟು ಆಪ್ತವಾಗಿಸಿ ಶರವೇಗದ ಬದುಕಿನಲ್ಲೂ ಮಹಾನಗರಿಯ ಜನತೆಗೆ ನಿರಾಳತೆಯನ್ನು ತರುತ್ತಿವೆ. ಹಾಗೆಂದು ಆಧುನಿಕ ಜೀವನಶೈಲಿಯು ಮಹಾನಗರವಾಸಿಗಳನ್ನು ಕಾಡಿಸಿಯೇ ಇಲ್ಲವೆಂದರೆ ಸುಳ್ಳಾಡಿದಂತಾಗುತ್ತದೆ. ಜೀವನದ ಮುಗಿಯದ ವ್ಯಥೆ, ಗೊಣಗಾಟಗಳಿಂದ ಬೇಸತ್ತಿರುವ ಕೋಪಿಷ್ಟರಿಗೆಂದೇ ದಿಲ್ಲಿಯ ಬಗಲಿನಲ್ಲಿರುವ ಗುರುಗ್ರಾಮದಲ್ಲಿ ಆರಂಭಿಸಲಾಗಿದ್ದ “ಬ್ರೇಕಿಂಗ್ ರೂಮ…’ಗಳು ಈಚೆಗೆ ಸುದ್ದಿ ಮಾಡಿದ್ದವು. ದೂರ್ವಾಸಕೋಪವು ಧುಮ್ಮಿಕ್ಕುತ್ತಲಿದ್ದರೆ ಸಿಕ್ಕಸಿಕ್ಕವರನ್ನೆಲ್ಲಾ ಚಚ್ಚುವ, ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಎಲ್ಲೆಂದರಲ್ಲಿ ಎಸೆಯುವ ಕ್ರೋಧವೀರರಿಗಿದು ಮೀಸಲು. ಎಲ್ಲಾ ಮೆಟ್ರೋಸಿಟಿಗಳಂತೆ ಅಪರೂಪಕ್ಕೊಮ್ಮೆ ದಿಲ್ಲಿಯಲ್ಲೂ ನೈಟ್ ಲೈಫ್ ಸುದ್ದಿ ಮಾಡುತ್ತದೆ. ಸಂತಸ-ಸಮಾಧಾನಗಳನ್ನು ಅಮಲಿನಲ್ಲಿ ಅರಸುವ ಯುವವರ್ಗಗಳು ಎಲ್ಲೋ ಎಡವಿ ಬಿದ್ದಂತಾಗುತ್ತದೆ. ದಿಲ್ಲಿಯ ರೆಡ್ ಲೈಟ್ ಏರಿಯಾ ಆಗಿರುವ ಜಿ.ಬಿ. ರಸ್ತೆಯ ಕತ್ತಲಿನಲ್ಲಿ ಇನ್ನೇನೋ ಅನಾಹುತವಾಗುತ್ತದೆ. ಇತ್ತ ಬೆಳಗಾಗುವಷ್ಟರಲ್ಲಿ ಏನೇನೂ ಆಗಿಲ್ಲವೆಂಬಷ್ಟಿನ ಸಹಜತೆಯಲ್ಲೇ ಶಹರವು ಎಂದಿನಂತೆ ಮತ್ತದೇ ನಿತ್ಯದ ವೇಗಕ್ಕೆ ಅಣಿಯಾಗಿ ನಿಂತಿರುತ್ತದೆ. ಅಷ್ಟಕ್ಕೂ ಬದುಕುವುದೆಂದರೆ ಹೊಟ್ಟೆಪಾಡಷ್ಟೇ ಅಲ್ಲವಲ್ಲ ! ಸಂಭ್ರಮಾಚರಣೆಯೆಂದರೆ ಸೂರು ಕಿತ್ತುಹೋಗುವಷ್ಟರ ಮಟ್ಟಿನ ಶಬ್ದಮಾಲಿನ್ಯವನ್ನು ಮಾಡುತ್ತ ಅಮಲಿನಲ್ಲಿ ತೇಲುವುದಷ್ಟೇ ಅಲ್ಲವಲ್ಲ ! ಹೀಗಾಗಿ, ದಿಲ್ಲಿಯೆಂಬ ಮಹಾನಗರಿಯಲ್ಲಿ ಬದುಕಲು ಕ್ಯಾಲೆಂಡರ್ ನೋಡುತ್ತ ವಾರಾಂತ್ಯಗಳ ನಿರೀಕ್ಷೆಯಲ್ಲೇ ಇರಬೇಕಿಲ್ಲ. ಈ ಶಹರವೆಂಬ ಬಣ್ಣಗಳ ಬಜಾರಿನಲ್ಲಿ ಅಸಂಖ್ಯಾತ ಬಣ್ಣಗಳಿವೆ. ಆಯ್ಕೆಯಷ್ಟೇ ನಮ್ಮದು. ಪ್ರಸಾದ್ ನಾೖಕ್