Advertisement

ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ : ಯಡಿಯೂರಪ್ಪ

05:05 PM Mar 08, 2021 | Team Udayavani |

ಬೆಂಗಳೂರು : ಇಂದು ಸಿಎಂ ಯಡಿಯೂರಪ್ಪ ತಮ್ಮ 8 ನೇ ಬಜೆಟ್ ಮಂಡನೆ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ 2,46,207 ಕೋಟಿ ರೂ. ಗಾತ್ರದ ಆಯವ್ಯಯ ಮಂಡನೆ ಮಾಡಿದ್ದಾರೆ.

Advertisement

ಬಜೆಟ್ ಮಂಡನೆ ನಂತ್ರ ಸುದ್ದಿಗಾರರ ಜೊತೆ ಮತನಾಡಿದ ಯಡಿಯೂರಪ್ಪ,  ಇಂದು ನಾನು 8ನೇ ಬಾರಿಗೆ ಆಯವ್ಯಯ ಮಂಡಿಸಿದ್ದೇನೆ. ಅತ್ಯಂತ ಸಂಕಷ್ಟದ ಸನ್ನಿವೇಶದಲ್ಲಿ ರೂಪಿಸಲಾದ ಆಯವ್ಯಯ ಇದು. ಕೋವಿಡ್ 19ರ ಕಾರಣ ಇಡೀ ರಾಜ್ಯ ತಲ್ಲಣಗೊಂಡು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಲಾಕ್‍ಡೌನ್ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳು ನಡೆಯದೆ ರಾಜಸ್ವ ಸಂಗ್ರಹಣೆಗೆ ದೊಡ್ಡ ಪೆಟ್ಟು ಬಿದ್ದಿತ್ತು. ಆದರೂ ಕೂಡ ಧೃತಿಗೆಡದೆ ಬದ್ಧ ವೆಚ್ಚಗಳನ್ನು ಸಕಾಲದಲ್ಲಿ ಪಾವತಿಸಿ ಅಭಿವೃದ್ಧಿಗೂ ಅನುದಾನ ಒದಗಿಸಿದ್ದೇನೆ ಎಂದರು.

ಆಯವ್ಯಯದ ಅಂದಾಜಿಗೆ ಎದುರಾಗಿ ಶೇ. 94 ರಷ್ಟು ವೆಚ್ಚವನ್ನು ಸಾಧಿಸುವ ಭರವಸೆ ನನಗಿದೆ. ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಪರಿಸ್ಥಿತಿ ತುಸು ಸುಧಾರಿಸಿದ್ದರಿಂದ ಇದು ಸಾಧ್ಯವಾಗಿದೆ. ಅಭಿವೃದ್ಧಿ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನದ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

ಈ ದೃಷ್ಟಿಯಿಂದ ಇದು ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಆಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಬಜೆಟ್ ರೂಪಿಸುವ ಸಾಹಸ ಮಾಡಿದ್ದೇನೆ. ಕಳೆದ ವರ್ಷದ ಆಯವ್ಯಯದ ಗಾತ್ರಕ್ಕಿಂತಲೂ 8,314 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಇದಾಗಿದೆ. ಯಾರಿಗೂ ಹೊರೆಯಾಗದ ಜನಸ್ನೇಹಿ ಬಜೆಟ್ ಇದಾಗಿದೆ. ಯಾವುದೇ ತೆರಿಗೆ ಹೆಚ್ಚಳ ಇಲ್ಲ ಮತ್ತು ಹೊಸ ತೆರಿಗೆ ಪ್ರಸ್ತಾಪವೂ ಇಲ್ಲ. ಆಯವ್ಯಯದಲ್ಲಿ ಎಲ್ಲ ವರ್ಗಗಳಿಗೆ, ಎಲ್ಲ ವಲಯಗಳಿಗೆ ಹಾಗೂ ಎಲ್ಲ ಜಿಲ್ಲೆಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.

ಮಹಿಳಾ ದಿನಾಚರಣೆಯಂದು ಮಂಡಿಸಿರುವ ಈ ಆಯವ್ಯಯದಲ್ಲಿ ಮಹಿಳೆಯರ ಸ್ವಾವಲಂಬನೆ, ಸುರಕ್ಷತೆ, ಉದ್ಯಮಶೀಲತೆ ಮತ್ತು ಅಭ್ಯುದಯಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ.  ಸೇವಾ ವಲಯದ ಮಹಿಳಾ ಉದ್ಯಮಿಗಳಿಗೆ ಶೇ. 4ರ ರಿಯಾಯಿತಿ ದರದಲ್ಲಿ 2 ಕೋಟಿ ರೂ. ವರೆಗೆ ಸಾಲ ಸೌಲಭ್ಯ. “ಸಂಜೀವಿನಿ” ವ್ಯಾಪ್ತಿಯ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಆರು ಸಾವಿರ ಸಣ್ಣ ಉದ್ಯಮಗಳ ಸ್ಥಾಪನೆಗೆ ನೆರವು; 60 ಸಾವಿರ ಮಹಿಳೆಯರಿಗೆ ಅನುಕೂಲ. ನಗರ ಪ್ರದೇಶಗಳ ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿ ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

Advertisement

ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ‘ವನಿತಾ ಸಂಗಾತಿ’ ಯೋಜನೆ ಜಾರಿ. ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲಿ ಮಹಿಳಾ ಸಬಲೀಕರಣ ಮತ್ತು ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.

ನಾಗರಿಕ ಸ್ನೇಹಿ ಉಪಕ್ರಮಗಳು:

ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಡಿಬಿಟಿ ಮೂಲಕವೇ ಆರ್ಥಿಕ ನೆರವು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.  ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲ್ಯಾಬ್, ಕೃಷಿ ಭೂಮಿ ಪರಿವರ್ತನೆ ಪ್ರಕ್ರಿಯೆ ಸರಳೀಕರಣ. ಭೂ ಕಂದಾಯ ಅಧಿನಿಯಮ ತಿದ್ದುಪಡಿಗೆ ಕ್ರಮ, ಮಾಹಿತಿ ತಂತ್ರಜ್ಞಾನ ವಲಯಕ್ಕೆ ಉತ್ತೇಜನ ನೀಡಲು ಸ್ಟಾರ್ಟ್-ಅಪ್ ನೀತಿ ಪರಿಷ್ಕರಣೆ, ಸೈಬರ್ ಭದ್ರತಾ ಕಾರ್ಯನೀತಿ ಹಾಗೂ ದತ್ತಾಂಶ ಕೇಂದ್ರ ಕಾರ್ಯನೀತಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂಗಡಪತ್ರವನ್ನು ಆರು ವಲಯಗಳಾಗಿ ವಿಂಗಡಣೆ :

  1. ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ; 31,028 ಕೋಟಿ ರೂ.
  2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ : 62,150 ಕೋಟಿ ರೂ.
  3. ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ : 52,529 ಕೋಟಿ ರೂ.
  4. ಬೆಂಗಳೂರು ಸಮಗ್ರ ಅಭಿವೃದ್ಧಿ : 7795 ಕೋಟಿ ರೂ.
  5. ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ : 2645 ಕೋಟಿ ರೂ.
  6. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ : 52,519 ಕೋಟಿ ರೂ.

 

Advertisement

Udayavani is now on Telegram. Click here to join our channel and stay updated with the latest news.

Next