ಕೊಪ್ಪಳ: “ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹಾ ಜಾತಿವಾದಿ. ಅಂತಹ ಜಾತಿವಾದಿ ವ್ಯಕ್ತಿಯನ್ನು ರಾಜಕಾರಣದಲ್ಲಿಯೇ ನೋಡಿಲ್ಲ’ ಎಂದು ರಾಯಣ್ಣ ಬ್ರಿಗೇಡ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ವಾಗ್ಧಾಳಿ ನಡೆಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಿವೆ. ಬಿಎಸ್‌ವೈ ಅವರಿಗೆ ಅಧಿಕಾರ ಸಿಗದಂತೆ ಅವರ ಪಕ್ಷದ ನಾಯಕರೇ ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ಎಂದಿಗೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದರು.
ನಾನು ಆಶಾಭಾವನೆಯಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಆಕಾಂಕ್ಷಿಯಾಗಿದ್ದೆ. ನಾನೊಬ್ಬ ಹಿಂದುಳಿದ ವರ್ಗದ ವ್ಯಕ್ತಿ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ಕೊಡಲಿಲ್ಲ. ಅಲ್ಲದೇ, ಹಿರಿಯರಿಗೆ ಗೌರವ ಕೊಡದ ಹಿನ್ನೆಲೆಯಲ್ಲಿ ಬಿಜೆಪಿ ತೊರೆಯಬೇಕಾಯಿತು ಎಂದರು.
ಸಿದ್ದರಾಮಯ್ಯನವರ ಪುತ್ರನ ಸಾವಿನ ವಿಷಯದಲ್ಲಿ ಜನಾರ್ದನರೆಡ್ಡಿ ಕೆಳಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ. ಅದು ಅವರ ಬುದ್ಧಿಮಟ್ಟ ತೋರಿಸುತ್ತದೆ. ರಾಮುಲು ಮುಂದಿನ ಮುಖ್ಯಮಂತ್ರಿ ಎನ್ನುವ ಸೋಮಣ್ಣನವರ ಹೇಳಿಕೆ ವಿಚಾರ ರಾಜಕೀಯ ಪ್ರೇರಿತ ಎಂದರು. ಕುರುಬ ಸಮುದಾಯ ವಿರುದ್ಧ ಕೆಲ ಯುವಕರು ಸೋಶಿಯಲ್ ಮೀಡಿಯಾದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ನಾನು ಟಿಕೇಟ್ ಆಕಾಂಕ್ಷಿಯಾಗಿದ್ದೇನೆ. ನನ್ನೊಟ್ಟಿಗೆ ಜಿಲ್ಲೆಯ ಹಲವು ಮುಖಂಡರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡಲಿದ್ದೇವೆ. ಕೊಪ್ಪಳದಿಂದ ಸಿದ್ದರಾಮಯ್ಯನವರು ಸ್ಪರ್ಧಿಸಿದರೂ ನಾವೆಲ್ಲರೂ ಒಗ್ಗಟ್ಟಾಗಿ ಅವರನ್ನು ಗೆಲ್ಲಿಸಲಿದ್ದೇವೆ ಎಂದರು.