ಬೆಂಗಳೂರು: ಉಪಚುನಾವಣೆಗೆ ಗುರುವಾರ ಮತದಾನದ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿದ್ದುಕೊಂಡೇ ಪ್ರತಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಸಲಹೆ, ಸೂಚನೆ ನೀಡಿ ಅಂತಿಮ ಕ್ಷಣದವರೆಗೆ ಗೆಲುವಿಗೆ ಕಾರ್ಯತಂತ್ರ ರೂಪಿಸುವುದರಲ್ಲೇ ನಿರತರಾಗಿದ್ದರು.
ಡಾಲರ್ ಕಾಲೋನಿ ನಿವಾಸಕ್ಕೆ ಭೇಟಿ ನೀಡಿದ ಸಚಿವರಾದ ಆರ್.ಅಶೋಕ್, ಜೆ.ಸಿ. ಮಾಧುಸ್ವಾಮಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ಯಡಿಯೂರಪ್ಪ ಅವರೊಂದಿಗೆ ಕೆಲಹೊತ್ತು ಚರ್ಚಿಸಿದರು. ಈ ವೇಳೆ ಕೆ.ಆರ್.ಪೇಟೆ, ಯಶವಂತಪುರ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿನ ಸ್ಥಿತಿಗತಿ ಬಗ್ಗೆ ಯಡಿಯೂರಪ್ಪ ಅವರು ಮಾಹಿತಿ ಪಡೆದರು.
ಉಪಚುನಾವಣೆ ನಡೆದಿರುವ ಕ್ಷೇತ್ರಗಳ ಉಸ್ತುವಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಯಡಿಯೂರಪ್ಪ ಅವರು ಯಾವುದೇ ಕಾರಣಕ್ಕೂ ಹಿನ್ನಡೆಯಾಗದಂತೆ ಎಚ್ಚರ ವಹಿಸಬೇಕು. ಮನೆ ಮನೆ ಪ್ರಚಾರವನ್ನು ಬಿರುಸಾಗಿ ಕೈಗೊಂಡು ಪ್ರತಿ ಮತದಾರರನ್ನು ಭೇಟಿಯಾಗಿ ಮತ ಯಾಚಿಸುವಂತೆ ಸೂಚನೆ ನೀಡಿದರು ಎನ್ನಲಾಗಿದೆ.
ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿರುವ ಹೊಸಕೋಟೆ, ವಿಜಯನಗರ ಕ್ಷೇತ್ರಗಳಲ್ಲಿನ ಬೆಳವಣಿಗೆ ಬಗ್ಗೆಯೂ ಮಾಹಿತಿ ಪಡೆದ ಯಡಿಯೂರಪ್ಪ ಅವರು ಕೊನೆಯ ಕ್ಷಣದವರೆಗೂ ಮತದಾರರ ವಿಶ್ವಾಸ ಗಳಿಸುವ ಪ್ರಯತ್ನ ಮುಂದುವರಿಸುವಂತೆ ಸೂಚನೆ ನೀಡಿದರು. ಪಕ್ಷದ ಆಂತರಿಕ ಸಮೀಕ್ಷೆ ಹಾಗೂ ಗುಪ್ತಚರ ಇಲಾಖೆ ಮಾಹಿತಿಯಂತೆ ತೀವ್ರ ಹಣಾಹಣಿ ನಡೆಯುವ ಸಾಧ್ಯತೆ ಇರುವ ಕ್ಷೇತ್ರಗಳ ಉಸ್ತುವಾರಿಗಳೊಂದಿಗೂ ದೂರವಾಣಿಯಲ್ಲಿ ಚರ್ಚಿಸಿ ಸಲಹೆ, ಸೂಚನೆ ನೀಡಿದರು ಎಂದು ಹೇಳಲಾಗಿದೆ.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಗುರುವಾರ ಮತದಾನ ನಡೆಯಲಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಶೇ. 85ರಷ್ಟು ಮತದಾನ ಮಾಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿರುತ್ತದೆ. ಹಾಗಾಗಿ ಗುರುವಾರ ಎಲ್ಲ ಮತದಾರರು ಮತದಾನ ಮಾಡಬೇಕು. ಗಾಳಿ, ಮಳೆ, ಚಳಿ ಎನ್ನದೆ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಹಕ್ಕು ಚಲಾಯಿಸಬೇಕು.
– ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ