Advertisement

ಜನರ ಸ್ಥಿತಿಗತಿ ಅವಲೋಕಿಸಿದ ಯಡಿಯೂರಪ್ಪ

11:54 PM Apr 12, 2020 | Team Udayavani |

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಬಳಿಕ ಜನಸಾಮಾನ್ಯರ ಸ್ಥಿತಿಗತಿ ಅರಿಯಲು ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರವಿವಾರ ಸಂಜೆ ದಿಢೀರ್‌ ರಸ್ತೆಗಿಳಿದರು. ಬೀದಿ ವ್ಯಾಪಾರಿಗಳು, ವರ್ತಕರು, ವಾಹನ ಸವಾರರು, ಆಟೋ ಚಾಲಕರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸಾರ್ವಜನಿಕರೊಂದಿಗೆ ಮಾತಿಗಿಳಿದ ಯಡಿಯೂರಪ್ಪ ಕೆಲವೇ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಭರವಸೆ ನೀಡಿದರು.

Advertisement

ಮಾರಾಟ ವಸ್ತುಗಳ ಸಾಗಣೆಗೆ ತೀವ್ರ ತೊಂದರೆಯಾಗುತ್ತಿದ್ದು, ಪಾಸ್‌ ಒದಗಿಸಬೇಕು. ಅಗತ್ಯ ವಸ್ತುಗಳ ಪೂರೈಕೆಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ವ್ಯಾಪಾರಿಗಳ ಮನವಿಗೆ ತತ್‌ಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ತ್ವರಿತವಾಗಿ ಪಾಸ್‌ ವಿತರಿಸುವಂತೆ ಸ್ಥಳದಲ್ಲೇ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಸಾರ್ವಜನಿಕರ ಅಹವಾಲು ಆಲಿಸಿದ ಮುಖ್ಯಮಂತ್ರಿಗಳು, ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಲಾಕ್‌ಡೌನ್‌ ಜಾರಿಗೆ ಶ್ರಮಿಸುತ್ತಿರುವ ಪೊಲೀಸ್‌ ಅಧಿಕಾರಿ, ಸಿಬಂದಿಯ ಯೋಗಕ್ಷೇಮ ವಿಚಾರಿಸಿದ ಯಡಿಯೂರಪ್ಪ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಆತ್ಮಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡಿದರು. ಎರಡು ಕಾಲು ಗಂಟೆ ಕಾಲ ನಗರದಲ್ಲಿ ಪರಿಶೀಲನೆ ನಡೆಸಿ ವಸ್ತುಸ್ಥಿತಿ ಅವಲೋಕಿಸಿದರು.

ತಮ್ಮ ಭೇಟಿಯುದ್ದಕ್ಕೂ ಯಡಿಯೂರಪ್ಪ ಸಾರ್ವಜನಿಕರಿಗೆ ಸಮಾಧಾನ ಹೇಳಿ ಧೈರ್ಯ ತುಂಬಿದರು. ಎರಡು ದಿನಗಳಲ್ಲಿ ಸಾಧ್ಯವಿರುವ ಕಡೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ವಾರದ ಬಳಿಕ ಪರಿಸ್ಥಿತಿ ಇನ್ನಷ್ಟು ಸುಧಾರಣೆಯಾಗಲಿದೆ. ಶೀಘ್ರವೇ ಸಹಜ ಸ್ಥಿತಿ ಮರಳುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಭೇಟಿ ವೇಳೆ ಯಾವುದೇ ಸಚಿವರು, ಶಾಸಕರು ಇರಲಿಲ್ಲ. ಯಡಿಯೂರಪ್ಪ ಅವರು ಅಪರಾಹ್ನ 4ಕ್ಕೆ “ಕಾವೇರಿ’ಯಿಂದ ಹೊರಟಾಗ ಅವರೊಂದಿಗೆ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್‌, ಗುಪ್ತಚರ ವಿಭಾಗದ ಮುಖ್ಯಸ್ಥ ಕಮಲ್‌ ಪಂತ್‌ ಇದ್ದರು.

ಯಶವಂತಪುರ ವೃತ್ತಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಪೊಲೀಸರೊಂದಿಗೆ ಮಾತುಕತೆ ನಡೆಸಿದರು. “ತಿಂಡಿ, ಊಟದ ವ್ಯವಸ್ಥೆಯಾಗುತ್ತಿದೆಯೇ. ಲಾಕ್‌ಡೌನ್‌ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಮಾಸ್ಕ್, ಸ್ಯಾನಿಟೈಸರ್‌ ಸಹಿತ ಸುರಕ್ಷತೆಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಒದಗಿಸಲಾಗುವುದು’ ಎಂದು ಯಡಿಯೂರಪ್ಪ ಅವರು ಹೇಳುವ ಮೂಲಕ ಪೊಲೀಸರಿಗೆ ಧೈರ್ಯ ಹೇಳುವ ಕೆಲಸ ಮಾಡಿದರು.

Advertisement

ಕೆಲವೆಡೆ ಸಾರ್ವಜನಿಕರು, ವ್ಯಾಪಾರಿ ಗಳೊಂದಿಗೆ ಮಾತಿಗಿಳಿದ ಯಡಿಯೂರಪ್ಪ ಅವರು, ಲಾಕ್‌ಡೌನ್‌ ಬಗ್ಗೆ ಅಭಿಪ್ರಾಯ ಕೇಳಿದರು. ಆಗ ಸಾರ್ವಜನಿಕರು ಲಾಕ್‌ಡೌನ್‌ ಉತ್ತಮ ಕ್ರಮವಾಗಿದ್ದು, ಸರಕಾರದ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದು ಸಹಮತ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next