Advertisement
ಕರ್ನಾಟಕದ ಪಾಲಿಗೆ ಸದ್ಯ ಯಡಿಯೂರಪ್ಪನವರ ಅಗತ್ಯ ಆ ಮಟ್ಟಕ್ಕಿತ್ತು. ಇಲ್ಲಿ ಸಮರ್ಥ ಪರ್ಯಾಯ ನಾಯಕರು ಕಂಡು ಬಾರದ ಕಾರಣ ಹಾಗೂ ಇಂಥ ಸಂದಿಗ್ಧ ಸ್ಥಿತಿಯಲ್ಲಿ 75ರ ನಿಯಮಕ್ಕೆ ಅಂಟಿ ನಿಂತರೆ ಅದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗಿ ಬಂದೀತು ಎಂಬುದನ್ನು ಮೋದಿ – ಶಾ ಅರಿತುಕೊಂಡೇ ಈ ರಿಯಾಯಿತಿಗೆ ಮುಂದಾಗಿದ್ದಾರೆ ಎಂಬುದು ನಿಸ್ಸಂಶಯ ಸಂಗತಿ.
Related Articles
Advertisement
ಒಂದು ಕಾಲದಲ್ಲಿ ಕಾಂಗ್ರೆಸ್ ಎಂದರೆ ಇಂದಿರಾಗಾಂಧಿ ಎಂಬ ಭಾವನೆ ಜನರಲ್ಲಿ ಹೇಗಿತ್ತೋ, ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಎಂದರೆ ಯಡಿ ಯೂರಪ್ಪ ಎಂಬ ಭಾವನೆ ಇತ್ತು. ಹುಲುಸಾಗಿ ಬೆಳೆದ ತೋಟದಿಂದ ಫಸಲನ್ನು ಕೊಯ್ದು ಅನುಭವಿಸುವುದು ದೊಡ್ಡ ಸಂಗತಿಯಲ್ಲ. ಆದರೆ ಹಲವು ಸಮಸ್ಯೆ, ಸವಾಲುಗಳ ನಡುವೆಯೂ ಆ ತೋಟವನ್ನು ಬೆಳೆಸುವುದು, ಉತ್ತಮ ಫಸಲು ಬರುವಂತೆ ಮಾಡುವುದು ದೊಡ್ಡ ಸಾಧನೆಯೇ. ಇಂದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಹೆಬ್ಟಾಗಿಲು ಆಗಿದ್ದರೆ ಅದರಲ್ಲಿ ಯಡಿಯೂರಪ್ಪನವರ ಪಾತ್ರ ಅತ್ಯಂತ ಮಹತ್ವದ್ದು ಎಂಬುದು ನಿರ್ವಿವಾದ ಸಂಗತಿ.
ಪ್ರತ್ಯೇಕ ಪಕ್ಷದ ಬಂಡಾಯ: ತಾನೇ ಬೆಳೆಸಿದ ಪಕ್ಷದಲ್ಲಿ ಮೂಲೆಗುಂಪು ಆಗುವ ಲಕ್ಷಣ ಕಂಡು ಬಂದಾಗ ಅವರಿಗೆ ಅಧಿಕಾರಕ್ಕಿಂತಲೂ ಹೆಚ್ಚಾಗಿ ಕಾಡಿದ್ದು ಸ್ವಾಭಿಮಾನ. ತಾನು ಏನೂ ಅಲ್ಲ ಎಂದು ಹೇಳುವವರಿಗೆ ತಾನೇನು ಎಂಬುದನ್ನು ತೋರಿಸಿಕೊಡುವ ಅನಿವಾರ್ಯತೆ ಇತ್ತು. 2013ರ ಚುನಾವಣೆ ಸಂದರ್ಭದಲ್ಲಿ ಅವರು ಬಿಜೆಪಿಯಲ್ಲೇ ಇರುತ್ತಿದ್ದರೆ ಅಧಿಕಾರಕ್ಕೇರುವ ಸಾಧ್ಯತೆ ಇತ್ತು. ಆದರೆ ಸಾವಿರ ಅವಮಾನವನ್ನು ಸಹಿಸಿಕೊಂಡಿದ್ದ ಅವರಿಗೆ ಪಕ್ಷದೊಳಗಿನ ಕಡೆಗಣನೆಯ ಅವಮಾನವನ್ನು ಸಹಿಸಿಕೊಳ್ಳಲಾಗಲಿಲ್ಲ. ಸ್ವಾಭಿಮಾನಕ್ಕಾಗಿ ಪಕ್ಷ ಕಟ್ಟಿದರು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯ ಇಲ್ಲ ಎಂಬುದಕ್ಕೆ ಪೂರಕವಾಗಿ ಹಲವು ಉದಾಹರಣೆಗಳಿದ್ದರೂ ಅಂಥದ್ದೇ ಒಂದು ಪ್ರಾದೇಶಿಕ ಪಕ್ಷದ ಮೂಲಕ ಅವರು ಅಧಿಕಾರಕ್ಕೇರುವ ಕನಸು ಕಾಣುವಷ್ಟು ಮೂರ್ಖರೇನಲ್ಲ. ತನ್ನ ಅಗತ್ಯವನ್ನು ಬಿಜೆಪಿಗೆ ತೋರಿಸಿಕೊಡಲು ಅವರಿಗೆ ಪ್ರತ್ಯೇಕ ಪಕ್ಷದ ಅನಿವಾರ್ಯತೆ ಆ ಹೊತ್ತಿಗೆ ಮೂಡಿದ್ದಿರಬಹುದು. ಅವರು ಪ್ರತ್ಯೇಕ ಪಕ್ಷದ ಮೂಲಕ ಚುನಾವಣೆ ಎದುರಿಸಿ ಮೊದಲ ಪ್ರಯತ್ನದಲ್ಲೇ ಪಡೆದಿದ್ದ ಯಶಸ್ಸು ಮತ್ತು ಬಿಜೆಪಿಗೆ ಆದಂಥ ಹಾನಿ ಯಡಿಯೂರಪ್ಪರ ಸಾಮರ್ಥ್ಯ ಮತ್ತು ಬಿಜೆಪಿಗೆ ಅವರ ಅನಿವಾರ್ಯತೆಯನ್ನು ಸಾಬೀತುಮಾಡಿತ್ತು. ಮುಂದಿನ ಬೆಳವಣಿಗೆಯಲ್ಲಿ ಅವರು ಬಿಜೆಪಿ ಸೇರಿದರು. ಒಂದೊಮ್ಮೆ ಅವರು ತನ್ನ ಕೆಜೆಪಿ ಪಕ್ಷದಲ್ಲೇ ಮುಂದುವರಿಯುತ್ತಿದ್ದರೆ ಭವಿಷ್ಯದಲ್ಲಿ ಕಿಂಗ್‌ಮೇಕರ್ ಆಗುವ ಎಲ್ಲ ಸಾಧ್ಯತೆಗಳೂ ಇದ್ದವು. ಆದರೆ ಅವರ ಉಸಿರೇ ಬಿಜೆಪಿಯಾಗಿದ್ದರಿಂದ ಮತ್ತೆ ಮನೆ ಸೇರುವ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ.
ಉತ್ತಮ ಆಡಳಿತ: ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತಮ ಆಡಳಿತ ನೀಡಿದ್ದರು. ಅವರು ಜಾರಿಗೆ ತಂದಿದ್ದ ಕೆಲವು ಯೋಜನೆಗಳು ಜನಪರವಾಗಿದ್ದವು. ಆದರೆ ಆಂತರಿಕ ಕಲಹ ಜನರ ಮನಸ್ಸಿನಲ್ಲಿ ಬಿಜೆಪಿ ಬಗ್ಗೆ ಜಿಗುಪ್ಸೆ ಮೂಡುವಂತೆ ಮಾಡಿತ್ತು. ಎಲ್ಲ ಉತ್ತಮ ಯೋಜನೆಗಳನ್ನೂ ಈ ಆಂತರಿಕ ಕಲಹ ನುಂಗಿ ನೀರು ಕುಡಿಯಿತು.
ಕೃಷಿಕರ ಪರವಾದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಇವರು ಪ್ರತ್ಯೇಕ ಕೃಷಿ ಬಜೆಟ್ ಮೂಲಕ ಗಮನ ಸೆಳೆದಿದ್ದರು. ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಅವರ ಹೊದ್ದುಕೊಂಡದ್ದು ಕೃಷಿಕರ ಸಂಕೇತವಾದ ಹಸಿರು ಶಾಲನ್ನೇ. ರಾಜ್ಯದ ಜನರಿಗೆ ತನ್ನ ನೇತೃತ್ವದಲ್ಲಿ ಒಂದು ಉತ್ತಮ ಆಡಳಿತ ನೀಡಬೇಕು ಎಂಬ ಕನಸು ಅವರು ಇನ್ನೂ ಜೀವಂತವಾಗಿದೆ. ಆ ಕನಸೇ ಅವರಿಗೆ ಛಲದಂಕನ ಬಿರುದು ತಂದುಕೊಟ್ಟಿದೆ ಎಂದರೆ ತಪ್ಪಾಗದು.
ನತದೃಷ್ಟನಲ್ಲ, ಅದೃಷ್ಟವಂತ: ಯಡಿಯೂರಪ್ಪ ನತದೃಷ್ಟ ನಾಯಕ ಎಂಬ ಮಾತೂ ಚಾಲ್ತಿಯಲ್ಲಿದೆ. ಆದರೆ ಇನ್ನು ಮುಂದಕ್ಕೆ ಆ ಮಾತು ಬದಲಾಗಬೇಕಿದೆ. ಅಮಿತ್ ಶಾ ಮತ್ತು ಮೋದಿ ಜೋಡಿಯು ತಮ್ಮ 75ರ ನಿಯಮಕ್ಕೆ ಒಂದು ಅಲ್ಪವಿರಾಮ ಹಾಕಿದ್ದರೆ ಅದು ಯಡಿಯೂರಪ್ಪನವರ ಅದೃಷ್ಟದ ಸಂಕೇತವಲ್ಲವೇ ? ಈಗ ಮೈತ್ರಿ ಸರ್ಕಾರ ಪತನವಾಗಿದ್ದರೆ ಅದರಲ್ಲೂ ಯಡಿಯೂರಪ್ಪನವರ ಅದೃಷ್ಟವಿಲ್ಲವೇ ? ಒಂದೊಮ್ಮೆ ಈ ಬಾರಿ ಸರ್ಕಾರ ಬೀಳದೆ ಇರುತ್ತಿದ್ದರೆ ಯಡಿಯೂರಪ್ಪನವರು ಮತ್ತೂಂದು ಬಾರಿ ಮುಖ್ಯಮಂತ್ರಿಯಾಗುವ ಯಾವ ಸಾಧ್ಯತೆಯೂ ಇರಲಿಲ್ಲ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ದಾಖಲೆ ಬರೆದು ಯಡಿಯೂರಪ್ಪ, ನಾಲ್ಕರಲ್ಲಿ ಒಂದು ಬಾರಿ 5 ವರ್ಷದ ಅಡಳಿತ ನಡೆಸುವ ಅವಕಾಶ ಪಡೆದುಕೊಂಡಿಲ್ಲ. ಹಿಂದೆ 7 ದಿನ, 3 ವರ್ಷ 2 ತಿಂಗಳು ಮತ್ತು 3 ದಿನಗಳಿಗಷ್ಟೇ ಅವರ ಅಡಳಿತ ಸೀಮಿತವಾಗಿತ್ತು. ಈ ಬಾರಿ ಉಳಿದಿರುವುದು 3 ವರ್ಷ 10 ತಿಂಗಳು ಮಾತ್ರ. ಏನಿದ್ದರೂ ಇವರಿಗೆ ಕೊನೆಯ ಹಂತದಲ್ಲಿ ಅದೃಷ್ಟ ಒಲಿದಿದೆ. ಇದು ಅವರ ಈ ವರೆಗಿನ ಪರಿಶ್ರಮಕ್ಕೆ ಸಂದಿರುವ ಗೌರವ, ಪ್ರತಿಫಲ ಎನ್ನಬಹುದು.
ಬದಲಾಗಬೇಕಿದೆ: ಯಡಿಯೂರಪ್ಪ ಆಂತರ್ಯದಲ್ಲಿ ಮುಗ್ಧ ಮನಸ್ಸಿನವರಾಗಿದ್ದರೂ ಹೊರಗಡೆ ಸಿಡುಕ, ಒರಟನೆಂದೇ ಖ್ಯಾತಿ. ಸಹೋದ್ಯೋಗಿಗಳೊಂದಿಗಿನ ಇಂಥ ಒರಟು ವರ್ತನೆಯೇ ಅವರಿಗೆ ಮುಳುವಾಗಿದೆ ಎಂಬ ಮಾತೂ ಇದೆ. ಆದ್ದರಿಂದ ಈ ಬಾರಿ ಬದಲಾಗಬೇಕಿದೆ. ಸಿಡುಕುತನ ದೂರ ಮಾಡಿಕೊಂಡು ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರ ಮೆಚ್ಚುವಂಥ ಜನಪರ ಆಡಳಿತ ನೀಡಬೇಕಾಗಿದೆ. ಆ ಮೂಲಕ ಅಮಿತ್ ಶಾ ಮತ್ತು ಮೋದಿ ಜೋಡಿಯು ನೀಡಿರುವ 75ರ ರಿಯಾಯಿತಿಗೆ ತಕ್ಕ ಪ್ರತಿಫಲ ಕೊಟ್ಟು ಮುಂದಿನ ದಿನಗಳಲ್ಲಿ ಗೌರವದಿಂದ ಕಿರಿಯರಿಗೆ ಮಾರ್ಗದರ್ಶನ ನೀಡುವಂತಾಗಬೇಕಾಗಿದೆ.
ಪುತ್ತಿಗೆ ಪದ್ಮ ನಾಭ ರೈ