Advertisement

ನಾಳೆಯಿಂದ ಯಡಿಯೂರಪ್ಪ , ನಳಿನ್‌ ಪ್ರಚಾರ

12:29 AM Nov 22, 2019 | mahesh |

ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಶನಿವಾರದಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉತ್ತರ ಕರ್ನಾಟಕ ಭಾಗದಿಂದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ದಕ್ಷಿಣ ಭಾಗದಿಂದ ಪ್ರಚಾರ ಪ್ರವಾಸ ಆರಂಭಿಸಲಿದ್ದು, ಸಾರ್ವಜನಿಕ ಸಭೆ, ಕಾರ್ಯಕರ್ತರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

33 ವರ್ಷಗಳ ಬಳಿಕ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಗಳಿವೆ. ಹಾಗಾಗಿ ರಾಜ್ಯ ಸರಕಾರವನ್ನು ಸುಸ್ಥಿರಗೊಳಿಸಲು ಮತ ನೀಡುವಂತೆ ಮನವಿ ಮಾಡಲಾಗುವುದು ಎಂದು ಉಪ ಚುನಾವಣ ಉಸ್ತುವಾರಿಯಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಉಪಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು, ನಮ್ಮ “ಕೇಡರ್‌’ ಕೂಡ ಸಜ್ಜಾಗಿದೆ. ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲು ಅವರಲ್ಲದೆ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್‌ ಜೋಶಿ, ಸುರೇಶ್‌ ಅಂಗಡಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು ಸಹಿತ ಇತರ ನಾಯಕರು ನಾನಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ರವಿವಾರದೊಳಗೆ ಬೂತ್‌ ಸಮಿತಿ ರಚನೆ
ಉಪ ಚುನಾವಣೆ ನಡೆದಿರುವ 15 ಕ್ಷೇತ್ರಗಳ 4,185 ಬೂತ್‌ಗಳಲ್ಲಿ ರವಿವಾರದೊಳಗೆ ಬೂತ್‌ ಸಮಿತಿ ರಚನೆಯಾಗಲಿದೆ. ಪ್ರತಿ ಮಹಾಶಕ್ತಿ ಕೇಂದ್ರ ಮಟ್ಟದಲ್ಲಿ ಐದು ಮಂದಿಯ ಸಮಿತಿ ರಚಿಸಲಾಗಿದೆ. ಪ್ರತಿ ಬೂತ್‌ನ ಕಾರ್ಯ ಕರ್ತರ ವಾಟ್ಸ್‌ಆ್ಯಪ್‌ ಗ್ರೂಪ್‌ ಸಹ ರವಿವಾರದೊಳಗೆ ರೂಪುಗೊಳ್ಳಲಿದೆ. ಈ ಗ್ರೂಪ್‌ನ ಮೂಲಕ ಬೂತ್‌ ಮಟ್ಟಕ್ಕೆ ವಿಷಯಗಳನ್ನು ತಲುಪಿಸಲಾಗುವುದು. ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಂ ಮೂಲಕವೂ ನಾಯಕರು, ಅಭ್ಯರ್ಥಿಗಳ ಚುನಾವಣ ಪ್ರಚಾರ ಪ್ರಸಾರವಾಗಲಿದೆ. ಎಂಟು ಮೋರ್ಚಾಗಳ ಪದಾಧಿಕಾರಿಗಳು ಆಯಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

ವಿವಾದದ ಹಿನ್ನೆಲೆಯಲ್ಲಿ ಬದಲು
ಕೆ.ಆರ್‌.ಪೇಟೆ ಕ್ಷೇತ್ರದ ಚುನಾವಣ ಉಸ್ತುವಾರಿಯನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಬದಲಿಗೆ ಉಪ ಮುಖ್ಯಮಂತ್ರಿ ಡಾ|ಸಿ.ಎನ್‌.ಅಶ್ವತ್ಥ ನಾರಾಯಣ ಅವರಿಗೆ ವಹಿಸಲಾಗಿದೆ. ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ವಿವಾದ ಸೃಷ್ಟಿಯಾದ ಅನಂತರ ಉಪ ಚುನಾವಣ ಸಂದರ್ಭದಲ್ಲಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಉಸ್ತುವಾರಿ ಬದಲಾವಣೆ ಮಾಡಲಾಗಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next