ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನಂತೆ 15ನೇ ವಿಧಾನಸಭೆ ಚೊಚ್ಚಲ ವಿಧಾನಸಭೆಯಲ್ಲಿ ಶನಿವಾರ 4ಗಂಟೆಗೆ ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರ ನೇತೃತ್ವದಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ
ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರ ಸೂಚನೆ ಮೇರೆಗೆ ಬಿಎಸ್ ಯಡಿಯೂರಪ್ಪ ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದರು.ಬಳಿಕ ಭಾಷಣ ಆರಂಭಿಸಿ, ಹೋರಾಟ ಜೀನವದ ಹಾದಿಯನ್ನು ಮೆಲುಕು ಹಾಕಿದರು.
ಭಾವನಾತ್ಮಕ ಭಾಷಣ:
ಚುನಾವಣೆಯಲ್ಲಿ ಜನರು ನನ್ನನ್ನು ಬೆಂಬಲಿಸಿದ್ದಾರೆ. ಚುನಾವಣೆ ವೇಳೆಯಲ್ಲಿ ವ್ಯಾಪಕ ಟೀಕಾಪ್ರಹಾರ ನಡೆಸಲಾಯಿತು. ಎಲ್ಲದರ ನಡುವೆಯೇ ರಾಜ್ಯದ ಜನರು 104 ಸ್ಥಾನ ನೀಡಿ ಗೆಲ್ಲಿಸಿದ್ದಾರೆ. ಅಂಬೇಡ್ಕರ್ ಜಯಂತಿ ದಿನ ರಾಜ್ಯಾಧ್ಯಕ್ಷನಾಗಿದ್ದೆ. ಬಿಜೆಪಿ ಪರಿವರ್ತನಾ ಸಭೆಗೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಸಮಸ್ಯೆ ಅರಿತಿದ್ದೇನೆ.
ರಾಜ್ಯದ ರೈತರಿಗೆ, ಜನರಿಗೆ ನೀರು ಕೊಡಲಾಗಲಿಲ್ಲ. ಜನ ಬೇಸತ್ತ ಸಂದರ್ಭದಲ್ಲಿಯೇ ಚುನಾವಣೆ ನಡೆದಿತ್ತು. ಈ ವ್ಯವಸ್ಥೆಯ ಬಗ್ಗೆ ಜನರಲ್ಲಿ ಆಕ್ರೋಶ ಕಂಡಿದ್ದೇನೆ. ನೊಂದು ಬೆಂದ ಜನರಿಗೆ ಸಮಾಧಾನ ನೀಡಬೇಕು ಎಂಬ ಮಹದಾಸೆ ಹೊತ್ತು ಚುನಾವಣೆಗೆ ಹೋಗಿದ್ದೇವೆ. ಜನರು ಕೂಡಾ ಆಶೀರ್ವಾದ ಮಾಡಿದ್ದಾರೆ. ನೇಕಾರರ ಸಾಲ ಮನ್ನಾ ಮಾಡಬೇಕು, ರೈತರ ಸಾಲಮನ್ನಾ ಮಾಡಬೇಕು ಎಂಬ ಆಸೆ ಹೊಂದಿದ್ದೇನೆ. 113 ಸ್ಥಾನ ಗೆಲ್ಲಿಸಿದ್ದರೆ ಅಭಿವೃದ್ಧಿಯ ಚಿತ್ರಣವನ್ನೇ ಬದಲು ಮಾಡುತ್ತಿದ್ದೇನೆ. ಆದರೆ ದೈವೇಚ್ಛೆ ಬೇರೆ ಇದ್ದಿರಬಹುದು.
ವಿಶ್ವಾಸಮತ ಯಾಚನೆಗೂ ಮುನ್ನ ರಾಜೀನಾಮೆ:
ಭಾವನಾತ್ಮಕ ಭಾಷಣ ಮಾಡಿದ ಬಿಎಸ್ ಯಡಿಯೂರಪ್ಪ ಕೊನೆಯಲ್ಲಿ ನಾನು ವಿಶ್ವಾಸಮತ ಪ್ರಸ್ತಾಪ ಮಂಡಿಸದೇ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿ ಗದ್ಗದಿತರಾದರು. ಜನತಾ ಜನಾರ್ದನರ ಮುಂದೆ ಹೋಗಿ ನ್ಯಾಯ ಕೇಳುತ್ತೇನೆ. ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವುದಾಗಿ ಹೇಳಿ ವಿಧಾನಸಭೆ ಕಲಾಪದಿಂದ ನಿರ್ಗಮಿಸಿದರು.