Advertisement

ಯಡಿಯೂರಪ್ಪ ಸಿಎಂ ಆಗಿರಲು ಯೋಗ್ಯರಲ್ಲ

08:29 PM Apr 12, 2021 | Team Udayavani |

ಮಸ್ಕಿ: ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಯಡಿಯೂರಪ್ಪ ಸರಕಾರದಿಂದಲೇ ಇಂತಹ ಪರಿಸ್ಥಿತಿ ಬಂದಿದೆ. ಸಿಎಂ ಕುರ್ಚಿಯಲ್ಲಿ ಮುಂದುವರಿಯುವ ಯೋಗ್ಯತೆ ಯಡಿಯೂರಪ್ಪ ಅವರಿಗಿಲ್ಲ. ಕೂಡಲೇ ಅವರು ರಾಜೀನಾಮೆ ಕೊಟ್ಟು ಮನೆ ಸೇರಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದ ಪೊಲೀಸ್‌ ಠಾಣೆ ಆವರಣ ಪಕ್ಕದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಬಸನಗೌಡ ತುರುವಿಹಾಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರಿ ನೌಕರರಿಗೆ ಸಂಬಳ ಕೊಡಲು ಈ ಸರಕಾರದಲ್ಲಿ ದುಡ್ಡಿಲ್ಲ. ಸಾರಿಗೆ ನೌಕರರು ಬೀದಿಗೆ ಇಳಿದಿದ್ದಾರೆ.

Advertisement

ಜನಪರ ಆಡಳಿತ ನೀಡಲು ವಿಫಲರಾದ ಯಡಿಯೂರಪ್ಪ ಕೇವಲ ಕಮಿಷನ್‌ ಸರಕಾರ ನಡೆಸುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದಾರೆ. ಈ ಸರಕಾರ 30 ಪರ್ಸಂಟ್‌ ಸರಕಾರವಾಗಿದ್ದು, ವಿಧಾನ ಸೌಧದದ ಎಲ್ಲ ಮೂಲೆಯ ಕಂಬಗಳು ಇದನ್ನು ಸಾರುತ್ತವೆ. ಸ್ವತಃ ಬಿಜೆಪಿ ಸಚಿವ ಕೆ.ಎಸ್‌. ಈಶ್ವರಪ್ಪ, ಬಸವರಾಜ ಯತ್ನಾಳರೇ ಹೇಳಿದ್ದಾರೆ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರ ದುರಾಡಳಿತ ಜನರಿಗ ಬೇಸರ ತಂದಿದೆ. ಈಗ ಉಪಚುನಾವಣೆ ಮೂಲಕ ನಿಮ್ಮ ಮುಂದೆ ಮತ್ತೂಂದು ಅವಕಾಶ ಬಂದಿದೆ. ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಮಸ್ಕಿಗೆ ಸುಮಾರು 5 ಸಾವಿರ ಕೋಟಿ ರೂ. ಕೊಟ್ಟಿದ್ದೆ. ಇದೆಲ್ಲವನ್ನೂ ಉಪಯೋಗಿಸಿಕೊಂಡ ಪ್ರತಾಪಗೌಡ ಪಾಟೀಲ, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಕೆಲವೇ ದಿನಗಳಲ್ಲಿ 30-40 ಕೋಟಿ ರೂ.ಗೆ ಮಾರಾಟವಾಗಿದ್ದು, ಬಿಜೆಪಿಯಿಂದ ಖರೀದಿಯಾದ 17 ಜನ ಶಾಸಕರಲ್ಲಿ ಪ್ರತಾಪಗೌಡ ಪಾಟೀಲ್‌ ಕೂಡ ಒಬ್ಬರು.

600-700 ಕೋಟಿ ರೂ. ಹಣ ಕೊಟ್ಟು ಇವರನ್ನು ಖರೀದಿ ಮಾಡಿದ್ರು. ಈಗ ಮತ್ತೆ 600-700 ಕೋಟಿ ರೂ. ಖರ್ಚು ಮಾಡಿ ಉಪಚುನಾವಣೆ ನಡೆಸಿದ್ದಾರೆ. ಮಸ್ಕಿಯಲ್ಲೂ ವಿಜಯೇಂದ್ರ ಗೋಣಿ ಚೀಲದಲ್ಲಿ ಹಣ ತುಂಬಿಕೊಂಡು ಕುಳಿತಿದ್ದಾರೆ. ಹಣದ ಆಟ ನಡೆಯಲ್ಲ. ಬಿಜೆಪಿ ನೋಟು ಪಡೆದು ಕಾಂಗ್ರೆಸ್‌ಗೆ ವೋಟು ಹಾಕಿ ಎಂದು ಹೇಳಿದರು. ಈ ಭಾಗದಲ್ಲಿ 5ಎ ಕಾಲುವೆ ಹೋರಾಟ ನಡೆದಿದೆ. ರೈತರು ಕಷ್ಟದಲ್ಲಿದ್ದಾರೆ. ಈ ಭಾಗಕ್ಕೆ ನೀರಿಲ್ಲ ಎಂದು ಹೋರಾಟ ನಡೆಸಿದ್ರು. ಆದರೆ ಬಿಜೆಪಿ ಸರಕಾರ, ಪ್ರತಾಪಗೌಡ ಪಾಟೀಲ್‌ ಇದಕ್ಕೆ ವಿರೋಧ ಮಾಡುತ್ತಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ ಸರಕಾರದ ಅವಧಿ  ಯಲ್ಲಿ ಪ್ರತಾಪಗೌಡ ನನ್ನ ಬಳಿ ಒಂದು ಮಾತು ಹೇಳಿದ್ದರೆ ಈ ಯೋಜನೆ ಜಾರಿ ಮಾಡುತ್ತಿದ್ದೆ. ಆದರೆ ಈಗಲೂ ಕಾಲಮಿಂಚಿಲ್ಲ, 2023ರಲ್ಲಿ ಕಾಂಗ್ರೆಸ್‌ ಅಧಿ ಕಾರಕ್ಕೆ ಬರಲಿದೆ. ಆಗ ಯೋಜನೆ ಜಾರಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

Advertisement

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, 213 ಮತಗಳ ಅಂತದಿಂದ ಸೋತಿರುವ ಆರ್‌.ಬಸನಗೌಡ ತುರುವಿಹಾಳನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಯುದ್ದಗಳು ರಣಾಂಗಣದಲ್ಲಿ ಆರಂಭವಾಗುವ ಬದಲು ಮನುಷ್ಯನ ಮನಸ್ಸಿನಲ್ಲಿ ಮೂಡಬೇಕು. ನಿಮ್ಮ ಸ್ವಾಭಿಮಾನ, ನಿಮ್ಮ ಅಭಿಮಾನ, ನೀವು ಕೊಟ್ಟ ವೋಟು, ಅ ಧಿಕಾರ ಎಲ್ಲವನ್ನೂ ಪ್ರತಾಪಗೌಡ ಪಾಟೀಲ್‌ ಮಾರಾಟ ಮಾಡಿಕೊಂಡಿದ್ದಾನೆ. ಆತ ನೈತಿಕತೆ ಕಳೆದುಕೊಂಡಿದ್ದಾನೆ.

ಭಗವಂತನ ಕೃಪೆ ಕೂಡ ಪ್ರತಾಪಗೌಡನ ಮೇಲೆ ಇರಲಿಲ್ಲ. ಹೀಗಾಗಿ ಉಪಚುನಾವಣೆ ಬಂದಿದೆ. ಇದು ಜನರ ಪಾಲಿಗೆ ಬಂದ ಅವಕಾಶ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಏ.17ರಂದು ನಡೆಯುವ ಚುನಾವಣೆಯಲ್ಲಿ ಬಸನಗೌಡನ ಹಸ್ತದ ಗುರುತಿಗೆ ಮತ ಹಾಕಿ ಗೆಲ್ಲಿಸಬೇಕು. ಕಾಂಗ್ರೆಸ್‌ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್‌ನ ಇತಿಹಾಸ ದೇಶದ ಇತಿಹಾಸ. ಎಂದರು. ನಾನು ಮತ್ತೆ ಬರುವೆ: ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಇಲ್ಲಿಯೇ ಠಿಕಾಣಿ ಹೂಡಿದ್ದಾರಂತೆ. ಅವರು ಸರಿಯಾದ ಕೆಲಸ ಮಾಡಿದ್ರೆ ಇಲ್ಲಿ ಠಿಕಾಣಿ ಹೂಡುವ ಅಗತ್ಯವೇನಿತ್ತು? ಕೊರೊನಾ ಸಮಯದಲ್ಲಿ ಬಡವರನ್ನು ರಕ್ಷಣೆ ಮಾಡಲು ಆಗಿಲ್ಲ.

ಎಲ್ಲ ವರ್ಗದ ನೌಕರರು ಸಂಬಳ ಇಲ್ಲದೇ ಬೀದಿಗೆ ಇಳಿದ್ರು. ಕಾರ್ಮಿಕರು, ದುಡಿಯುವ ವರ್ಗದವರಿಗೆ ರಕ್ಷಣೆ ಸಿಗಲಿಲ್ಲ. ಗುಳೆ ಹೋಗಿದ್ದ ಜನರನ್ನು ಊರಿಗೆ ಮುಟ್ಟಿಸಲು ಆಗಲಿಲ್ಲ. ಕಾಂಗ್ರೆಸ್‌ ಪಕ್ಷ ಜನರ ಬಳಿ ಹೋಗಿ ಅವರ ಕಷ್ಟಕ್ಕೆ ನೆರವಾಗಿದೆ. ಬಡವರಿಗಾಗಿಯೇ ಕಾಂಗ್ರೆಸ್‌ ದುಡಿಯುತ್ತಿದೆ. 10 ಕೆಜಿ ಅಕ್ಕಿ, ಸಾವಿರಾರು ಉದ್ಯೋಗಗಳೇ ಸೃಷ್ಠಿ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಬಡವರಿಗೆ ಕಾಸು ಇಲ್ಲದೇ ಚಿಕಿತ್ಸೆ ನೀಡಲಾಗುತ್ತದೆ ಇವೆಲ್ಲ ಮುಂದಿನ ಚುನಾವಣೆಗೆ ಕಾಂಗ್ರೆಸ್‌ ಪ್ರಣಾಳಿಕೆ ಎಂದು ಹೇಳಿದ ಡಿಕೆ ಶಿವಕುಮಾರ್‌, ಬಿಜೆಪಿಯವರು ದುಡ್ಡು ಹಂಚುತ್ತಾ ಇದ್ದಾರೆ. ಎಲ್ಲರೂ ದುಡ್ಡು ತಗೊಳ್ಳಿ. ಆದರೆ ಬಿಜೆಪಿ ನೋಟು, ಕಾಂಗ್ರೆಸ್‌ಗೆ ವೋಟು ಹಾಕಿ. ನನ್ನ ಮತ್ತೆ ಮಸ್ಕಿಗೆ ಬರುವ ಇಲ್ಲಿಯೇ ಠಿಕಾಣಿ ಹೂಡುವೆ.

ಚುನಾವಣೆ ಡಬ್ಟಾ ತೆಗೆದುಕೊಂಡೇ ಹೋಗುವೆ, ಬಸನಗೌಡನ ವಿಧಾನ ಸಭೆಗೆ ಕರೆದುಕೊಂಡು ಹೋಗುವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಆರ್‌.ಬಸನಗೌಡ ತುರುವಿಹಾಳ ಮಾತನಾಡಿ, ಈ ಬಾರಿ ನನಗೆ ಅವಕಾಶ ಮಾಡಿ ಕೊಡಿ ಜೀವನದಲ್ಲಿ ನಾನು ಯಾವತ್ತೂ ಮಸ್ಕಿಯ ಜನರ ಋಣ ಮರೆಯುವುದಿಲ್ಲ.

ಈ ಹಿಂದೆ ನನಗೆ ಕೊರೊನಾ ಪಾಸಿಟಿವ್‌ ಬಂದಾಗಲೇ ಈ ಜಗತ್ತಿನಿಂದ ಹೋಗುತ್ತೇನೆ ಎನಿಸಿತ್ತು. ಆದರೆ ದೇವರ ಆಶೀರ್ವಾದದಿಂದ ನಿಮ್ಮ ಮುಂದೆ ಇದ್ದೇನೆ. ಕಾಂಗ್ರೆಸ್‌ ಸೇರ್ಪಡೆ, ಚುನಾವಣೆಗೆ ಸ್ಪರ್ಧೆ ಮಾಡಿದ ಬಳಿಕ ಈ ಕ್ಷೇತ್ರದ ಜನರು ತೋರಿದ ಅಭಿಮಾನ, ಪ್ರೀತಿಯಿಂದ ನನ್ನ ಆಯಸ್ಸು ಮತ್ತಷ್ಟು ಹೆಚ್ಚಾಗಿದೆ. ಮಸ್ಕಿ ಜನರ ಸೇವೆ ಮಾಡುವುದಕ್ಕಾಗಿಯೇ ಇದೆಲ್ಲ ಆಗಿದೆ. ಹೀಗಾಗಿ ಏ.17ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಗಳನ್ನು ಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಭಾಷಣ ಮಾಡುವಾಗ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಬಸನಗೌಡ ತುರುವಿಹಾಳ ಭಾವುಕರಾದರು. ಕೇಂದ್ರ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next