Advertisement

ಯಡಿಯೂರಪ್ಪ ಗರಂ: ಪದಾಧಿಕಾರಿಗಳ ಸಭೆಯಲ್ಲಿ ಕಾರ್ಯಕರ್ತರು, ಮುಖಂಡರಿಗೆ ಕ್ಲಾಸ್‌

12:37 PM Nov 03, 2019 | Team Udayavani |

ಹುಬ್ಬಳ್ಳಿ: ಹದಿನೇಳು ಜನ ಅನರ್ಹ ಶಾಸಕರ ತ್ಯಾಗದಿಂದಲೇ ನಮ್ಮ ಸರಕಾರ ಬಂದಿದೆ. ಅವರ ತೀರ್ಮಾನ ಕೇವಲ ಯಡಿಯೂರಪ್ಪ ಅಥವಾ ಇನ್ನಾರೋ ರಾಜ್ಯದ ನಾಯಕರಿಂದ ಆಗಿದ್ದಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದು, ಅವರೇ ಮುಂದೆ ನಿಂತು ಆ ಶಾಸಕರನ್ನು ಮುಂಬಯಿಯಲ್ಲಿರಿಸಿದ್ದು. ಇಷ್ಟಿದ್ದರೂ ಅವರ ಪರವಾಗಿ ಧ್ವನಿ ಎತ್ತದೆ, ಯಾರನ್ನು ತೃಪ್ತಿಪಡಿಸಲು ಈ ರೀತಿ ಮಾತನಾಡುತ್ತಿದ್ದೀರಿ?

Advertisement

ಹೀಗೆಂದು ಪಕ್ಷದ ಕಾರ್ಯಕರ್ತರನ್ನು ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹಾಗೂ ಆಕ್ರೋಶ ವ್ಯಕ್ತ ಪಡಿಸಿ ದ್ದಾರೆನ್ನಲಾದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಏಳು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಕುರಿತ ಪಕ್ಷದ ಪ್ರಮುಖರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ವೀಡಿಯೋ ಇದು ಎಂದು ಹೇಳಲಾಗುತ್ತಿದೆ.

ಉತ್ತರ ಕರ್ನಾಟಕದ ಏಳು ವಿಧಾನಸಭೆ ಕ್ಷೇತ್ರಗಳ ಕುರಿತು ಅ.26ರಂದು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪ್ರಮುಖರು ಹಾಗೂ ಜಿಲ್ಲಾ-ತಾಲೂಕು ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ, ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳ ಪ್ರಮುಖರ ಸಭೆಯಲ್ಲಿ ಕಾರ್ಯಕರ್ತರು ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಅಥಣಿ ಹಾಗೂ ಮಾಜಿ ಶಾಸಕ ರಾಜು ಕಾಗೆ ಅವರಿಗೆ ಕಾಗವಾಡ ಕ್ಷೇತ್ರಕ್ಕೆ ಟಿಕೆಟ್‌ ನೀಡ ಬೇಕೆಂದು ಒತ್ತಾಯಿಸಿದ್ದರಿಂದ ಯಡಿಯೂರಪ್ಪ ಅವರು ಆಕ್ರೋಶಗೊಂಡು ಈ ರೀತಿ ಮಾತನಾಡಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿದೆ.

ವೀಡಿಯೋದಲ್ಲಿ ಏನಿದೆ?
ನಿಮ್ಮ ಮಾತಿನ ಧಾಟಿ ನೋಡಿದರೆ ಈ ಸರಕಾರ ಉಳಿಸಬೇಕು ಎಂಬ ಅನಿಸಿಕೆ ಇದೆ ಎಂದೆನಿಸುತ್ತಿಲ್ಲ. ನಿಮಗೆ ಗೊತ್ತಿದೆ ತಾನೆ? 17 ಶಾಸಕರು ಕೈಗೊಂಡ ತೀರ್ಮಾನದಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. 17 ಶಾಸಕರ ತೀರ್ಮಾನ ಯಡಿಯೂರಪ್ಪ ಅಥವಾ ರಾಜ್ಯದ ಇನ್ನಿತರ ನಾಯಕರ ತೀರ್ಮಾನದಿಂದ ಆಗಿದ್ದಲ್ಲ. ಬದಲಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದು, ಅವರೇ ನಿಂತು, ಶಾಸಕರಿಗೆ ಮುಂಬಯಿಯಲ್ಲಿ ಎರಡೂವರೆಯಿಂದ ಮೂರು ತಿಂಗಳವರೆಗೆ ಇರಿಸುವಂತೆ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ.

ಮುಂದಿನ ಮೂರುವರೆ ವರ್ಷಗಳವರೆಗೆ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದ್ದ ನಾವುಗಳು, 17 ಜನ ಶಾಸಕರ ತ್ಯಾಗದಿಂದ ಆಡಳಿತ ಪಕ್ಷದಲ್ಲಿ ಕುಳಿತುಕೊಳ್ಳುವಂತಾಗಿದೆ. ನಮ್ಮನ್ನು ಅಧಿಕಾರಕ್ಕೆ ತರಬೇಕು ಎಂಬುದಕ್ಕೆ ಅವರಿಗೇನು ಹುಚ್ಚು ಹಿಡಿದಿತ್ತಾ. ನಿಮ್ಮಿಂದಾಗಲಿ, ದೊಡ್ಡ ಭಾಷಣ ಮಾಡಿದ, ಉಪದೇಶ ನೀಡಿದ ವೇದಿಕೆ ಮೇಲಿದ್ದವರಿಂದಲೂ ಅವರ ತ್ಯಾಗಕ್ಕೆ ಮೆಚ್ಚುಗೆ ಹಾಗೂ ನಮಗೆ ನೆರವಾದವರಿಗೆ ನಾವು ನೆರವಾಗಬೇಕು ಎಂಬ ಒಂದೇ ಒಂದು ಮಾತು ಹೊರಬರಲಿಲ್ಲವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅನರ್ಹ ಶಾಸಕರನ್ನೇನು ಮಾಡಬೇಕು?
ಅಥಣಿಯಲ್ಲಿ ಲಕ್ಷ್ಮಣ ಸವದಿ, ಕಾಗವಾಡದಲ್ಲಿ ರಾಜು ಕಾಗೆ ಬಗ್ಗೆ ಒತ್ತಾಯ ಮಾಡುತ್ತಿದ್ದೀರಿ. ಅವರಿಗೆ ಟಿಕೆಟ್‌ ನೀಡಿದರೆ ನಮ್ಮನ್ನು ನಂಬಿ ಶಾಸಕ ಸ್ಥಾನ ತ್ಯಾಗ ಮಾಡಿದ ಅವರ ಗತಿ ಏನಾಗಬೇಕೆಂದು ಯೋಚಿಸಿದ್ದೀರಾ. ಲಕ್ಷ್ಮಣ ಸವದಿ ಅವರದ್ದು ವಿಶೇಷ ಪ್ರಕರಣ. ಅದನ್ನು ಕೇಂದ್ರ ನಾಯಕತ್ವ ತೀರ್ಮಾನ ಕೈಗೊಳ್ಳುತ್ತದೆ. ರಾಜು ಕಾಗೆ ಬಗ್ಗೆ ಹೇಳುತ್ತೀರಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 33 ಸಾವಿರ ಮತಗಳ ಅಂತರದಿಂದ ಸೋತಿರುವ ವ್ಯಕ್ತಿಗೆ ಟಿಕೆಟ್‌ ನೀಡಬೇಕಾ? ನಮಗಾಗಿ ಶಾಸಕ ಸ್ಥಾನ ತ್ಯಾಗ ಮಾಡಿದ ಅಲ್ಲಿನ ಅನರ್ಹ ಶಾಸಕನನ್ನು ಏನು ಮಾಡಬೇಕು? ಗೋಕಾಕ ಕ್ಷೇತ್ರದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದಿದ್ದಾರೆ.

ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ
ಯಾರನ್ನು ತೃಪ್ತಿಪಡಿಸಲು ಇಂತಹ ಮಾತು ಗಳನ್ನು ಹೇಳುತ್ತಿದ್ದೀರಿ, ಇಂತಹ ಮಾತುಗಳ ಬದಲಾಗಿ ಯಡಿಯೂರಪ್ಪ ಅವರೇ ಅನರ್ಹ ಶಾಸಕರಿಗೆ ಟಿಕೆಟ್‌ ನೀಡಿದರೆ ಅವರು ಗೆಲ್ಲುವ ಸಾಧ್ಯತೆಗಳು ಕಡಿಮೆ ಇವೆ. ಇದಕ್ಕೆ ಇದೆಲ್ಲ ಕಾರಣಗಳಿವೆ ಎಂದು ಹೇಳಿದ್ದರೆ ನಾನು ಇಷ್ಟೊಂದು ಮಾತನಾಡುವ ಪ್ರಮೇಯ ಬರುತ್ತಿರಲಿಲ್ಲ. ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ನಿಮ್ಮ ಅನಿಸಿಕೆಗಳನ್ನು ಹೇಳಿದ್ದೀರಿ. ಕೇಂದ್ರದ ವರಿಷ್ಠರ ಗಮನಕ್ಕೆ ತರುತ್ತೇವೆ. ಅವರೇನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡೋಣ ಎಂದರು.

ನಾನು ತಪ್ಪು ಮಾಡಿಬಿಟ್ಟೆ
ಅನರ್ಹ ಶಾಸಕರಿಗೆ ಟಿಕೆಟ್‌ ನೀಡಿ, ನಮ್ಮ ಕಷ್ಟಕ್ಕೆ ಅವರಾಗಿದ್ದಾರೆ. ಅವರಿಗೆ ನಾವು ಸಹಾಯ ಮಾಡೋಣ ಎಂದು ಒಬ್ಬರೇ ಒಬ್ಬರಿಂದ ಮಾತು ಬರಲಿಲ್ಲ. ಇಂತಹ ಸ್ಥಿತಿಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನಗೇನೂ ಸಿಎಂಗಿರಿ ಬೇಕಿಲ್ಲ. ಮೂರ್‍ನಾಲ್ಕು ಬಾರಿ ಸಿಎಂ ಆಗಿದ್ದೇನೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಒಳ್ಳೆಯ ಕೆಲಸ ಆಗುತ್ತದೆ ಎಂಬ ಅಪೇಕ್ಷೆ ನಮ್ಮೆಲ್ಲರದು. ನಿಮ್ಮಿಂದ ಇಂತಹ ದೊಡ್ಡತನ, ಧಾರಾಳತನ, ವಾಸ್ತವದ ಮಾತುಗಳು ಬರಲಿಲ್ಲ. ನಮ್ಮನ್ನು ನಂಬಿ ಬಂದ ಅವರು ಮೂರ್ಖರಾ, ಇಲ್ಲ ಹುಚ್ಚರಾ? ನಮ್ಮನ್ನು ಅಧಿಕಾರಕ್ಕೆ ತರುವ ಅಗತ್ಯ ಅವರಿಗೇನಿತ್ತು. ಇದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಈಗ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರದಲ್ಲಿ ತೊಡಗಿದ್ದಾರೆ. ತೀರ್ಪು ನ. 4-5ಕ್ಕೆ ಬರಬಹುದು. ನಾನು ರಾಜ್ಯಾಧ್ಯಕ್ಷನಾಗಿದ್ದೆ. ನನ್ನ ರಾಜಕೀಯ ಜೀವನದಲ್ಲಿ ಇಂತಹ ನೋವು ನಿರೀಕ್ಷಿಸಿಯೇ ಇರಲಿಲ್ಲ. ನಾನೇ ದೊಡ್ಡ ಅಪರಾಧ ಮಾಡಿದ್ದೇನೆ ಎಂದೆನಿಸುತ್ತಿದೆ ಎಂದು ಬಿಎಸ್‌ವೈ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next