ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ
ಸಚಿವರು ಹಾಗೂ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
Advertisement
ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ನಡುವೆ ನಡೆದಿದೆಎನ್ನಲಾದ ಕಪ್ಪಕಾಣಿಕೆಯ ಸಂಭಾಷಣೆ ಸೀಡಿಯನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ, ಆ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು
ಆಗ್ರಹಿಸಿದ್ದಾರೆ. ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರುಗಳಾದ ಬಸವರಾಜ ರಾಯರೆಡ್ಡಿ, ರಮೇಶ್ ಕುಮಾರ್, ಎಂ.ಬಿ.ಪಾಟೀಲ್,
ಡಾ. ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ ಮತ್ತು ಎಚ್.
ಎಂ.ರೇವಣ್ಣ, ಮುಖ್ಯಮಂತ್ರಿ ವಿರುದ್ಧ ರಾಜಕೀಯ ಪ್ರೇರಿತರಾಗಿ ಯಡಿಯೂರಪ್ಪ ಆರೋಪ ಮಾಡಿದ್ದಾರೆ. ಅನಂತ ಕುಮಾರ್
ಚುನಾವಣೆವರೆಗೂ ಈ ಪ್ರಕರಣವನ್ನು ಜೀವಂತ ಇಡುವಂತೆ ಮಾತನಾಡಿರುವುದು “ಸೀಡಿ’ಯಲ್ಲಿ ಬಹಿರಂಗೊಂಡಿದೆ ಎಂದು
ದೂರಿದರು. ಅಲ್ಲದೆ, ತಾವು ಅಧಿಕಾರದಲ್ಲಿದ್ದಾಗ ಹೈಕಮಾಂಡ್‌ಗೆ ಹಣ ಕಳುಹಿಸಿಕೊಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಇದರ
ಬಗ್ಗೆ ಮೊದಲಿಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ಗೋವಿಂದ ರಾಜ್ ಮನೆಯ ಮೇಲೆ ದಾಳಿ ಮಾಡಿದಾಗ ಡೈರಿ ಸಿಕ್ಕಿರುವ ಬಗ್ಗೆ ಮಾಹಿತಿ ಇರುವುದಾಗಿ ಬಿಎಸ್‌ವೈ ಹೇಳುತ್ತಾರೆ. ಅವರಿಗೆ ಡೈರಿ ಯಾರು ಕೊಟ್ಟಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು. ರಮೇಶ್ ಕುಮಾರ್ ಮಾತನಾಡಿ, ಹೈಕಮಾಂಡ್‌ಗೆ ಸಿಎಂ ಒಂದು ರೂಪಾಯಿ ಕೊಟ್ಟಿದ್ದರೂ ಅದು ಅಪರಾಧವೇ. ಯಡಿಯೂರಪ್ಪ ಮಾಡಿರುವ ಆರೋಪಕ್ಕೆ ಸಾಕ್ಷಿ ನೀಡಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ನಿಮಿಷ ಕೂಡ ಕುರ್ಚಿಯಲ್ಲಿ ಇರುವುದಿಲ್ಲ. ನಾವೂ ಸಂಪುಟದಲ್ಲಿ ಉಳಿಯುವುದಿಲ್ಲ ಎಂದು ಹೇಳಿದರು. ಹೈಕಮಾಂಡ್‌ಗೆ ಹಣ ನೀಡುವ ಸಂಸ್ಕೃತಿ ರಾಷ್ಟ್ರೀಯ ಪಕ್ಷಗಳಲ್ಲಿ ಇಲ್ಲವೇ ಎಂಬ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ರಮೇಶ್ ಕುಮಾರ್, “ಭ್ರಷ್ಟಾಚಾರ ತಡೆಗಟ್ಟುವ ಬಗ್ಗೆ ಮಾತನಾಡುವ ಪ್ರಧಾನಿ ಚುನಾವಣೆ ಸುಧಾರಣೆ ತರಲಿ’ ಎಂದು ಆಗ್ರಹಿಸಿದರು.