Advertisement

ದೊರೆಸ್ವಾಮಿ ಎಷ್ಟು ಲಾಠಿ ಏಟು ತಿಂದಿದ್ದಾರೆ, ಯಾವ ವಯಸ್ಸಿನಲ್ಲಿ ಹೋರಾಟ ಮಾಡಿದ್ದರು: ಯತ್ನಾಳ್

10:01 AM Feb 29, 2020 | keerthan |

ಚಿತ್ರದುರ್ಗ: ಎಚ್.ಎಸ್. ದೊರೆಸ್ವಾಮಿ ಯಾವ ವಯಸ್ಸಿನಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು ಎನ್ನುವುದು ಗೊತ್ತಿಲ್ಲ. ಅವರು ಸಾವರ್ಕರರಷ್ಟು ಲಾಠಿ ಏಟು ತಿಂದಿದ್ದಾರಾ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟ ಮಾಡುವಾಗ ಯತ್ನಾಳ್ ಹುಟ್ಟಿದ್ದರಾ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ಹೋರಾಟದ ವೇಳೆಯಲ್ಲಿ ಕುಮಾರಸ್ವಾಮಿಯೂ ಹುಟ್ಟಿರಲಿಲ್ಲ ಎಂದರು.

ಕುಮಾರಸ್ವಾಮಿ ರಾಜಕೀಯಕ್ಕೆ ಯಾಕೆ ಬಂದರು, ಹೇಗೆ ಸಾವಿರಾರು ಕೋಟಿ ರೂ. ಹಣ ಹೇಗೆ ಸಂಪಾದಿಸಿದರು ಎಂಬುದು ಗೊತ್ತಿದೆ. ನನ್ನ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ದೊರೆಸ್ವಾಮಿ ಆನೆ ಇದ್ದಂತೆ. ಆನೆ ನಡೆಯುವಾಗ ನಾಯಿ ಬೊಗಳಿದರೆ ಏನು ಆಗದು ಎಂಬ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್ ದೊರೆಸ್ವಾಮಿ ಆನೆಯೊ, ಹಂದಿಯೊ ತಿಳಿಯದು ಎಂದು ವ್ಯಂಗ್ಯವಾಡಿದರು.

ತೋಟಗಾರಿಕಾ ಸಚಿವ ನಾರಾಯಣಗೌಡ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ಪಾಕಿಸ್ಥಾನಕ್ಕೆ ಜೈ ಅಂದಿಲ್ಲ. ನಮ್ಮದೇ ದೇಶದ ಮತ್ತೊಂದು ರಾಜ್ಯಕ್ಕೆ ಜೈಕಾರ ಹಾಕಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ಧ ಕನ್ನಡಪರ ಹೋರಾಟಗಾರರು ಧ್ವನಿ ಎತ್ತಲಿಲ್ಲ. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಮೊಳಗಿದಾಗ ಈ ಭೂ ಮಾಫಿಯಾ ಹೋರಾಟಗಾರರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

Advertisement

ಶಾಸಕ ರಮೇಶ ಕುಮಾರ್ ಅವರಿಂದ ಆದರ್ಶ ಕಲಿಯುವ ಅಗತ್ಯವಿಲ್ಲ. ನನ್ನ ಮೇಲೆ ಯಾವ ಭೂಕಬಳಿಕೆ, ನಕಲಿ ನೋಟ್ ಮಾಡಿರುವ ಕೇಸುಗಳಿಲ್ಲ. ಅವರ ಇತಿಹಾಸ ನಮಗೂ ಗೊತ್ತಿದೆ. ಸಾಚಾ ಎಂಬಂತೆ ಮಾತನಾಡುವ ಬದಲು ತಮ್ಮ ಮನೆಯನ್ನು ಮೊದಲು ಶುಚಿಗೊಳಿಸಿಕೊಳ್ಳಲಿ. ಸತ್ಯಹರಿಶ್ಚಂದ್ರನ ಸಂತತಿಯವರಂತೆ ಮಾತನಾಡುವುದನ್ನು ಕಡಿಮೆ ಮಾಡಲಿ ಎಂದು ತಿರುಗೇಟು ನೀಡಿದರು.

ನನ್ನ ವಿರುದ್ಧ 23 ಪ್ರಕರಣಗಳಿವೆ. ನೀರಾವರಿ ಯೋಜನೆಗೆ ನಡೆದ ಹೋರಾಟ, ಪ್ರಧಾನಿ ನರೇಂದ್ರ ಮೋದಿ ಪರವಾಗಿ ಧ್ವನಿ ಎತ್ತಿದ ಪರಿಣಾಮ ಪ್ರಕರಣ ದಾಖಲಾಗಿವೆ. ಅತ್ಯಾಚಾರ, ಭೂಕಬಳಿಕೆ ಹಾಗೂ ನಕಲಿ ನೋಟು ದಂಧೆಯ ಪ್ರಕರಣ ನನ್ನ ಮೇಲಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ಮೊದಲು ಕ್ಷಮೆ ಕೇಳಲಿ. ಎಲ್ಲರೂ ಸದನಕ್ಕೆ ಬನ್ನಿ ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದರು.

ಹೌದು ನಾನು ಆರೆಸ್ಸೆಸ್ಸ್
ಹೌದು ನಾನು ಆರೆಸ್ಸೆಸ್ಸ್ ಏನ್ ಮಾಡ್ತಿರಾ? ನಾನು ದೇಶ ವಿರೋಧಿ ಪಾಕಿಸ್ಥಾನದ ಏಜೆಂಟ್ ಅಲ್ಲ. ದೇಶದ ಪರವಾಗಿ ಮಾತನಾಡುತ್ತೇನೆ. ಯಾರ ಭಯವೂ ಇಲ್ಲ. ನಮ್ಮ ಪೊಲೀಸರು ಗಟ್ಟಿ ನಿರ್ಧಾರ ಮಾಡದಿದ್ದರೆ ಮಂಗಳೂರು ಮತ್ತೊಂದು ದಿಲ್ಲಿಯಾಗುತ್ತಿತ್ತು. ದಿಲ್ಲಿಯಲ್ಲಿ ಪೊಲೀಸರಿಗೆ ಬಂದೂಕು ತೋರಿಸುತ್ತಿದ್ದಾರೆ. ಇದನ್ನು ವಿರೋಧ ಮಾಡುವುದು ಬಿಟ್ಟು ಯತ್ನಾಳ್ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ಸಿನವರಿಗೆ ನಾಚಿಕೆ ಆಗಬೇಕು ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next