ನಟನೆ, ನಿರ್ದೇಶನ, ನಿರೂಪಣೆ, ಪತ್ರಿಕೋದ್ಯಮ… ಹೀಗೆ ಎಲ್ಲದರಲ್ಲೂ ಬಿಝಿಯಾಗಿರುವ ಯತಿರಾಜ್ ಈಗ “ಸಂಜು’ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಅದಕ್ಕೆ ಕಾರಣ ಸಂಜು ಮೂಡಿಬಂದ ರೀತಿ. ಯಾವ ಸಂಜು, ಏನ್ ಕಣ್ಣು ಎಂದು ನೀವು ಕೇಳಬಹುದು. “ಸಂಜು’ ಎಂಬ ಚಿತ್ರವೊಂದು ಇಂದು ತೆರೆಕಾಣುತ್ತಿದೆ.
ಇದು ಯತಿರಾಜ್ ನಿರ್ದೇಶನದ ಸಿನಿಮಾ. ಈಗಾಗಲೇ ಟ್ರೇಲರ್, ಹಾಡು ಮೂಲಕ ವಿಶ್ವಾಸ ಮೂಡಿಸಿರುವ ಈ ಚಿತ್ರವನ್ನು ಪ್ರೇಕ್ಷಕ ಇಷ್ಟಪಡುತ್ತಾನೆ ಎಂಬ ವಿಶ್ವಾಸ ಯತಿರಾಜ್ ಗಿದೆ.
ಚಿತ್ರದ ಬಗ್ಗೆ ಮಾತನಾಡುವ ಯತಿರಾಜ್, “ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಿರುತ್ತದೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ವಿಶೇಷವಾಗಿ ಹದಿಹರೆಯದಲ್ಲಿ ಬಹಳಷ್ಟು ಏರಿಳಿತಗಳು, ಸೋಲುಗಳು, ಹತಾಶೆಗಳು ಅವಮಾನಗಳು ಆಗುತ್ತವೆ. ಕೆಲವರು ಅದನ್ನು ಸುಲಭವಾಗಿ ಮೆಟ್ಟಿ ಮುಂದೆ ಸಾಗುತ್ತಾರೆ. ಇನ್ನೂ ಕೆಲವರು ತಮಗೆ ಎದುರಾಗುವ ಘಟನೆಗಳಿಗೆ ಅಂಜಿ ಎದೆಗುಂದುತ್ತಾರೆ. ಅಂತಹ ಎರಡು ಪ್ರಸಂಗವನ್ನು ಪ್ರೀತಿಯ ಚೌಕಟ್ಟಿನಲ್ಲಿ ಹೇಳಿದ್ದೇನೆ. ನನ್ನ ಚಿತ್ರವನ್ನು ಎಲ್ಲರೂ ಮೆಚ್ಚುತ್ತಾರೆ ಎಂದು ನಾನು ಹೇಳಲಾರೆ. ಆದರೆ, ಬದುಕನ್ನು ಮತ್ತು ಸಂಬಂಧಗಳನ್ನು ಆಳದ ದೃಷ್ಟಿಯಿಂದ ನೋಡುವ ಮಂದಿ ಅಪ್ಪಿಕೊಳ್ಳುತ್ತಾರೆ’ ಎನ್ನುವುದು ಯತಿರಾಜ್ ಮಾತು.
ಮನ್ವೀತ್ ಈ ಚಿತ್ರದ ನಾಯಕ. ಸಾತ್ವಿಕಾ ನಾಯಕಿ. ಸಂತೋಷ್ ಈ ಚಿತ್ರದ ನಿರ್ಮಾಪಕರು. ಸುಂದರಶ್ರೀ, ಸಂಗೀತ, ಬಲರಾಜು ವಾಡಿ, ಅಪೂರ್ವ, ಬೌ ಬೌ ಜಯರಾಮ್, ಮಹಾಂತೇಶ್, ಪ್ರಕಾಶ್ ಶೆಣೈ ಮತ್ತು ಕಾತ್ಯಾಯಿನಿ ನಟಿಸಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಲು ಯತಿರಾಜ್ ಮರೆಯುವುದಿಲ್ಲ.