ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿರುವಂತೆ ಇದೀಗ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ.ಕುಮಾರಸ್ವಾಮಿ ಅವರು ಕೂಡ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ವಿರುದ್ಧ ಮಾಡಿದ ಆರೋಪಕ್ಕೆ ಪುಷ್ಟಿ ನೀಡುವಂತೆ ವರುಣಾ ಕ್ಷೇತ್ರ ಟಿ.ನರಸೀಪುರ ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಯತೀಂದ್ರ ಅವರು ತಂದೆ ಮುಖ್ಯಮಂತ್ರಿ ಸಿದ್ರಾಮಯ್ಯ ಅವರ ಜೊತೆ ಫೋನ್ ಮೂಲಕ ನಡೆಸಿದ ಸಂಭಾಷಣೆಯ ವಿಡಿಯೋ ವೈರಲ್ ಆಗುತ್ತಿದೆ.
ಸಾರ್ವಜನಿಕ ಸಭೆಯಲ್ಲೇ ತಂದೆಗೆ ಕರೆ ಮಾಡಿ ಮಾತನಾಡಿರುವ ಡಾ. ಯತೀಂದ್ರ ಸಿದ್ದರಾಮಯ್ಯ ತಾನು ನೀಡಿದ ಲಿಸ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆರಂಭದಲ್ಲಿ ಅಪ್ಪ ಹೇಳಿ ಅಂತಾ ಯತೀಂದ್ರ ಸಿದ್ದರಾಮಯ್ಯ ಮಾತು ಶುರುಮಾಡಿದ್ದಾರೆ. ಈ ವೇಳೆ “ವಿವೇಕಾನಂದ ಯಾರು?” ಎಂದು ಪ್ರಶ್ನೆ ಕೇಳಿದ್ದಾರೆ. ಆಗ ಯತೀಂದ್ರ, ಆ ಮಹದೇವ ಅವರಿಗೆ ಪೋನ್ ನೀಡುವಂತೆ ಸಿಎಂಗೆ ಹೇಳುತ್ತಾರೆ.
ಅಲ್ಲದೆ ಮಹದೇವ್ ಅವರ ಬಳಿ ಮಾತುಕತೆ ನಡೆಸಿ ನಾನು ಯಾವುದು ಲಿಸ್ಟ್ ಕೊಟ್ಟಿದ್ದೇನೋ ಅದನ್ನು ಬಿಟ್ಟು ಬೇರೆ ಯಾವುದೇ ಮಾಡಕೂಡದು ಎಂದು ತಾಕೀತು ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವಿಡಿಯೋ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಕೂಡಲೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡ ನರಿಗೆ ಅರಣ್ಯ ಅಧಿಕಾರಿಗಳಿಂದ ಶುಶ್ರೂಷೆ