ಚಾಮರಾಜನಗರ: ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದ, ನಮ್ಮ ಪಕ್ಷದವರೇ ಹುನ್ನಾರ ಮಾಡಿ ಮೈಸೂರು ಮೇಯರ್ ಸ್ಥಾನ ಪ್ರತಿಪಕ್ಷದವರಿಗೆ ಸಿಗುವಂತೆ ಮಾಡಿದರು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
ನಗರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೇಯರ್ ಚುನಾವಣೆಯಲ್ಲಿ ನಡೆದ ಘಟನೆ ಬಹಳ ದುರದೃಷ್ಟಕರ. ಒಬ್ಬ ನಾಯಕನಿಗೆ ಹಿನ್ನಡೆ ಮಾಡಲು ನಮ್ಮ ಪಕ್ಷದವರೇ ಕೆಲಸ ಮಾಡಿದ್ದಾರೆ. ಮೇಯರ್ ಸ್ಥಾನವನ್ನು ಪ್ರತಿಪಕ್ಷಕ್ಕೆ ಸಿಗುವ ಹಾಗೆ ಮಾಡಿದ್ದಾರೆ. ಈ ವಿಚಾರ ಬಹಳ ವಿಷಾದದ ಸಂಗತಿ. ಈ ಘಟನೆ ಮತ್ತೆ ಮರುಕಳಿಸಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ:ಒಡೆದ ಮನೆಯಾಗಿ ಮೂರು ಗುಂಪಾದ ಕಾಂಗ್ರೆಸ್: ಕಾರಜೋಳ
ಇಂಥ ಘಟನೆಯಿಂದ ನಮ್ಮ ಒಗ್ಗಟ್ಟು ಒಡೆದಂತೆ ಆಗುತ್ತದೆ. ನಮ್ಮ ಕಾಂಗ್ರೆಸ್ ಒಡೆದ ಮನೆ ಎಂಬ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ನಾಯಕರಲ್ಲಿ ಒಗ್ಗಟ್ಟು ಇರಬೇಕು ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಹಳಷ್ಟು ಒಳ್ಳೆಯ ಅವಕಾಶವಿದೆ.ನಮ್ಮ ನಾಯಕರಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್