Advertisement

ಯಶೋದಮ್ಮನ ಕತೆ

08:04 PM May 11, 2019 | mahesh |

ಒಮ್ಮೆ ಬಾಲಕೃಷ್ಣ ತೊಟ್ಟಿಲಲ್ಲಿ ಮಲಗಿದ್ದವನು ಇದ್ದಕ್ಕಿದ್ದಂತೆ ಅಳಲಾರಂಭಿಸಿದ. ನಾರಿಯರೆಲ್ಲ ಅವನನ್ನು ಎತ್ತಿಕೊಳ್ಳಲು ಧಾವಿಸಿದರು. ಆದರೆ, ಎಂಥ ಪವಾಡ ಸಂಭವಿಸಿತೆಂದರೆ ಯಾರಿಗೂ ಅವನನ್ನು ಎತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಯಾರೂ ಆನಲಾಗದ ಭಾರ ಅವನದಾಗಿತ್ತು. ನಾರಿಯರು ಎತ್ತಲು ಒದ್ದಾಡುವಾಗ ಜೋರಾಗಿ ನಗುತ್ತಿದ್ದ. ಅವರು ಸೋತು ಕೈಚೆಲ್ಲುತ್ತಿದ್ದರು. ಕೃಷ್ಣ ಮತ್ತೆ ಜೋರಾಗಿ ಅಳುತ್ತಿದ್ದ. ಈ ಬಾಲ-ಲೀಲೆಯಿಂದ ಎಲ್ಲರಿಗೂ ಸಾಕೋ ಸಾಕಾಯಿತು.

Advertisement

ಬಹುಶಃ ದೇವರಿಗೂ ಒಮ್ಮೆ ಆಟ ಆಡೋಣ ಅನ್ನಿಸಿರಬೇಕು. ಸ್ವತಃ ಭಾರವಾಗಿ ಲೌಕಿಕರನ್ನು ಅಚ್ಚರಿಗೊಳಿಸೋಣ ಎಂದು ಯೋಚನೆ ಅವನಲ್ಲಿ ಮೂಡಿರಬೇಕು. ಮಗು ಒಂದೇ ಸವನೆ ಅಳುವುದು ಕೇಳಿಸಿತು ; ದೂರದಲ್ಲಿ ಅದೇನೋ ಕೆಲಸದಲ್ಲಿ ನಿರತಳಾಗಿದ್ದ ಯಶೋದೆಗೆ.

“”ಯಾಕೆ, ಮಗು ಅಳುತ್ತಿದೆ?” ಎಂದು ಗೊಣಗುತ್ತ ಸಾಕ್ಷಾತ್‌ ಅಮ್ಮನೇ ಮಗುವಿನತ್ತ ಧಾವಿಸತೊಡಗಿದಳು. ಯಶೋದೆ ತನ್ನತ್ತ ಬರುವುದನ್ನು ನೋಡಿ ಮಗು ಕೃಷ್ಣ ಜೋರಾಗಿ ಅಳತೊಡಗಿದ. ಆದರೂ ಒಳಗೊಳಗೆ ನಗುತ್ತಿದ್ದ ; ತಾನೀಗ ಭಾರವಾಗಿ ಅಮ್ಮನನ್ನು ಪೀಡಿಸಬೇಕೆಂಬ ತುಂಟ ಯೋಚನೆಯಿಂದ.

ತಾಯಿ ಯಶೋದೆ ಈಗ ದೇವರನ್ನು ಎತ್ತಲಾಗದೆ ಕಂಗಾಲಾಗುವ ಸ್ಥಿತಿಯನ್ನು ಮತ್ತು ಮನುಷ್ಯಮಾತ್ರಳಾದ ಅಮ್ಮನಾಗಿ ಆಕೆ ಅನುಭವಿಸುವ ತಳಮಳವನ್ನು ನೋಡಿ ನಗುವುದಕ್ಕಾಗಿ ದೇವಾನುದೇವತೆಗಳು ಆಕಾಶದಲ್ಲಿ ನೆರೆದಿದ್ದರು. ಭೂಲೋಕದ ಬಾಲಲೀಲೆಯನ್ನು ನೋಡುವ ಕಾತರ ಮೇಲುಲೋಕದವರಿಗೆ.

ಯಶೋದಮ್ಮ ಬಂದಳಲ್ಲವೆ? ಬಂದವಳೇ ತೊಟ್ಟಿಲಿನೆಡೆಗೆ ಬಾಗಿದಳು. “ಯಾಕೆ ಅಳುತ್ತಿರುವೆ?’ ಎಂದು ಗದರಿದಳು.
ಕೃಷ್ಣ ತನ್ನ ಆಟವನ್ನು ತೋರಿಸಲೆಂದು ಜೋರಾಗಿ ಕೈಕಾಲು ಬಡಿಯುತ್ತ ಅಳತೊಡಗಿದ. ತನ್ನನ್ನು “ಎತ್ತು’ “ಎತ್ತು’ ಎಂಬ ಭಾವದಲ್ಲಿ ಅವಳನ್ನೇ ನೋಡತೊಡಗಿದ.

Advertisement

ಯಶೋದೆ ಅವನತ್ತ ಕೈಚಾಚಿದ್ದೇ ಒಂದೇ ಸವನೆ ಭಾರವಾಗತೊಡಗಿದ.
ಈ ದೈತ್ಯಭಾರವನ್ನು ಎತ್ತಲಾಗದೆ ಯಶೋದಮ್ಮ ಸಂಕಷ್ಟಪಡುವಳ್ಳೋ ಎಂದು ಸೇವಕಿಯರೆಲ್ಲ ಕಾಳಜಿಯಿಂದ ನೋಡುತ್ತಿದ್ದರು. ದೇವರ ಆಟದ ಮುಂದೆ ಮನುಷ್ಯ ಸೋಲುವುದನ್ನು ನೋಡಿಯೇ ಬಿಡೋಣ ಎಂದು ದೇವತೆಗಳೂ ಕೂಡ ಬೆರಗಿನಿಂದ ಅವಲೋಕಿಸುತ್ತಿದ್ದರು. ಆದರೆ, ಎಂಥ ವಿಚಿತ್ರ ನೋಡಿ ; ಯಶೋದೆ ಕೃಷ್ಣನನ್ನು ಹೂವಿನಂತೆ ಎತ್ತಿ ಬಿಟ್ಟಳು.

ದೇವರ ಆಟ ನಡೆಯಲಿಲ್ಲ. ಅಮ್ಮನೇ ಗೆದ್ದಳು.
ಮಗು ಸ್ವತಃ ದೇವರೇ ಆಗಿರಬಹುದು, ಆದರೆ, ಅಮ್ಮನಿಗೆ ಭಾರವೆ?

ಪಾಂಚಾಲಾ

Advertisement

Udayavani is now on Telegram. Click here to join our channel and stay updated with the latest news.

Next