Advertisement
ಅಷ್ಟೊತ್ತಿಗೇ ಶುರುವಾಯಿತಲ್ಲ ಆ ಪುಟ್ಟ ಹಕ್ಕಿಯ ಗಲಾಟೆ. ಅದರ ಹೆಸರು ಎಂಥದ್ದೋ ಒಂದು! ಯಶೋದೆ ಕರೆಯುವುದು ಪುಟ್ಟ ಹಕ್ಕಿ ಅಂತಲೇ. ದಿನಾ ಅದು ಬರುವುದು ಇವಳು ಹಾಲು ಕರೆಯುವ ಹೊತ್ತಿಗೇ. ಅದು ಬಂದು ಹಸುವಿನ ಮೈಮೇಲೆ ಕುಪ್ಪಳಿಸಬೇಕು, ಅದರ ಚುಚ್ಚುವ ಕೊಕ್ಕು, ಕಾಲುಗಳಿಂದಾಗುವ ಕಿರಿಕಿರಿಗಾಗಿ ಹಸು ಬಾಲವನ್ನು ಜೋರಾಗಿ ಬೀಸಬೇಕು, ಆ ರಭಸಕ್ಕೆ ಯಶೋದೆಯ ಮೈಯೆಲ್ಲ ಕೊಚ್ಚೆಯಾಗಬೇಕು, ಬೈಯಬೇಕಾದದ್ದು ಹಸುವಿಗೋ ಹಕ್ಕಿಗೊ ಎಂಬುದು ಬಗೆಹರಿಯದೆ ಅವಳು ಸಿಡಿಮಿಡಿಗೊಳ್ಳಬೇಕು. ಅದನ್ನು ಕಂಡು ಹಕ್ಕಿ ಕುಣಿದು-ಕುಪ್ಪಳಿಸಿ ನಗಬೇಕು ಇದೆಲ್ಲಾ ನಿತ್ಯ ನಡೆಯುವುದೇ. ಇವತ್ತೂ ನಡೆದಿದ್ದು ಹೌದಾದರೂ ಈ ಬಗ್ಗೆ ಯಶೋದೆಗೆ ಲಕ್ಷ್ಯವೇ ಇಲ್ಲ. ಅವಳ ಸುತ್ತ ಹಕ್ಕಿ ಹಾರಾಡಿದರೂ ಊಹುಂ, ಎಲ್ಲೋ ಇದೆ ಅವಳ ಗಮನ.
“”ನಿನ್ನ ಭ್ರಮೆ!” ಇವಳದ್ದಿವತ್ತು ಹೆಚ್ಚು ಮಾತಿಲ್ಲ. ಆದರೆ ಹಕ್ಕಿ ಬಿಡಬೇಕಲ್ಲ; “”ಮೋಡವೂ ಮುಸುಕಿದಂತಿದೆ”.
“”ಕಾಣಲ್ಲವಾ? ಶುಭ್ರಾಕಾಶ”
ನೇರ ಅವಳ ಭುಜದ ಮೇಲೆಯೇ ಕುಳಿತಿತು ಪುಟ್ಟ ಹಕ್ಕಿ. ಹಕ್ಕಿಯ ಸಾಮೀಪ್ಯದಿಂದ ಆಪ್ಯಾಯಮಾನ ಭಾವಕ್ಕೆ ಒಳಗಾದ ಯಶೋದೆ, ಹಾಲು ತುಂಬಿದ ಬಿಂದಿಗೆಯನ್ನು ಪಕ್ಕಕ್ಕಿಟ್ಟು, ನಿಟ್ಟುಸಿರಿನೊಂದಿಗೆ ಹುಲ್ಲಿನ ಮೆದೆಯ ಮೇಲೆ ಕುಳಿತಳು.
“”ಬಿಂದಿಗೆ ಭಾರವೇನೆ?” ಕೇಳಿತು ಹಕ್ಕಿ.
“”ಹಾಗೇನಿಲ್ಲ. ಒಂಥರಾ ಉದಾಸೀನ ಬೆಳಗಿಂದ”
“”ಅದು ನೋಡುತ್ತಿದ್ದೇನಲ್ಲ. ಮೊದಲೆಲ್ಲ ಇದಕ್ಕಿಂತ ಎಷ್ಟೋ ಭಾರದ ಬಿಂದಿಗೆ ಹೊತ್ತವಳಲ್ಲವಾ ನೀನು? ಇವತ್ತೇನು ತಲೆ ಭಾರವಾ?” ಕೇಳುತ್ತ ತಲೆ ಮೇಲೆ ಕುಳಿತಿತು ಪುಟ್ಟ ಹಕ್ಕಿ.
“”ಏನು ಭಾರವೊ ಗೊತ್ತಿಲ್ಲ”
“”ಎಷ್ಟು ಹಾಲು ಕರೆದೆ?” ಹಕ್ಕಿ ವಿಷಯ ಬದಲಾಯಿಸಿತು.
“”ಎಷ್ಟು ಹಾಲು ಕರೆದರೇನು? ಕದ್ದು ಕುಡಿಯುವವರೇ ಇಲ್ಲದ ಮೇಲೆ” ಶುಷ್ಕ ನಗೆ ಇವಳದ್ದು.
ಓಹೊ! ಹಕ್ಕಿಗೀಗ ವಿಷಯ ಅಂದಾಜಾಯಿತು. “”ಇವಳಿಗೆ ನವನೀತ ಚೋರನ ನೆನಕೆ. ಛೇ! ಅಲ್ಲ, ಅದು ಪ್ರಪಂಚಕ್ಕೆ. ಇವಳಿಗೆ ಮಗನ ನೆನಕೆ. ಇರಬೇಕಾದ್ದೇ ಬಿಡಿ. ಮಕ್ಕಳನ್ನು ಈ ಪರಿಯಲ್ಲಿ ಹಂಬಲಿಸುವವರು ಹೆತ್ತವರಲ್ಲದೆ ಮತ್ತಾರು? ಆದರೆ, ನೀನೇನು ಅವನನ್ನು ಹೆರಲಿಲ್ಲವಲ್ಲ!” ಹಕ್ಕಿಯ ಅಂಕೆ ತಪ್ಪಿ ಬಾಯಿಂದ ಹೊರಬಂದೇಬಿಟ್ಟಿತು ಮಾತು.
“”ನನ್ನ ಹೊಟ್ಟೆಯ ಕೂಸಿನ ಬದಲಿಗಲ್ಲವಾ ಅವ ನನಗೆ ದಕ್ಕಿದ್ದು. ಅಲ್ಲಿಗೀಗ ಅವ ನನ್ನ ಹೊಟ್ಟೆಯ ಕೂಸೇ ಆಗಲಿಲ್ಲವಾ? ನಿನಗೆ ಹೇಗೆ ತಿಳಿಯಬೇಕು ನೀನು ಬರೀ ಮೊಟ್ಟೆಯ ಕೂಸು” ಹಕ್ಕಿಯನ್ನು ಹಂಗಿಸಿದಳು.
Related Articles
“”ನಿನ್ನ ಹಾಗಾದರೆ ನಾವು ಪ್ರತಿವರ್ಷವೂ ಅಳುತ್ತಲೇ ಇರಬೇಕಷ್ಟೆ. ಸ್ವಲ್ಪ ನೀರು ಕುಡಿ, ಸಮಾಧಾನವಾಗುತ್ತದೆ” ಹಕ್ಕಿ ಉಪಚರಿಸಿತು. “”ಹೌದಲ್ಲವೇ! ನಿನ್ನ ಮಕ್ಕಳು ರೆಕ್ಕೆ ಬರುತ್ತಲೇ ಹಾರುತ್ತವೆ. ಪಾಪ” ಕನಿಕರಿಸಿದಳು ಯಶೋದೆ.
“”ನೀನೂ ನನ್ನ ಹಾಗೆ ಇನ್ನಷ್ಟು ಮಕ್ಕಳನ್ನು ಹೆರಬಾರದೆ?” ಉಪಾಯ ಹೇಳಿತು ಹಕ್ಕಿ.
Advertisement
“”ಹೋಗೆ! ವರ್ಷ-ವರ್ಷವೂ ಹೊಸ ಹರೆಯ ಬರಲಿಕ್ಕೆ ನಾನೇನು ಹಕ್ಕಿಯೇ?” ಮೂದಲಿಸಿದಳು. ಹಕ್ಕಿಗೆ ಹೇಳಿದ್ದೇನೋ ಹೌದು. ಆದರೂ ಇಂಥದ್ದೊಂದು ಸೌಖ್ಯ ತನಗೂ ಇದ್ದಿದ್ದರೆ ಎಂಬ ಭಾವ ಅವಳ ಮನದಲ್ಲೊಮ್ಮೆ ಹಾದುಹೋದದ್ದು ಸುಳ್ಳಲ್ಲ. ನಂದಗೋಪನ ಮಹಲಿನಲ್ಲಿ ಯಾವ ಸುಖಕ್ಕೆ ಕೊರತೆಯಿದೆ? ಆದರೂ ಈಗೀಗ ಸುಖ-ದುಃಖಕ್ಕೂ, ಸಿರಿ-ಸಂಪತ್ತಿಗೂ ಸಂಬಂಧವೇ ಇಲ್ಲ ಎನಿಸುತ್ತದಲ್ಲ. ಯಾವ ತುಂಟನನ್ನು ಸುಧಾರಿಸುವುದಕ್ಕೆ ತನ್ನ ಹರೆಯವನ್ನೆಲ್ಲ ಮೀಸಲಿಟ್ಟೆನೋ ಅವನಿಗೀಗ ತನ್ನ ನೆನಪೇ ಇಲ್ಲ. ಇದ್ದಿದ್ದರೆ ಮರಳಿ ಬರುತ್ತಿರಲಿಲ್ಲವೇ?“”ಅಯ್ಯೊ ರಾಮ! ನೀನೇನೆ ಮುದುಕಿಯಾದಂತೆ ಮಾತಾಡುತ್ತಿ. ಎಷ್ಟೀಗ ನಿನ್ನ ಪ್ರಾಯ?” ಹಕ್ಕಿಯ ವಿಚಾರಣೆ.
“”ಆಯಿತು ನಲವತ್ತರ ಎಡ-ಬಲ. ಇನ್ನೂ ಹೆರುವುದಂತೆ! ನಿನಗೊಂದು ಕಸುಬಿಲ್ಲ” ನಕ್ಕಳು ಯಶೋದೆ. “”ಓಹ್! ನಿನಗೂ ಮುಟ್ಟು ಬಿಡಲಿಕ್ಕಾಯಿತಾ? ನನ್ನ ಹಾಗೆಯೇ ಅನ್ನು” ಎಂಬ ಹಕ್ಕಿಯ ಮಾತಿಗೆ ಬಿದ್ದೂಬಿದ್ದು ನಕ್ಕಳು ಯಶೋದೆ. “”ಇದೆಲ್ಲ ನಮ್ಮಂಥವರಿಗೆ. ನೀನೊಂದು ಹಕ್ಕಿ” ನಗುತ್ತಲೇ ನೆನಪಿಸಿದಳು.
“”ನಗಲಿಕ್ಕೇನಾಯ್ತು? ನಾನೂ ನಿನ್ನ ಹಾಗೆಯೇ ಮಗಳು, ಹೆಂಡತಿ, ಅಮ್ಮ ಎಲ್ಲವೂ ಆಗಿದ್ದೇನೆ. ಅಂದ ಮೇಲೆ ಇದೊಂದು ಆಗುವುದಿಲ್ಲವಾ!”ಎಂಬ ಹಕ್ಕಿಯ ಮರುಪ್ರಶ್ನೆಗೆ ಅವಾಕ್ಕಾದಳು ಇವಳು. “”ಹೆಣ್ಣು ಯಾವ ಸ್ವರೂಪದಲ್ಲಿದ್ದರೂ ಹೆಣ್ಣೇ” ನಿಟ್ಟುಸಿರಿಡುವ ಸರದಿಯೀಗ ಹಕ್ಕಿಯದ್ದು. “”ಇಳಿಸಿಕೊಳ್ಳೆ ಮನದ ಭಾರವನ್ನು. ಕೇಳಲು ನಾನಿದ್ದೇನೆ” ಅಭಯ ನೀಡಿತು ಪುಟ್ಟಹಕ್ಕಿ. ಇದಕ್ಕಾಗಿಯೇ ಕಾಯುತ್ತಿದ್ದವಳಂತೆ ಯಶೋದೆ ಮಾತಾಡಿದಳು ಮಧುರೆಗೆ ಹೋದವ ಹಿಂದಿರುಗಿ ಬಾರದಂತೆ ಹೋಗಿಯೇ ಬಿಡುತ್ತಾನೆಂದು ನನಗಾದರೂ ಎಲ್ಲಿ ತಿಳಿದಿತ್ತು ಅಥವಾ ತಿಳಿದರೂ ಏನಾಗುತ್ತಿತ್ತು? ಹೋಗದಂತೆ ತಡೆಯಲಿಕ್ಕೆ ಸಾಧ್ಯವಿತ್ತೇ? ಮರಳಿ ಬಂದೇಬರುವೆನೆಂದು ಮಾತು ಪಡೆಯಬಹುದಿತ್ತೇ? ಏನು ಮಾಡಬಹುದಿತ್ತು? ಇಷ್ಟಕ್ಕೂ ನನ್ನ ಆ ಕೂಸನ್ನು ಹಂಬಲಿಸದವರು ಯಾರಿದ್ದರು? ಅವನೊಂದಿಗೆ ವಿನೋದಕ್ಕಾಗಿ ಬಂದವರು, ಅವನ ವಿನಾಶಕ್ಕಾಗಿ ಬಂದವರು, ವಾತ್ಸಲ್ಯ ತೋರಿ ಬಂದವರು ಎಲ್ಲರೂ ಭ್ರಮಿಸಿದ್ದು ಅವನನ್ನು ಪಡೆದೇಬಿಟ್ಟೆವೆಂದು. ಬಹುಶಃ ನಾನೂ ಸಹ! ಮರೆಯಲಿಕ್ಕುಂಟೇ ಆ ರಾತ್ರಿಯನ್ನು ಹಡೆದ ನೋವನ್ನೂ ಮರೆಸುವಂಥ ಆ ಬ್ರಹ್ಮಾಂಡ ನಿದ್ದೆಯಿಂದ ಎಚ್ಚರವಾಗುತ್ತಿದ್ದಂತೆಯೇ ಮಗ್ಗುಲಲ್ಲಿದ್ದ ಕೂಸು ಕೊಸರಿತು. ಹಾಲೂಡಿಸಿ, ಒದ್ದೆಯಾದ ವಸ್ತ್ರವನ್ನು ಬದಲಿಸಲು ಸಖೀಯನ್ನು ಕರೆಯಬೇಕೆಂದಾಗಲೇ ನನ್ನ ಗಮನಕ್ಕೆ ಬಂದಿದ್ದು, ಇದು ಗಂಡು ಮಗು! ಸೂಲಗಿತ್ತಿ ಹೆಣ್ಣು ಮಗು ಎಂದಿದ್ದಳಲ್ಲ ನೋವಿನಲ್ಲಿ ನನಗೇ ಭ್ರಮೆಯಾಗಿತ್ತಾ ಅಥವಾ ಸೂಲಗಿತ್ತಿಯನ್ನೊಮ್ಮೆ ಕರೆದು ಕೇಳಲಾ ಎಂದು ಯೋಚಿಸಿದೆ. ಆದರೂ ಕುತೂಹಲಕ್ಕೆ ಯಾರಂತಿದೆ ಈ ಮಗು ಎಂದು ನೋಡಿದೆ. ನೋಡಿದರೆ ನೋಡುತ್ತಲೇ ಇರಬೇಕೆನಿಸುವಷ್ಟು ಪ್ರಶಾಂತವಾಗಿ ನಿದ್ರಿಸುತ್ತಿತ್ತು ಮಗು. “”ಅಯ್ಯೋ! ಹಾಗೆ ಮಲಗಿದ ಕೂಸುಗಳನ್ನು ದಿಟ್ಟಿಸಬಾರದಂತೆ. ತಾಯಿ ಕಣ್ಣು ನಾಯಿ ಕಣ್ಣು ಹೋಗಲ್ಲವಂತೆ” ನಡುವೆ ಬಾಯಿ ಹಾಕಿತು ಹಕ್ಕಿ. “”ನಿನ್ನದು ಪೂರಾ ಮನುಷ್ಯರ ಬುದ್ಧಿಯೇ” ಎಂದು ನಗುತ್ತಾ ಮುಂದುವರೆಸಿದಳು ಯಶೋದೆ. “”ಕಟವಾಯಿಂದ ಜಿನುಗಿದ ಹಾಲನ್ನು ಸೆರಗಿನಲ್ಲಿ ಒರೆಸುತ್ತಿದ್ದಾಗ ಮನಸ್ಸಿಗೆ ಖಾತ್ರಿಯಾಗಿತ್ತು, ಈ ಕೂಸನ್ನೇ ನಾನು ಹೆತ್ತಿದ್ದು ಎಂದು. ಹೌದೇ, ಆ ಕೂಸನ್ನು ನಾನೇ ಹೆತ್ತಿದ್ದು. ಆವತ್ತಿನ ಹಾಲಿನ ವಾಸನೆ ಇವತ್ತಿಗೂ ನನ್ನ ಸೆರಗಿನಲ್ಲಿದೆ, ಬೇಕಾದರೆ ನೋಡು. ಹಾಗಿರುವಾಗ ಆತನ ಹೆತ್ತಮ್ಮ ಬೇರೆ ಎಂದರೆ ನಂಬುವ ಮಾತೇ? ಯಾಕಾದರೂ ನಂಬಬೇಕು ಅದನ್ನು? ಅದಕ್ಕಾಗಿ ಆತ ನನ್ನನ್ನು ತೊರೆಯುವುದೆಂದರೇನು? ಪೊರೆದ ತಾಯಿಯನ್ನು ಮರೆಯುವುದೆಂದರೇನು?” “”ನಿನ್ನನ್ನು ತೊರೆದ ಎಂದೇಕೆ ತಿಳಿಯುತ್ತಿ? ಬದುಕು ಕರೆದಲ್ಲಿ ಹೋದ ಎಂದು ಅರಿಯಬಾರದೆ? ನನ್ನ ಮಕ್ಕಳು ಗೂಡುಬಿಟ್ಟು ಹಾರಿ ಹಾರಿ ಜಗತ್ತಿನ ತುಂಬ ಹಾರುತ್ತ ಇರುವುದೆಲ್ಲ ನನ್ನದೇ ಮಕ್ಕಳು ಎನಿಸುತ್ತದೆ” ಜೀವನಾನುಭವ ಹೇಳಿತು ಹಕ್ಕಿ. ನಕ್ಕಳು ಯಶೋದೆ. ಹೌದಲ್ಲವೇ! ಜಗತ್ತಿನ ಎಲ್ಲ ತಾಯಂದಿರಿಗೂ ತನ್ನ ಮಗ ಕೃಷ್ಣನೇ ಎಂದೆನಿಸುವುದಿಲ್ಲವೇನು? ಆ ಲೆಕ್ಕದಲ್ಲಿ ಜಗತ್ತಿನ ಎಲ್ಲ ಮಕ್ಕಳೂ ತನ್ನವೇ, ಎಲ್ಲ ಮಕ್ಕಳಿಗೂ ತಾನೇ ತಾಯಿ. ಆದರೂ ಇಂದು ತನ್ನ ತೋಳಿನಲ್ಲಿ ಯಾವೊಂದು ಮಗುವೂ ಇಲ್ಲವಲ್ಲ. ತನ್ನ ಸೆರಗಿನಲ್ಲಿ ಯಾವ ಮಗುವಿನ ಜೊಲ್ಲೂ ಉಳಿದಿಲ್ಲವಲ್ಲ. ಇದನ್ನು ಯೋಚಿಸಿದರೇ ಮೈಯೆಲ್ಲ ಬೆವರಿ ಮುಖವೆಲ್ಲ ಬಿಸಿಯಾಗುತ್ತದೆ. ತನ್ನದಾಗಿ ಏನೂ ಉಳಿಯಲಿಲ್ಲ ಎಂದು ಅತ್ತು ರಂಪ ಮಾಡುವ ಎನಿಸುತ್ತದೆ. ತನಗೊಂದು ಮರುಳು! ಹಾಗೆಲ್ಲ ಮಾಡಿದಾಕ್ಷಣ ಕಳೆದ ದಿನಗಳು ಮರಳಿ ಬಂದಾವೆ? ಕಳೆದ ವಾರ ಬಂದಿದ್ದ ಹಣ್ಣಿನ ಅಜ್ಜಿ ಹೇಳಿದ್ದಳಲ್ಲ, “ಈಗಲೇ ಮೈ ಬಿಸಿಯಾಗಿ ಬೆವರುವುದಕ್ಕಾಯಿತೇ? ಬರಿದಾಗಿರುವ ಮಡಿಲು ಇಷ್ಟರೊಳಗೇ ತುಂಬಿದ್ದರೆ ಲೇಸಿತ್ತು ಒಡತಿ’. ಅವಳು ಹೇಳಿಯಾಳು, ಆದರೆ ನನಗೆ ಗೊತ್ತು ಇನ್ನೆಷ್ಟು ಮಕ್ಕಳನ್ನು ಹಡೆದರೂ ಈಗ ನನ್ನನ್ನು ತೊರೆದು ಹೋಗಿರುವ ಪೋರನನ್ನು ಸರಿಗಟ್ಟುವುದಕ್ಕೆ ಸಾಧ್ಯವಿಲ್ಲ ಎಂದು. ನನ್ನಿಡೀ ಬದುಕನ್ನು ಆವರಿಸಿಕೊಂಡಿದ್ದವನು, ಹೋಗುವಾಗ ನನ್ನ ಸರ್ವಸ್ವವನ್ನೂ ತನ್ನೊಂದಿಗೇ ಒಯ್ದುಬಿಟ್ಟ. ನಾನೀಗ ಖಾಲಿ. “”ಮತ್ತೆ ಧ್ಯಾನಕ್ಕೆ ಕುಳಿತೆಯೇನೇ? ಮಾತಾಡಲು ಮನಸ್ಸಿಲ್ಲದಿದ್ದರೆ ಹೋಗುತ್ತೇನೆ ಬಿಡು” ನಸುಕೋಪ ತೋರಿದ ಹಕ್ಕಿಯನ್ನು ತಡೆದು ನಿಲ್ಲಿಸಿಕೊಂಡಳು. “”ಏನು ಮಾಡಲಿ ಹೇಳು? ಒಮ್ಮೊಮ್ಮೆ ಯಾರೊಂದಿಗೂ ಮಾತೇ ಬೇಡ ಎನಿಸುತ್ತದೆ. ಮೌನವಾದೊಡನೆ ಹೆಜ್ಜೆ ಹೆಜ್ಜೆಗೂ ಅವನದ್ದೇ ನೆನಪು. ಸಾಮಾನ್ಯ ಪುಂಡನಾಗಿದ್ದನೇ ಅವನು? ಅವನ ಆಟಾಟೋಪಗಳು ಒಂದೆರಡೇ? ಅವನಿಗಾಗಿ ಹದಿನಾರು ವರುಷಗಳ ಕಾಲ ದಣಿದೆನಲ್ಲ, ಎಂಥಾ ಹದವಾದ ಸುಖವಿತ್ತು ಗೊತ್ತಾ ಅದರಲ್ಲಿ? ಈಗ ಆ ದಣಿವೂ ಇಲ್ಲ, ಸುಖವೂ ಇಲ್ಲ!” “”ನಿನ್ನ ಈವರೆಗಿನ ಸಾಧನೆಯೆಂದರೆ ಅವನೊಬ್ಬನೇ. ಇನ್ನೊಂದೆರಡು ಹಡೆದಿದ್ದರೆ ಇಷ್ಟೊಂದು ಕಷ್ಟವಾಗುತ್ತಿರಲಿಲ್ಲ. ನಾ ಮೊದಲೇ ಹೇಳಿದ್ದೆ, ಕೇಳಿದೆಯಾ? ಬಿಡು, ಈಗ ಆಯಿತಲ್ಲ. ನೋಡು ನನ್ನ. ಎಷ್ಟು ಗೂಡು ಮುರಿದರೂ, ಮತ್ತೆ ಕಟ್ಟುವುದಿಲ್ಲವಾ? ಎಷ್ಟು ಮೊಟ್ಟೆ ಒಡೆದರೂ ಮತ್ತೆ ಇಡುವುದಿಲ್ಲವಾ? ಬದುಕು ಮುಗಿಯಿತು ಅಂತ ಆಗುವುದೇ ಇಲ್ಲ, ಕಡೇ ಗಳಿಗೆಯವರೆಗೂ” ಪುಟ್ಟ ಹಕ್ಕಿಯ ಬಾಯಿಂದ ಬಂದದ್ದೆಲ್ಲ ದೊಡ್ಡ ಮಾತುಗಳೇ! ಹಾಗಾದರೆ, ಏನು ಬದುಕೆಂದರೆ… ನಿರಂತರತೆಯೇ? ಇರಬಹುದೇನೊ! ಕೃಷ್ಣ ಎಲ್ಲಿದ್ದರೂ ನನ್ನ ಕೂಸೂ ಹೌದೆಂಬುದು ಸತ್ಯವೇ ತಾನೆ? ಯಾವ ಕಾಲಕ್ಕೂ ಕಸಿಯಲಾಗದ ನಿರಂತರ ಸುಖವದು. ಆತ ನನ್ನ ಮಡಿಲಿಗೆ ಬರುವ ಮುನ್ನವೂ ನಾನು ಯಶೋದೆಯೇ ಆಗಿದ್ದೆ. ಬಂದ ಮೇಲೆ ಯಶೋದೆಯಮ್ಮನಾದೆ. ಹೋದ ಮೇಲೂ ಅದೇ ಹಾಲು ಕರೆಯುವಾಗ ಹಿಂದಿನಿಂದ ಬಂದು ನೆಕ್ಕುವ ಕರುವಿಗೆ, ದಿನವೂ ಬಂದು ಕೈತುತ್ತು ಎಂಬಂತೆ ನನ್ನ ಕೈ ಮೇಲಿನ ಕಾಳು ತಿನ್ನುವ ಈ ಪುಟ್ಟ ಹಕ್ಕಿಗೆ, ಪ್ರತಿಯೊಂದಕ್ಕೂ “ಯಶೂ’ ಎಂದು ಕರೆಯುವ ನಂದಗೋಪನಿಗೆ, ಬೆಣ್ಣೆ ಬೇಡಿ ಬರುವ ವೃಂದಾವನದ ಚಿಣ್ಣರಿಗೆ ಎಲ್ಲರ ಪಾಲಿಗೆ ಇವತ್ತಿಗೂ ನಾನು ಯಶೋದೆಯಮ್ಮನೇ. ತಾಯ್ತನಕ್ಕೆ ಹೆರಲೇಬೇಕೆಂಬ ನಿಯಮವಿಲ್ಲ ಎಂಬುದನ್ನು ಜಗತ್ತಿಗೇ ನಿರೂಪಿಸಿದ ನಾನು ಖಾಲಿ ಹೇಗಾದೇನು? ಕೃಷ್ಣನೊಬ್ಬನೇ ಏನು ಜಗತ್ತಿನ ಎಲ್ಲ ಚಿಣ್ಣರ ಪಾಲಿಗೂ ನಾನು ಅಮ್ಮ ಯಶೋದೆಯಮ್ಮ. ಬದುಕಿಗೆ ಇದಕ್ಕಿಂತಲೂ ದೊಡ್ಡ ಸಾರ್ಥಕತೆ ಏನಿದ್ದೀತು? ಎಂದಿನಂತೆ ನನ್ನ ಕೈ ಮೇಲಿನ ಕಾಳು ತಿನ್ನುತ್ತಿದ್ದ ಪುಟ್ಟ ಹಕ್ಕಿಯೊಂದಿಗಿನ ಸಲ್ಲಾಪ ಮುಗಿಸಿ ಬೀಳ್ಕೊಂಡೆ. “”ಯಶೋದಮ್ಮ ಮತ್ತೆ ನಾಳೆ ಸಿಗೋಣ” ಎನ್ನುತ್ತ ನಭಕ್ಕೇರಿತು ಹಕ್ಕಿ. ಅಲಕಾ ಕಟ್ಟೆಮನೆ