Advertisement

ಯಶ್‌ ಹವಾಕ್ಕೆ ಅಭಿಮಾನಿಗಳು ಖುಷ್‌

04:17 PM Dec 22, 2018 | |

ದಾವಣಗೆರೆ: ಕನ್ನಡಿಗರ ಬಹುನಿರೀಕ್ಷೆಯ ನಟ ಯಶ್‌ ಅಭಿನಯದ ಕೆ.ಜಿ.ಎಫ್‌ ಚಿತ್ರ ಶುಕ್ರವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ನಗರದ ಗೀತಾಂಜಲಿ, ವಸಂತ ಚಿತ್ರಮಂದಿರಗಳಲ್ಲೂ ಅಭಿಮಾನಿಗಳು ಯಶ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಭಾವಚಿತ್ರದ ಫ್ಲೆಕ್ಸ್‌ಗೆ ಹಾಲಿನ ಅಭಿಷೇಕ ನೆರವೇರಿಸಿ ಸಂಭ್ರಮಿಸಿದರು.

Advertisement

ಗೀತಾಂಜಲಿ ಚಿತ್ರಮಂದಿರದಲ್ಲಿ ನಸುಕಿನ 4.30ಕ್ಕೆ ಆರಂಭವಾದ ಚಿತ್ರದ ಪ್ರಥಮ ಶೋನಲ್ಲಿ ಯುವಕರದ್ದೇ ಹವಾ. ಆಗಲೇ ಯಶ್‌ ಅಭಿಮಾನಿ ಬಳಗದ ಯುವಕರು ಫ್ಲೆಕ್ಸ್‌ಗೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು. ನಂತರದ ಪ್ರದರ್ಶನ ವೀಕ್ಷಿಸಲು ಅಭಿಮಾನಿಗಳು, ಕಾಲೇಜು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ಧಾವಿಸುತ್ತಿದ್ದರು. 

ಗೀತಾಂಜಲಿ ಚಿತ್ರಮಂದಿರದಲ್ಲಿ ಚಿತ್ರದ ಪ್ರಥಮ ಶೋ ಮುಗಿಯುವ ಮುನ್ನ ಬೆಳಿಗ್ಗೆಯಿಂದಲೇ ಕಾಲೇಜು ವಿದ್ಯಾರ್ಥಿಗಳು ಟಿಕೆಟ್‌ ಕೌಂಟರ್‌ ತೆರೆಯುವವರಿಗೆ ಕ್ಯೂನಲ್ಲಿ ನಿಂತು ಟಿಕೆಟ್‌ ಪಡೆದು ಚಿತ್ರ ವೀಕ್ಷಿಸಿದರು. ವಸಂತ ಚಿತ್ರಮಂದಿರದಲ್ಲಿ ಕೂಡ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಗೀತಾಂಜಲಿ ಚಿತ್ರಮಂದಿರದಲ್ಲಿ ಬೆಳಿಗ್ಗೆ 4.30 ರಿಂದ ಒಟ್ಟು 5 ಪ್ರದರ್ಶನ ನಡೆದರೆ, ವಸಂತ ಚಿತ್ರಮಂದಿರದಲ್ಲಿ ಬೆಳಿಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ನಾಲ್ಕು ಶೋಗಳು ನಡೆದವು. ಗೀತಾಂಜಲಿ ಚಿತ್ರಮಂದಿರದಲ್ಲಿ ಬಾಲ್ಕನಿ ಟಿಕೆಟ್‌ 200, ಫಸ್ಟ್‌ ಕ್ಲಾಸ್‌ 150 ರೂಪಾಯಿ ನಿಗದಿ ಪಡಿಸಲಾಗಿತ್ತು. ವಸಂತ ಚಿತ್ರಮಂದಿರದಲ್ಲೂ ಸಹ ಬಾಲ್ಕನಿ 200, ಫಸ್ಟ್‌ ಕ್ಲಾಸ್‌ ಟಿಕೆಟ್‌ ಗೆ 150 ರೂ, ನಿಗದಿ ಪಡಿಸಲಾಗಿದೆ.

ಶುಕ್ರವಾರದ ಬಾಲ್ಕನಿ ಎಲ್ಲಾ ಶೋನ ಟಿಕೆಟ್‌ ಮುಂಗಡವಾಗಿ ಬುಕ್ಕಿಂಗ್‌ ಹಾಗೂ ಮಾರಾಟಗೊಂಡಿದ್ದವು. 300 ರೂ.ಗಳಿಗಿಂತಲೂ ಹೆಚ್ಚಿನ ದರಕ್ಕೆ ಟಿಕೆಟ್‌ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದುದು ಕಂಡುಬಂತು. ಚಿತ್ರ ವೀಕ್ಷಣೆಗೆ ಬಂದ ಅನೇಕ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಕ್ಯೂನಲ್ಲಿ ಟಿಕೆಟ್‌ ಸಿಗದಿದ್ದಾಗ ಬ್ಲಾಕ್‌ನಲ್ಲಿ ಹೆಚ್ಚು ಹಣ ನೀಡಿ ಚಿತ್ರ ವೀಕ್ಷಿಸಲು ತೆರಳಿದ್ದು ಕಂಡುಬಂತು.
ಯಶ್‌ ಅಭಿಮಾನಿಗಳು ಕೆ.ಜಿ.ಎಫ್‌ ಚಿತ್ರಕ್ಕೆ ಶುಭಕೋರಿ ಗೀತಾಂಜಲಿ ಚಿತ್ರಮಂದಿರದಲ್ಲಿ ಹಾಕಿದ್ದ ಫ್ಲೆಕ್ಸ್‌ಗಳು ತುಂಬಿ ತುಳುಕುತ್ತಿದ್ದವು. ಒಳಗಡೆ ಜಾಗ ಸಾಲದೇ ರಸ್ತೆಯಲ್ಲೂ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ವಸಂತ ಚಿತ್ರಮಂದಿರದಲ್ಲಿ ಅಭಿಮಾನಿಗಳು ಯಶ್‌ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಆ ಚಿತ್ರಮಂದಿರದ ಬಳಿಯೂ ಯಶ್‌ ದೊಡ್ಡ ಕಟೌಟ್‌ಗಳು ಗೋಚರಿಸುತ್ತಿವೆ.

Advertisement

ಆನ್‌ಲೈನ್‌ ಟಿಕೆಟ್‌ ಹೊಂಬಾಳೆ ಫಿಲಂಸ್‌ನ ಕೆ.ಜಿ.ಎಫ್‌ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗ ಮಾಮೂಲಿಯಾಗಿ ಕ್ಯೂನಲ್ಲಿ ನಿಂತು ಬಾಲ್ಕನಿ ಟಿಕೆಟ್‌ ಬೇಕು ಎಂದರೆ ಸಿಗುವಂತಿಲ್ಲ. ಏಕೆಂದರೆ, ಆನ್‌ಲೈನ್‌ನಲ್ಲಿ ಪೇಟಿಎಮ್‌ ಮೂಲಕ ಬಾಲ್ಕನಿ ಸೀಟ್‌ಗಳ ಬುಕ್ಕಿಂಗ್‌ ಪ್ರಕ್ರಿಯೆ ನಡೆದಿದ್ದು, ಸೋಮವಾರದವರೆಗೆ ಟಿಕೆಟ್‌ ಮಾರಾಟ ಆಗಿವೆ. ಬಾಲ್ಕನಿ ಟಿಕೆಟ್‌ ಸೋಮವಾರವರೆಗೆ ಸಿಗುವುದು ಸಂದೇಹ.
 ಮಹಾದೇವಗೌಡ, ಗೀತಾಂಜಲಿ ಚಿತ್ರಮಂದಿರದ ವ್ಯವಸ್ಥಾಪಕ.

Advertisement

Udayavani is now on Telegram. Click here to join our channel and stay updated with the latest news.

Next