ಐದು ಸಾವಿರ ಕೆ.ಜಿ. ಕೇಕ್, 216 ಅಡಿ ಎತ್ತರದ ಕಟೌಟ್, ಸಾವಿರಾರು ಸಂಖ್ಯೆಯ ಅಭಿಮಾನಿಗಳ ಉದ್ದನೆಯ ಸಾಲು, ಚಪ್ಪಾಳೆ, ಶಿಳ್ಳೆ, ಜೈಕಾರಗಳ ಸದ್ದು… ಇದು ನಾಯಂಡಹಳ್ಳಿ ಬಳಿ ಇರುವ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಕಂಡು ಬಂದ ದೃಶ್ಯ. ಇದಕ್ಕೆಲ್ಲ ಕಾರಣವಾಗಿದ್ದು ಯಶ್ ಅವರ 34 ನೇ ಹುಟ್ಟಹಬ್ಬ. ಹೌದು, ಯಶ್ ಬುಧವಾರ ತಮ್ಮ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪರಿ ಹೀಗಿತ್ತು.
ಈ ಮೂಲಕ ಅವರ ಈ ವರ್ಷದ ಬರ್ತ್‌ಡೇ ದಾಖಲೆಗೆ ಸೇರಿಕೊಂಡಿತು. ಅವರ ಅಭಿಮಾನಿಗಳು ಪ್ರೀತಿಯಿಂದ ಈ ಬಾರಿಯ ಹುಟ್ಟುಹಬ್ಬಕ್ಕೆ ಐದು ಸಾವಿರ ಕೆ.ಜಿ. ಕೇಕ್, ತಯಾರಿಸಿದ್ದರು. ಪತ್ನಿ ರಾಧಿಕಾ ಪಂಡಿತ್ ಜೊತೆ ಸೇರಿ ಯಶ್ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಅಲಹಾಬಾದ್‌ನಿಂದ ಆಗಮಿಸಿದ್ದ ವರ್ಲ್ಡ್ ರೆಕಾರ್ಡ್ ಕಮಿಟಿ ಅಧ್ಯಕ್ಷ ಪವನ್ ಸಾಲಂಗಿ ಅವರು,
ಯಶ್ ಅಭಿಮಾನಿಗಳು ಮಾಡಿದ್ದ ಐದು ಸಾವಿರ ಕೆಜಿ ಕೇಕ್ ಪರಿಶೀಲಿಸಿ, “ಇದು ಸೌತ್ ಇಂಡಿಯಾದಲ್ಲೇ ಮೊದಲು ಮತ್ತು ಇಲ್ಲಿಯವರೆಗೆ ಯಾವುದೇ ಸೆಲೆಬ್ರಿಟಿ ಐದು ಸಾವಿರ ಕೆ.ಜಿ. ಕೇಕ್ ಕಟ್ ಮಾಡಿ ಬರ್ತ್‌ಡೇ ಆಚರಿಸಿಕೊಂಡಿಲ್ಲ. ಹಾಗಾಗಿ ಇದು ವಿಶ್ವ ದಾಖಲೆ ಪಟ್ಟಿಗೆ ಸೇರಲಿದೆ’ ಎಂದಿದ್ದಾರೆ. ಇದರೊಂದಿಗೆ ಯಶ್ ಅವರ 216 ಅಡಿ ಕಟೌಟ್ ಕೂಡ ನಿರ್ಮಿಸಿರುವುದು ಕೂಡ ದಾಖಲೆಯಾಗಿದೆ. ನಂದಿ ಲಿಂಕ್ ಗ್ರೌಂಡ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.
ನಾನು ಹೆಜ್ಜೆ ಇಟ್ಟಾಗಿದೆ…!: ಕೇಕ್ ಕತ್ತರಿಸಿದ ಬಳಿಕ ಮಾತಿಗಿಳಿದ ಯಶ್, ನಿಮಗಾಗಿ “ಕೆಜಿಎಫ್ 2′ ಚಿತ್ರದ ಡೈಲಾಗ್ ಹೇಳ್ತೀನಿ. “ಏನಂದೆ, ಒಂದು ಹೆಜ್ಜೆ ಇಟ್ಕೊಂಡು ಬಂದೋನು ಅಂತ ಹೇಳ್ದ. ಕರೆಕ್ಟ್. ಗಡಿಯಾರದಲ್ಲಿ ಒಂದು ಗಂಟೆಯಾಗಬೇಕು ಅಂದರೆ ದೊಡ್ಡ ಮುಳ್ಳು 60 ಹೆಜ್ಜೆ ಇಡಬೇಕು. ಆದರೆ ಚಿಕ್ಕ ಮುಳ್ಳು ಒಂದು ಹೆಜ್ಜೆ ಇಟ್ಟರೆ ಸಾಕು. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ.
ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ, ಇನ್ಮೆಲಿಂದ ಆ ಟೆರಿಟರಿ ನಂದು, ಈ ಟೆರಿಟರಿ ನಿಂದು ಅನ್ನೋದೆಲ್ಲ ಬಿಟ್ಟುಬಿಡಿ, ವರ್ಲ್ಡ್ ಈಸ್ ಮೈ ಟೆರಿಟರಿ..’ ಎಂದು ಚಿತ್ರದ ಡೈಲಾಗ್ ಹೇಳುವ ಮೂಲಕ ತಮ್ಮ ಫ್ಯಾನ್ಸ್‌ಗೆ ಖುಷಿಪಡಿಸಿದರು. ಇನ್ನು, ಬರ್ತ್‌ಡೇಗೆ ಚಿತ್ರದ ಟೀಸರ್ ರಿಲೀಸ್ ಆಗಬೇಕಿತ್ತು. ಕಾರಣಾಂತರದಿಂದ ಆಗಲಿಲ್ಲ. ಅದಕ್ಕೆ ನಿರ್ದೇಶಕರು ಅಭಿಮಾನಿಗಳಲ್ಲಿ ಕ್ಷಮೆ ಕೂಡ ಕೇಳಿದ್ದರು. ಅಭಿಮಾನಿಗಳನ್ನು ಬೇಸರಪಡಿಸಬಾರದು ಅಂತ ಯಶ್ ಡೈಲಾಗ್ ಹೇಳಿ ಅವರ ಖುಷಿಗೆ ಕಾರಣರಾದರು.
ಇದೇ ವೇಳೆ ಚಿತ್ರದ ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಯಶ್ ಕೈಯಲ್ಲಿ ಸುತ್ತಿಗೆ ಹಿಡಿದು ಖಡಕ್ ಪೋಸು ಕೊಟ್ಟಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು, ಮಂಗಳವಾರ ರಾತ್ರಿ 11.58ಕ್ಕೆ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟರ್ ಶೇರ್ ಮಾಡಿ, “ರಾಕಿಭಾಯ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ರಾಗಿ ಈಗ ಬ್ರಾಂಡ್ ಆಗಿದೆ. ಎಲ್ಲರೂ ಯಶ್ ಅವರ ಜೊತೆ ಸುರಕ್ಷಿತ ಹುಟ್ಟುಹಬ್ಬ ಆಚರಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳ ಜೊತೆ ಸೆಲ್ಫಿ: ಯಶ್ ಅಭಿಮಾನಿಗಳು ಮಂಗಳವಾರ ಮಧ್ಯರಾತ್ರಿಯಲ್ಲೇ ಗ್ರೌಂಡ್ಸ್‌ನಲ್ಲಿ ಜಮಾಯಿಸಿದ್ದರು. ಯಶ್ ಆಗಮಿಸುತ್ತಿದ್ದಂತೆಯೇ ಚಪ್ಪಾಳೆ, ಕೇಕೆ ಸದ್ದು ಜೋರಾಗಿಸುವ ಮೂಲಕ ಅವರಿಗೆ ಜೈಕಾರ ಹಾಕಿದರು. ಅಭಿಮಾನಿಗಳು ಸಾಲುಗಟ್ಟಿ ನಿಂತು ಯಶ್ ಜೊತೆ ಸೆಲ್ಫಿ ತೆಗೆಸಿಕೊಂಡರು. ಅದು ಮಧ್ಯರಾತ್ರಿವರೆಗೂ ಮುಂದುವರೆಯಿತು. ಇನ್ನು. ಬುಧವಾರ ಬೆಳಗ್ಗೆ ಕೂಡ ಅಭಿಮಾನಿಗಳು ಯಶ್ ಅವರ ಜೊತೆ ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟರು. ನಂತರ ಅಭಿಮಾನಿಗಳಿಗೆ ಯಶ್ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.