Advertisement

ಯರಗೋಳ್‌ ಅಣೆಕಟ್ಟು ಪೂರ್ಣಗೊಂಡರೂ ನೀರಿಲ್ಲ!

01:46 PM Feb 08, 2021 | Team Udayavani |

ಬಂಗಾರಪೇಟೆ: ಜಿಲ್ಲೆಯ ಬಹು ನಿರೀಕ್ಷಿತ ಕುಡಿಯುವ ನೀರಿನ ಯೋಜನೆ ಆಗಿರುವ ಯರಗೋಳ್‌ ಅಣೆಕಟ್ಟು ಕಾಮಗಾರಿ ಆಮೆಗತಿ ಪ್ರಾರಂಭವಾಗಿದ್ದರಿಂದ 13 ವರ್ಷಗಳ ನಂತರ ಮುಗಿದು ಉದ್ಘಾಟನೆಗೆ ಸಿದ್ಧವಾಗಿದ್ದು, ಅಣೆಕಟ್ಟಿನಲ್ಲಿ ನೀರಿಲ್ಲದೆ ಒಣಗುತ್ತಿದೆ. ಇದರಿಂದ ಅಣೆಕಟ್ಟು ಉದ್ಘಾಟನೆ ಭಾಗ್ಯ ಮುಂದೂಡಲಾಗಿದೆ ಎನ್ನಲಾಗಿದೆ.

Advertisement

ಹೇಳಿದ್ದು 24 ತಿಂಗಳು, ಆಗಿದ್ದು 13 ವರ್ಷ: ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು ಪಟ್ಟಣಗಳಿಗೆ ಹಾಗೂ ಈ ಮೂರು ನಗರಗಳಿಗೆ ಹಾದುಹೋಗುವ ಮಾರ್ಗ ಮಧ್ಯೆ ಬರುವ 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಯರಗೋಳ್‌ ಅಣೆಕಟ್ಟು ಆಗಿದೆ.

ಯೋಜನೆಯನ್ನು 2006ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಕಾಮಗಾರಿಯ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೋಲಾರ ವಿಭಾಗ ಹೊಂದಿದೆ. ಗುತ್ತಿಗೆಯನ್ನು ಆಂಧ್ರ ಮೂಲದ ರಾಮ್‌ಕೀ ಕಂಪನಿಯು ಪಡೆದಿದ್ದು, 24 ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿ ಕಾಮಗಾರಿ ಮುಗಿಸಲು ಬರೋಬ್ಬರಿ 13 ವರ್ಷ ತೆಗೆದುಕೊಂಡಿದೆ.

ಕಾಮಗಾರಿ ವಿಳಂಬಕ್ಕೆ ದಂಡ: 2008 ರಲ್ಲಿ ಆರಂಭವಾಗಿದ್ದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಮುಗಿಸಲು ತಡವಾಗಿದ್ದಕ್ಕೆ, ಗುತ್ತಿಗೆ ಪಡೆದಿರುವ ರಾಮ್‌ ಕೀ ಕಂಪನಿ 1.53 ಕೋಟಿ ರೂ. ದಂಡವನ್ನು ಸರ್ಕಾರಕ್ಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಮಗಾರಿಗೆ 2008 ರಲ್ಲಿ 160 ಕೋಟಿ ಎಂದು  ಅಂದಾಜಿಸಲಾಗಿತ್ತು, ನಂತರ 240 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಆರಂಭವಾದ ಯೋಜನೆ ಕುಂಟುತ್ತಾ ಹಲವು ಏಳು ಬೀಳುಗಳ ನಡುವೆ ಅಣೆಕಟ್ಟಿನ ಕಾಮಗಾರಿಯು 13 ವರ್ಷಗಳ ನಂತರ ಬಹುತೇಕ ಮುಗಿದು ಲೋಕಾರ್ಪಣೆಗೆ ಸಿದ್ಧವಾಗುತ್ತಿದೆ.

Advertisement

ಅಣೆಕಟ್ಟು ಲೋಕಾರ್ಪಣೆ ಮುಂದಕ್ಕೆ: ಯರಗೋಳ್‌ ಅಣೆಕಟ್ಟು ಲೋಕಾರ್ಪಣೆಗೆ ಹಲವು ಬಾರಿ ನಿಗದಿ  ಯಾಗಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮುಂದೂಡಲ್ಪಟ್ಟು ಅಂತಿಮವಾಗಿ ಜ.26 ಗಣ ರಾಜ್ಯೋತ್ಸವದಂದು ಲೋಕಾರ್ಪಣೆಯ ದಿನಾಂಕ ನಿಗದಿಯಾಗಿತ್ತು. ಅಣೆಕಟ್ಟಿನಲ್ಲಿ ನೀರಿಲ್ಲದ ಕಾರಣ ಡ್ಯಾಂಗೆ ನೀರು ಬಂದು ತುಂಬುವ ತನಕ ಲೋಕಾರ್ಪಣೆ ತಡೆ ಹಿಡಿಯಲಾಗಿದೆ.

2020-21ನೇ ಸಾಲಿನಲ್ಲಿ ತಾಲೂಕಿನಲ್ಲಿ ಮಳೆಯಾಶ್ರಿತವಾಗಿ ಬೆಳೆಯುವ ಬೆಳೆಗಳಿಗೆ ಸಮರ್ಪಕವಾದ ಮಳೆಯಾಗಿ ಉತ್ತಮ ರಾಗಿ ಸೇರಿದಂತೆ ಇತರೆ ಬೆಳೆಗಳು ಬೆಳೆದಿದ್ದಾರೆ. ನೀರು ಸಂಗ್ರಹವಾಗುವಷ್ಟು ಮಳೆ ಬಂದಿಲ್ಲ.

ತಾಲೂಕಿಗೆ ಕೆ.ಸಿ.ವ್ಯಾಲಿ ನೀರಿಲ್ಲ: ಸಮರ್ಪಕ ಮಳೆಯಾಗದಿದ್ದಲ್ಲಿ ಕೆ.ಸಿ.ವ್ಯಾಲಿ ನೀರನ್ನು ಮಾರ್ಕಂಡೇಯ ಡ್ಯಾಂಗೆ ಹರಿಸಿ ಅಲ್ಲಿಂದ ನೀರು ಹರಿಯುವಂತೆ ಮಾಡಿ ಯರಗೋಳ್‌ ಅಣೆಕಟ್ಟನ್ನು ತುಂಬಿಸಬೇಕು ಎಂಬ ಯೋಜನೆ ರೂಪಿಸಲಾಗಿತ್ತು. ಆದರೆ ಕೆ.ಸಿ. ವ್ಯಾಲಿ ನೀರು ಕಳೆದ ಎರಡು ವರ್ಷಗಳಿಂದ ಬರುತ್ತಿದೆ ಎಂದು ಜನಪ್ರತಿನಿಧಿಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳಿ ಹೇಳಿ ಸಾಕಾಗಿದೆ. ಕೆ.ಸಿ. ವ್ಯಾಲಿ ನೀರು ಕೋಲಾರ, ಮಾಲೂರು ಹಾಗೂ ಶ್ರೀನಿವಾಸಪುರ ತಾಲೂಕುಗಳಿಗೆ ಮಾತ್ರ ಸೀಮಿತವಾಗಿರುವಂತಿದೆ. ಯರಗೋಳ್‌ ಅಣೆಕಟ್ಟು ಸಾರ್ವಜನಿಕರ ಉಪಯೋಗಕ್ಕೆ ಬರಲು ಮುಖ್ಯವಾಗಿ ಸಮರ್ಪಕ ಮಳೆಯಾದಲ್ಲಿ ನೀರು ಶೇಖರಣೆಯಾಗಲು ಇದೊಂದು ಮಹತ್ವದ ಅಣೆಕಟ್ಟು ಆಗಲಿದೆ ಎಂಬುವುದಕ್ಕೆ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ :ಪಕ್ಷಿ ಗಣತಿ ಪೂರ್ಣ ! ಹೊಸ ಪ್ರಭೇದದ ಹಕ್ಕಿಗಳು ಗೋಚರ

ನೂರಾರು ಕೋಟಿ ರೂ.ವೆಚ್ಚದಿಂದ ಕೂಡಿದ ಯೋಜನೆಗೆ ಹೊರಗಿನಿಂದ ಯಾವುದಾದರೊಂದು ನೀರಾವರಿ ಯೋಜನೆಯ ಮೂಲಕ ನೀರು ಬಂದಿದ್ದೇ ಆದಲ್ಲಿ ನೀರು ಶೇಖರಣೆಗೆ ಇದು ಉತ್ತಮ ಅಣೆಕಟ್ಟು ಆಗಿ ಕೋಲಾರ ಜಿಲ್ಲೆಗೆ ವರದಾನವಾಗುವಲ್ಲಿ ಸಂಶಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next