Advertisement

ಕೆ.ಸಿ. ವ್ಯಾಲಿ ಜತೆ ಯರಗೋಳ್‌, ಮೇಕೆದಾಟು ಸೇರಲಿ

10:43 AM Jun 29, 2019 | Team Udayavani |

ಮಾಲೂರು: ಕೆ.ಸಿ.ವ್ಯಾಲಿ ಜೊತೆಗೆ ಯರಗೋಳ್‌, ಮೇಕೆದಾಟು ಯೋಜನೆ ನೀರು ಶೀಘ್ರ ಜಿಲ್ಲೆಯ ಜನತೆಗೆ ಕೊಡುವ ಕೆಲಸವಾದಲ್ಲಿ ಮಾತ್ರ ಪಾರಂಪರಿಕವಾಗಿ ಉಳಿಯಲು ಸಾಧ್ಯವಿದೆ. ಇಲ್ಲವಾದಲ್ಲಿ ಕೋಲಾರ ಮರಳುಗಾಡು ಆಗುವ ಆತಂಕವಿದೆ ಎಂದು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತ್ಯ ಪರಿಚಾರಕ ಎಂ.ವಿ.ತಮ್ಮಯ್ಯ ಹೇಳಿದರು.

Advertisement

ಪಟ್ಟಣದ ಮಾಸ್ತಿ ರಂಗಮಂದಿರದಲ್ಲಿ ನಡೆದ ಸಮ್ಮೇಳನದ ಸಭೆಯಲ್ಲಿ ತಮ್ಮ ಸರ್ವಾಧ್ಯಕ್ಷರ ಭಾಷಣದಲ್ಲಿ ತಮ್ಮ ಸುದೀರ್ಘ‌ ಅನುಭವ ಮಂಡಿಸಿದ ಅವರು, ಒಂದು ಕಾಲದಲ್ಲಿ ತರಕಾರಿ, ಹಣ್ಣು, ಹೂಗಳಿಗೆ ಹೆಸರಾಗಿದ್ದ ತಾಲೂಕಿನ ಕೃಷಿಯ ಪರಿಸ್ಥಿತಿ ಶೋಚನಿಯ ಸ್ಥಿತಿಯಲ್ಲಿದೆ. 1500 ಅಡಿ ಕೊರದ ಕೊಳವೆಬಾವಿಗಳಲ್ಲಿ ನೀರಿಲ್ಲದೆ, ರೈತ ಪರಿತಪಿಸುತ್ತಿದ್ದು, ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಶಾಶ್ವತ ನೀರಾವರಿ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗಬೇಕಾಗಿದೆ ಎಂದು ತಿಳಿಸಿದರು.

ಕನ್ನಡ ಶಾಲೆ ಉಳಿಸುವ ಕೆಲಸವಾಗಲಿ: ಇತ್ತೀಚಿನ ದಿನಗಳಲ್ಲಿ ಸರ್ಕಾರ ಕೈಗೊಂಡಿರುವ ದಿಟ್ಟತನದಿಂದ ರಾಜ್ಯದಲ್ಲಿ 973 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಬೋಧನಾ ತರಗತಿ ಆರಂಭಿಸಿರುವುದು ಗಡಿಭಾಗದಲ್ಲಿನ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನವಾಗಲಿ ಎಂದ ಅವರು, ಪೋಷಕ ವರ್ಗಕ್ಕೆ ಕನ್ನಡದ ಮೇರು ಸಾಹಿತಿಗಳು ಮತ್ತು ಜ್ಞಾನಪೀಠದ ಹಾದಿಯಲ್ಲಿ ಅನೇಕ ಮಹನೀಯರು ಕನ್ನಡ ಶಾಲೆಗಳಲ್ಲಿಯೇ ಕಲಿತವರು ಎನ್ನುವುದನ್ನು ಮನದಟ್ಟು ಮಾಡಬೇಕಾಗಿದೆ. ಬಾಯಿಂದ ಬಾಯಿಗೆ ಪ್ರಚಾರವಾಗುತ್ತಿದ್ದ ಜಾನಪದ ಕಲೆ ದೂರುವಾಗುತ್ತಿರುವ ಕಾರಣ ನಮ್ಮ ಅನೇಕ ಸಂಸ್ಕೃತಿಯ ಕಲೆಗಳ ನಾಶವಾಗುತ್ತಿವೆ. ಇದಕ್ಕೂ ಮುನ್ನ ರಾಷ್ಟ್ರಧ್ವಜವನ್ನು ತಹಶೀಲ್ದಾರ್‌ ವಿ.ನಾಗರಾಜು, ಕಸಾಪದ ಅಧ್ಯಕ್ಷ ನಾಗನಂದ ಕೆಂಪರಾಜ್‌ ನಾಡಧ್ವಜವನ್ನು ಮತ್ತು ದಾ.ಮು.ವೆಂಕಟೇಶ್‌ ಪರಿಷತ್‌ ಧ್ವಜಾರೋಹಣ ಮಾಡಿದರು. ಅರಳೇರಿ ವೃತ್ತದಲ್ಲಿನ ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸರ್ವಾಧ್ಯಕ್ಷ ಎಂ.ವಿ.ತಮ್ಮಯ್ಯ ಅವರನ್ನು ಮೆರವಣಿಗೆ ಮೂಲಕ ಮಾಸ್ತಿ ರಂಗಮಂದಿರದಲ್ಲಿ ನಿರ್ಮಿಸಿದ್ದ ಡಾ.ಗಿರೀಶ್‌ ಕಾರ್ನಾಡ್‌ ವೇದಿಕೆಗೆ ವಿವಿಧ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಕರೆ ತರಲಾಯಿತು.

ಸನ್ಮಾನ, ಪ್ರತಿಭಾ ಪುರಸ್ಕಾರ: ಕಾರ್ಯಕ್ರಮದ ಅಂಗವಾಗಿ ಸಮಾಜದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅತ್ಮೀಯವಾಗಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next