ಧಾರವಾಡ: ಎಲ್ಲೆಂದರಲ್ಲಿ ನುಗ್ಗಿ ಕೊರಕಲು ಉಂಟು ಮಾಡಿದ ಮಹಾಮಳೆ, ದಾರಿಗಳನ್ನು ಸರೋವರ ಮಾಡಿದ ಹಳ್ಳಗಳು, ತಗ್ಗು ಪ್ರದೇಶಕ್ಕೆ ನುಗ್ಗಿ ಹರಿದ ಹಳ್ಳಕ್ಕೆ ಸಿಲುಕಿ ಬೆಳೆನಾಶ, ತೇಲಿಕೊಂಡು ಹೋದ ಮರ ಮತ್ತು ದಿಮ್ಮೆಗಳು. ಇವೆಲ್ಲವೂ ಜಿಲ್ಲೆಯಲ್ಲಿ ಮಹಾಮಳೆ ಸೃಷ್ಟಿಸಿದ ಅವಾಂತರ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಮಳೆಯಿಂದಾದ ಬೆಳೆಹಾನಿ, ಮನೆಹಾನಿ, ಆಸ್ತಿ ಹಾನಿಯನ್ನೆನೋ ಸರಿ ಮಾಡಬಹುದು. ಆದರೆ ಹೊಲಕ್ಕೆ ಹೋಲಗಳೇ ಕೊಚ್ಚಿ ಕಿನಾರೆಗಳು ಬಿದ್ದಿರುವುದನ್ನು ಸರಿ ಮಾಡುವವರು ಯಾರು?
ಡೋರಿ-ಬೆಣಚಿ ಹಳ್ಳದಲ್ಲಿ 100 ಎಕರೆಗೂ ಹೆಚ್ಚು ಹೊಲ ಕೊಚ್ಚಿಕೊಂಡು ಹೋಗಿದೆ. ಇಲ್ಲಿ ದೈತ್ಯ ಗುಂಡಿಗಳು ಬಿದ್ದಿವೆ. ಇನ್ನು ಕರೆಮ್ಮನ ಹಳ್ಳದಲ್ಲಿ ವೀರಾಪುರ, ರಾಮಾಪುರ ಗ್ರಾಮಗಳ 20ಕ್ಕೂ ಹೆಚ್ಚು ರೈತರ 40 ಎಕರೆ ಭೂಮಿ ಕೊರಕಲಾಗಿದೆ. ಬೇಡ್ತಿ ಹಳ್ಳದುದ್ದಕ್ಕೂ 150 ರೈತರ ಅಂದಾಜು 230 ಎಕರೆಯಷ್ಟು ಭೂಮಿ ಕೊರಕಲಾಗಿದ್ದು, ಅಲ್ಲಲ್ಲಿ ಮಣ್ಣಿನ ರಸ್ತೆಗಳೇ ಕೊಚ್ಚಿಕೊಂಡು ಹೋಗಿವೆ. ತುಪರಿ ಹಳ್ಳದ ಅಕ್ಕಪಕ್ಕದ 35ಕ್ಕೂ ಹೆಚ್ಚು ರೈತರ 200 ಎಕರೆ ಭೂಮಿ ಕೊರಕಲಾಗಿದೆ. ಬೆಣ್ಣೆ ಹಳ್ಳದ ಪಕ್ಕದಲ್ಲಿನ 37ಕ್ಕೂ ಹೆಚ್ಚು ರೈತರ 180 ಎಕರೆಗೂ ಅಧಿಕ ಭೂಮಿ ಕೊರಕಲು ಬಿದ್ದಿದೆ ಎಂದು ರಾಜ್ಯ ರೈತ ಸಂಘದ ಮುಖಂಡರು ಅಂದಾಜು ಮಾಡಿದ್ದು, ಇದಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
Advertisement
ಇಂತಹದೊಂದು ಪ್ರಶ್ನೆಯನ್ನು ಜಿಲ್ಲೆಯಲ್ಲಿ ನೆರೆ ಪ್ರವಾಹಕ್ಕೆ ತಮ್ಮ ಹೊಲಗಳನ್ನೇ ಕಳೆದುಕೊಂಡ ನೂರಾರು ರೈತರು ಕೇಳುತ್ತಿದ್ದಾರೆ. ಬೇಡ್ತಿ, ತುಪರಿ ಮತ್ತು ಬೆಣ್ಣೆ ಹಳ್ಳ ಸೇರಿದಂತೆ 23ಕ್ಕೂ ಅಧಿಕ ಹಳ್ಳಗಳ ಅಕ್ಕಪಕ್ಕದ ಹೊಲಗಳಲ್ಲಿ ರಭಸವಾಗಿ ನುಗ್ಗಿದ ನೀರು ಮಾಡಿದ ಅವಾಂತರಕ್ಕೆ ರೈತರು ಬೇಸತ್ತು ಹೋಗಿದ್ದಾರೆ. ಹೊಲದಲ್ಲಿನ ಬೆಳೆ ಕೊಚ್ಚಿ ಹೋದರೆ ಅದಕ್ಕೆ ಸರ್ಕಾರ ಒಂದಿಷ್ಟು ಪರಿಹಾರ ಕೊಡುತ್ತದೆ. ರೈತರು ಒಂದಿಷ್ಟು ಕಣ್ಣೀರು ಸುರಿಸಿ ಸೈರಿಸಿಕೊಳ್ಳಬಹುದು. ಆದರೆ ಹಳ್ಳಗಳು ಹರಿದ ರಭಸಕ್ಕೆ ಹೊಲಕ್ಕೆ ಹೊಲಗಳೇ ಗುರುತು ಸಿಕ್ಕದಷ್ಟು ಕೊಚ್ಚಿಕೊಂಡು ಹೋಗಿದ್ದು ಮಾಲೀಕರನ್ನು ಕಂಗಾಲು ಮಾಡಿಟ್ಟಿದೆ.
Related Articles
ಹಳ್ಳಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ನಿರ್ಮಿಸಿದ ಚೆಕ್‌ಡ್ಯಾಂಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡದಿರುವುದೇ ಹೊಲಗಳು ಹೆಚ್ಚು ಕೊಚ್ಚಿಕೊಂಡು ಹೋಗಲು ಕಾರಣ ಎಂದು ರೈತರು ಆಪಾದಿಸುತ್ತಿದ್ದಾರೆ. ನೂತನ ಚೆಕ್‌ಡ್ಯಾಂಗಳನ್ನು ನಿರ್ಮಿಸುವಾಗ ಹಳ್ಳದಲ್ಲಿ ತೋಡಿದ ಮಣ್ಣನ್ನು ಚೆಕ್‌ಡಾಂ ನಿರ್ಮಾಣದ ನಂತರ ಬಿಗಿಯಾಗಿ ಹಾಕಲಿಲ್ಲ. ಅಷ್ಟೇಯಲ್ಲ, ಚೆಕ್‌ಡ್ಯಾಂಗಳ ಅಕ್ಕ ಪಕ್ಕ ತೋಡಿದ ಮಣ್ಣನ್ನು ಬರೀ ಜೆಸಿಬಿ ಬಳಸಿಕೊಂಡು ನೂಕಲಾಗಿತ್ತು. ಮೇಲಿನಿಂದ ಹಳ್ಳ ಪ್ರವಾಹದ ರೀತಿಯಲ್ಲಿ ಹರಿದು ಬಂದಿದ್ದರಿಂದ ಈ ಚೆಕ್‌ಡ್ಯಾಂಗಳು ನೀರು ತಡೆದಿವೆ. ಹೀಗಾಗಿ ಅದರ ಅಕ್ಕಪಕ್ಕದ ಭೂಮಿ ಕತ್ತರಿಸಿಕೊಂಡು ಹೊಲಗಳಿಗೆ ಪ್ರವಾಹದ ನೀರು ನುಗ್ಗಿದೆ. ಇದು ರೈತರ ಹೊಲಗಳಲ್ಲಿ ಕಿನಾರೆ ಮತ್ತು ದೈತ್ಯ ಗುಂಡಿಗಳು ನಿರ್ಮಾಣವಾಗುವಂತೆ ಮಾಡಿದೆ. ತುಪರಿ ಹಳ್ಳಕ್ಕೆ ಲೋಕೂರು, ಗರಗ, ತಡಕೋಡ, ಬೆಟಗೇರಿ, ಕಲ್ಲೆ, ಕಬ್ಬೂರಿನಲ್ಲಿ ನಿರ್ಮಿಸಿದ್ದ ಚೆಕ್‌ಡ್ಯಾಂಗಳ ಅಕ್ಕ ಪಕ್ಕದ ಹೊಲಗಳು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದು, ಅಲ್ಲಿ ದೈತ್ಯ ಗುಂಡಿಗಳು ನಿರ್ಮಾಣವಾಗಿವೆ. ಈ ಹೊಲಗಳಲ್ಲಿ ಟನ್‌ಗಟ್ಟಲೇ ಮಣ್ಣು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.
ಹೊಲ ಸರಿಮಾಡುವವರು ಯಾರು?: ಬೆಳೆ ಹಾನಿಗೆ ಪರಿಹಾರದ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ. ಇನ್ನು ಮನೆ ಜಖಂಗೊಂಡಿದ್ದಕ್ಕೆ ಪೋಟೋಗಳ ಮೂಲಕ ಪರಿಹಾರ ನೀಡಲಾಗುತ್ತಿದೆ. ಆದರೆ ರೈತರ ಹೊಲಕ್ಕೆ ಹೊಲಗಳೇ ಕೊಚ್ಚಿ ಹೋಗಿರುವುದನ್ನು ಮರಳಿ ನಿರ್ಮಿಸಿಕೊಡುವವರು ಯಾರು? ಇದಕ್ಕೆ ಸರ್ಕಾರದ ಮಟ್ಟದಲ್ಲಿ ಅವಕಾಶವಿದೆಯೇ? ಎನ್ನುವ ಪ್ರಶ್ನೆ ರೈತರನ್ನು ಕಾಡುತ್ತಿದೆ. ಇಷ್ಟಕ್ಕೂ ಹೊಲಗಳೇ ಹಾನಿಯಾದರೆ ಅದನ್ನು ಮರಳಿ ನಿರ್ಮಿಸಿಕೊಳ್ಳಲು ಲಕ್ಷಗಟ್ಟಲೇ ಹಣಬೇಕು. ಹೀಗಾಗಿ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
ನಮ್ಮೂರಿನಲ್ಲಿ ಡೋರಿ-ಬೆಣಚಿ ಹಳ್ಳ ಹರಿದ ರಭಸಕ್ಕೆ ಹಳ್ಳದ ಪಕ್ಕದಲ್ಲಿನ ಹೊಲಗಳೇ ಕೊಚ್ಚಿಕೊಂಡು ಹೋಗಿವೆ. ಬೆಳೆಹಾನಿ ಕೊಡಬಹುದು, ಆದರೆ ಹೊಲವೇ ಹಾನಿಯಾದರೆ ಯಾರಿಗೇ ಹೇಳುವುದು. ಅದನ್ನು ಮರಳಿ ನಿರ್ಮಿಸಿಕೊಳ್ಳುವುದು ಹೇಗೆ? ಹೀಗಾಗಿ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು.•ಶಿವಾಜಿ ದೇವಪ್ಪನವರ, ಡೋರಿ ರೈತ
Advertisement
ತುಪರಿ ಹಳ್ಳ ಈ ಹಿಂದೆ ಯಾವಾಗಲೂ ಇಷ್ಟೊಂದು ಅವಾಂತರಗಳನ್ನು ಮಾಡಿಲ್ಲ. ಈ ಬಾರಿ ಹೊಲಕ್ಕೆ ಹೊಲಗಳೇ ಕೊಚ್ಚಿಕೊಂಡು ಹೋಗಿವೆ. ಅಂತಹ ರೈತರಿಗೆ ಸರ್ಕಾರ ಹೆಚ್ಚಿನ ಪರಿಹಾರ ಕೊಡಬೇಕು.•ವೀರೇಶ ಚಿಕಣಿ, ಲೋಕೂರು ಗ್ರಾಮಸ್ಥ
ಜಿಲ್ಲೆಯಲ್ಲಿ ಸುಜಲ ಜಲಾನಯನ ಯೋಜನೆಯಡಿ ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ಹಳ್ಳಗಳ ಪಕ್ಕದಲ್ಲಿ ಲಕ್ಷಗಟ್ಟಲೇ ಗಿಡಮರಗಳನ್ನು ಬೆಳೆಯಲಾಗಿದೆ. ಆದರೆ ಪ್ರಾಣಿಗಳಿಂದ ರೈತರ ಬೆಳೆ, ಗಿಡ ಹಾನಿಯಾದರೆ ಮಾತ್ರ ಅರಣ್ಯ ಇಲಾಖೆಯಿಂದ ಪರಿಹಾರ ಕೊಡುತ್ತೇವೆ. ನೈಸರ್ಗಿಕ ವಿಕೋಪಗಳಿಂದ ಹಾನಿಯಾದರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿಲ್ಲ.•ಮಹೇಶಕುಮಾರ್, ಡಿಎಫ್‌ಒ
ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಹೊಲಗಳು ಅಲ್ಲಲ್ಲಿ ಕಿತ್ತುಕೊಂಡು ಹೋಗಿರುವ ಕುರಿತು ರೈತರೇ ಮಾಹಿತಿ ನೀಡಿದ್ದಾರೆ. ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಬೆಳೆಗಳಲ್ಲಿ ಭಾರಿ ನೀರು ನಿಂತಿದ್ದರೆ ಅದನ್ನು ಮೇಲಕ್ಕೆತ್ತಲು ಪರಿಹಾರ ನೀಡುತ್ತೇವೆ. ಹೊಲಕ್ಕೆ ಹೊಲವೇ ಕಿತ್ತು ಹೋದರೆ ಅದಕ್ಕೆ ಪರಿಹಾರ ನೀಡುವ ಕುರಿತು ಇರುವ ಕಾನೂನು ಅವಕಾಶಗಳನ್ನು ಪರಿಶೀಲನೆ ನಡೆಸಿ ಕ್ರಮ ವಹಿಸುತ್ತೇವೆ.•ದೀಪಾ ಚೋಳನ್, ಜಿಲ್ಲಾಧಿಕಾರಿ
ನೆರೆ ಪೀಡಿತ ಪ್ರದೇಶಗಳಲ್ಲಿ ಅದರಲ್ಲೂ ಹಳ್ಳ ಮತ್ತು ನದಿ ಪಕ್ಕದ ರೈತರ ಹೊಲಗಳಲ್ಲಿನ ಬೆಲೆಬಾಳುವ ತೇಗ, ಗಂಧ, ಬಿಳಿಮತ್ತಿ, ಕರಿಮತ್ತಿ ಸೇರಿದಂತೆ ಬೆಲೆಬಾಳುವ ಮರಗಳು ಬೇರು ಸಮೇತ ಕಿತ್ತು ಬಿದ್ದಿವೆ. ಕೆಲವು ಕಡೆಗಳಲ್ಲಿ ತೇಲಿಕೊಂಡು ಕೂಡ ಹೋಗಿವೆ. ಇನ್ನು ಕೆಲವು ಜಮೀನುಗಳಲ್ಲಿ ನೆಟ್ಟ ಸಾಗವಾನಿ ಮರಗಳು ನೀರಿನ ಸೆಲೆಯಿಂದಾಗಿ ಕೊಳೆತು ಹೋಗುತ್ತಿವೆ. ಇವುಗಳಿಗೆ ಅರಣ್ಯ ಇಲಾಖೆ ಪರಿಹಾರ ಕೊಡಲು ಸಾಧ್ಯವಿಲ್ಲ ಎನ್ನುತ್ತಿದೆ. ತೋಟಗಾರಿಕೆ ಇಲಾಖೆ ಬರೀ ಮಾವು, ಮೆಣಸಿನಕಾಯಿಗೆ ಮಾತ್ರ ಪರಿಹಾರ ಎನ್ನುತ್ತಿದೆ. ಇನ್ನು ಜಿಲ್ಲಾಡಳಿತ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ಗಿಡಮರಗಳಿಗೆ ಪರಿಹಾರ ಯಾರು ಕೊಡುವರು ಎಂಬುದು ಯಕ್ಷ ಪ್ರಶ್ನೆಯಾಗಿದೆ.