Advertisement
ಯಮಲೋಕಕ್ಕೆ ಆಗಮಿಸಿದ ಜೀವಾತ್ಮಗಳ ಪಾಪ ಪುಣ್ಯಗಳ ಪರಿಶೀಲನೆ ನಡೆಸುತ್ತಿರುವ ಯಮ, ಮನುಷ್ಯ ಆತ್ಮವೊಂದು ಬಂದ ಸಂದರ್ಭದಲ್ಲಿ ಆತನ ಸಾವಿಗೆ ಕಾರಣ ಮತ್ತು ಆತನ ಪಾಪ ಪುಣ್ಯಗಳ ಲೆಕ್ಕ ನೀಡುವಂತೆ ಚಿತ್ರಗುಪ್ತನಲ್ಲಿ ಕೇಳುತ್ತಾನೆ. ಭೂಲೋಕದಲ್ಲಿನ ಧನಿಕನೋರ್ವನ ಏಕೈಕ ಪುತ್ರ, ಶಾಲಾ ವಿದ್ಯಾರ್ಥಿ, ಬೆಲೆ ಬಾಳುವ ದ್ವಿಚಕ್ರ ವಾಹನ ಹೊಂದಿದ್ದ ಈತ ವಾಹನ ಚಾಲನೆಯ ಪರವಾನಗಿ ಪಡೆಯದೇ ಹೆಲ್ಮೆಟ್ ಧರಿಸದೆ ಅತಿ ವೇಗದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಾ ದಾರಿಯಲ್ಲಿ ಹೋಗುತ್ತಿದ್ದ ನಿರಪರಾಧಿ ಬಾಲಕನಿಗೆ ಢಿಕ್ಕಿ ಹೊಡೆದು ಅವನ ಸಾವಿಗೆ ಕಾರಣನಾಗಿದ್ದಾನೆ. ಅಲ್ಲದೆ ಅದೇ ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಈತನೂ ಮೃತಪಟ್ಟಿದ್ದಾನೆ ಎಂದು ವಿವರಿಸುತ್ತಾನೆ.
Related Articles
Advertisement
ಅನಂತರ ಬಂದ ಮತ್ತೂಂದು ಆತ್ಮದ ಸಾವಿಗೆ ಕಾರಣ ಮತ್ತು ಆತನ ಪಾಪ ಪುಣ್ಯಗಳ ಲೆಕ್ಕ ಪರಿಶೀಲಿಸುವ ಯಮ, ಭೂ ಲೋಕದಲ್ಲಿ ದುರುಳನಾಗಿ ಕಾಲ ಕಳೆದು, ನಾಲ್ಕು ಚಕ್ರದ ವಾಹನ ಹೊಂದಿದ್ದ ಈತ, ವಾಹನದ ಅವಧಿ ನವೀಕರಿಸದೆ, ವಾಹನಕ್ಕೆ ವಿಮೆ ಮಾಡಿಸದೆ,ವಾಹನ ಚಾಲನೆ ಸಮಯದಲ್ಲಿ ಸೀಟ್ ಬೆಲ್ಟ್ ಹಾಕದೆ, ಪಾನಮತ್ತನಾಗಿ ವಾಹನ ಚಲಾಯಿಸಿ, ವಿದ್ಯುತ್ ಕಂಬಕ್ಕೆ ಗುದ್ದಿ ಆ ಕಂಬ ಪಕ್ಕದ ಮನೆ ಮೇಲೆ ಬಿದ್ದು, ಆ ಇಡೀ ಕುಟುಂಬದ ಸರ್ವನಾಶಕ್ಕೆ ಕಾರಣನಾಗಿ, ಅಲ್ಲಿಂದ ತಲೆ ಮರೆಸಿಕೊಂಡು ಜೀವನೋಪಾಯಕ್ಕೆ ಕಳ್ಳತನ, ದರೋಡೆ ಮಾಡುತ್ತಿದ್ದು, ಒಮ್ಮೆ ಅತಿಯಾಗಿ ಕುಡಿದು ರಸ್ತೆಯಲ್ಲಿ ನಡೆಯುವಾಗ, ಆಯ ತಪ್ಪಿ ವಾಹನದ ಕೆಳಗೆ ಬಿದ್ದು ಸಾವನಪ್ಪಿರುವುದನ್ನು ತಿಳಿದ ಯಮ ಕೆಡಕು ಎಂಬ ಎಚ್ಚರಿಕೆ ನುಡಿಯನ್ನು ಲೆಕ್ಕಿಸದೆ ಪಾನಮತ್ತನಾಗಿ ವಾಹನಘಾತದಿಂದ ಹತ್ತಾರು ಜನರನ್ನು ಬಲಿ ಪಡೆದ ಈತ ನಿಜವಾಗಿ ಪಾಪಿ ಈತನನ್ನು “ಕ್ರಿಮಿ ಭೋಜನ’ ನರಕಕ್ಕೆ ತಳ್ಳುವಂತೆ ಆದೇಶಿಸುತ್ತಾನೆ.
ಭೂ ಲೋಕದಲ್ಲಿ ಇಷ್ಟೊಂದು ರಸ್ತೆ ನಿಯಮಗಳು, ದಂಡ, ಶಿಕ್ಷೆ ಇದ್ದರೂ , ಜನರಿಗೆ ಇದರ ಬಗ್ಗೆ ಅರಿವು ಇದೆಯಾ, ಅಧಿಕಾರಿಗಳು ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದಾರಾ ಎಂದು ಪ್ರಶ್ನಿಸುತ್ತಾನೆ.
ಭೂ ಲೋಕದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಎಲ್ಲಡೆ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ, ಶಾಲಾ ಮಕ್ಕಳಿಗೆ ವಿವಿಧ ಪ್ರಚಾರ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ, ಉಡುಪಿ ಎಂಬ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳ ಗೋಡೆಗಳ ಮೇಲೆ ಮಾಹಿತಿಯ ಚಿತ್ರಗಳನ್ನು ಬಿಡಿಸಲಾಗಿದೆ, ಕಲಾಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದಾರೆ, ಆರಕ್ಷಕ ಇಲಾಖೆಯವರು ಕಿರುಚಿತ್ರಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ ಪ್ರಸ್ತುತ ಸಂಚಾರ ನಿಯಮಗಳ ಉಲ್ಲಂಘನೆಗೆ ಅತೀ ಹೆಚ್ಚಿನ ದಂಡ ಮತ್ತು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬಂದಿದೆ ಚಿತ್ರಗುಪ್ತ ವಿವರಿಸುತ್ತಾನೆ.
ಹಾಗಾದರೆ ಇನ್ನು ಮುಂದಾದರೂ ರಸ್ತೆ ಅಪಘಾತಗಳಿಂದ ಮೃತಪಟ್ಟು ಯಮಲೋಕ್ಕೆ ಬರುವ ಪ್ರೇತಾತ್ಮಗಳ ಸಂಖ್ಯೆ ಕಡಿಮೆಯಾಗಲಿ ಎಂದು ಯಮ ಹಾರೈಸುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.
ಕಲಾಪೀಠ ಕೋಟ ಇವರು ಪ್ರಸ್ತುತ ಪಡಿಸಿದ ಈ “ಯಮದಂಡ’ವನ್ನು ಕೆ.ನರಸಿಂಹ ತುಂಗ ನಿರ್ದೇಶಿಸಿದ್ದು, ಪರಿಕಲ್ಪನೆ ಹಾಗೂ ಪ್ರಸಂಗ ರಚನೆ ನಾಗೇಶ್ ಶಾನುಬೋಗ್ (ನಿವೃತ್ತ ಶಿಕ್ಷಣಾಧಿಕಾರಿ), ಮೊಗೆಬೆಟ್ಟು ಇವರದ್ದು. ಯಮನ ಪಾತ್ರಧಾರಿಯಾಗಿ ಉಡುಪಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಅಸ್ಫಕ್ ಅಭಿನಯಿಸಿದ್ದು, ಯಮ ರೋಷಗೊಳ್ಳುವ ಸನ್ನಿವೇಶದಲ್ಲಿ ಅವರ ಅಭಿನಯ ಮೆಚ್ಚುಗೆ ಗಳಿಸಿತು. ಚಿತ್ರಗುಪ್ತನಾಗಿ ನರಸಿಂಹ ತುಂಗ ನವಿರಾದ ಹಾಸ್ಯದ ಮೂಲಕ ಮೆರಗು ತಂದರು.