Advertisement

ಭವ್ಯಾ ಶೆಟ್ಟಿ ರಾಜೀನಾಮೆ ಪ್ರಹಸನ ಅಂತ್ಯ

03:05 PM Jan 09, 2020 | Team Udayavani |

ಯಲ್ಲಾಪುರ: ತಾಪಂ ಅಧ್ಯಕ್ಷೆ ಭವ್ಯಾ ಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸುವ ಮೂಲಕ ಬಹುದಿನದ ಪ್ರಹಸನ ಮುಗಿದಂತಾಗಿದೆ. ಈಗ ಮುಂದಿನ ಅಧ್ಯಕ್ಷರು ಯಾರಾಗಬೇಕು ? ಯಾರಾಗುತ್ತಾರೆ ? ಎಂಬ ಮಾತುಕತೆ ಶುರುವಾಗಿದೆ.

Advertisement

ನಾಲ್ಕು ವರ್ಷ ಮೂರು ತಿಂಗಳ ಹಿಂದೆ ನಡೆದ ತಾ.ಪಂ ಚುನಾವಣೆಯಲ್ಲಿ ಬಿಜೆಪಿ 6 ಹಾಗೂ ಕಾಂಗ್ರೆಸ್‌ 5 ಸ್ಥಾನ ಗೆದ್ದಿದ್ದವು. ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಭವ್ಯಾ ಶೆಟ್ಟಿ ಕಾಂಗ್ರೆಸ್‌ ನ ರಾಧಾ ಹೆಗಡೆ, ಸುಜಾತಾ ಸಿದ್ದಿ, ಮಂಗಲಾ ನಾಯ್ಕ, ಮಾಲಾ ಚಂದಾವರ, ಕವಿತಾ ತಿನೇಕರ್‌ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಇದೀಗ ಹೆಬ್ಟಾರ ಬಿಜೆಪಿಗೆ ಬಂದಿದ್ದು, ಅವರ ಬೆಂಬಲಿಗರಾಗಿ ತಾಪಂನ ಆ ಎಲ್ಲ ಕಾಂಗ್ರೆಸ್‌ ಸದಸ್ಯರು ಬಿಜೆಪಿಯತ್ತ ಮುಖ ಮಾಡಿಯಾಗಿದೆ. ಸಂಸದರಾದಿಯಾಗಿ ಬಿಜೆಪಿ ಮುಖಂಡರಿಂದ ಭವ್ಯ ಶೆಟ್ಟಿಯವರ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದ್ದು, ಬಿಜೆಪಿ ಮುಖಂಡರ ಒತ್ತಾಯಕ್ಕೆ ಮಣಿದಳಲ್ಲದೇ ಶಾಸಕರೂ ರಾಜೀನಾಮೆ ನೀಡುವಂತೆ ಸೂಚಿಸಿ ಬೇರೆಯವರಿಗೆ ಸ್ಥಾನ ಬಿಟ್ಟುಕೊಡುವಂತೆ ಕೇಳಿದ್ದರು.

ಜ.1ಕ್ಕೆ ರಾಜೀನಾಮೆ ನೀಡುವ ವಾಗ್ಧಾನ ಮಾಡಿದ್ದ ಶೆಟ್ಟಿ ಬಳಿಕ ಶಾಸಕರ ತಾಕೀತಿನಂತೆ ಜ.7 ರಂದು ಜಿಲ್ಲಾಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಶಾಸಕರ ಮಾತನ್ನು ಮನ್ನಿಸಿ ಸ್ಥಾನ ತೊರೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಮುಂದ್ಯಾರು ಅಧ್ಯಕ್ಷರು ?: ಮುಂದಿನ 9 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಚಂದ್ರಕಲಾ ಭಟ್ಟ ಹೆಸರು ಗಟ್ಟಿಯಾಗಿ ಕೇಳಿಬಂದಿದೆ. ನಾಲ್ಕು ವರ್ಷಗಳ ಹಿಂದೆಯೂ ಚಂದ್ರಕಲಾ ಭಟ್ಟರ ಹೆಸರು ಕೇಳಿಬಂದಿತ್ತು. ಆದರೆ ಭವ್ಯ ಶೆಟ್ಟಿ ಬಿಜೆಪಿಗೆ ಕೈಕೊಟ್ಟು ಕೈಬಲ ಪಡೆದು ಅಧ್ಯಕ್ಷರಾಗಿದ್ದರಿಂದ ಸ್ಥಾನ ತಪ್ಪಿತ್ತು. ಹಿಂದೊಮ್ಮೆ ಭವ್ಯ ಶೆಟ್ಟಿ ವಿರುದ್ಧ ಅವಿಶ್ವಾಸಕ್ಕೆ ಮುಂದಾಗುವ ಸಂದರ್ಭದಲ್ಲಿ ಇನ್ನೋರ್ವ ತಾ.ಪಂ ಸದಸ್ಯೆ ರಾಧಾ ಹೆಗಡೆಯವರನ್ನು ಅಧ್ಯಕ್ಷೆಯಾಗಿ ಮಾಡುವ ವಿಚಾರವಿತ್ತು.

Advertisement

ಸಮಯದೂಡುತ್ತ ಹೋದ ಕಾರಣ ಬದಲಾದ ರಾಜಕೀಯ ವ್ಯವಸ್ಥೆಯಿಂದಾಗಿ ಈಗ ಅವರೆಲ್ಲರೂ ಬೆಜೆಪಿ ಸೇರಿರುವುದರಿಂದ ರಾಧಾ ಹೆಗಡೆಯವರು ಚಂದ್ರಕಲಾ ಭಟ್ಟರೇ ಆಗಲಿ ಎಂದು ಹೇಳುತ್ತ ದಾರಿ ಸುಗಮಗೊಳಿಸುತ್ತಿದ್ದಾರೆ ಎನ್ನಲಾಗಿದೆ. ಆದರೂ ಒಂಬತ್ತು ತಿಂಗಳ ಅವಧಿಗೆ ಅಧ್ಯಕ್ಷರಾರಾಗುತ್ತಾರೆ ಎಂಬ ಕುತೂಹಲವಂತೂ ಇದೆ. ಈಗ ತಾ.ಪಂನಲ್ಲಿ ಹನ್ನೊಂದೂ ಸದಸ್ಯರು ಬಿಜೆಪಿಯಾಗಿದ್ದರೂ ಸಮನ್ವಯತೆ ಕೊರತೆಯಿದೆ ಎಂದು ಬಾಯಿಬಿಟ್ಟು ಹೇಳಿದ ಭವ್ಯಾ ಶೆಟ್ಟಿ ಹಾಗೂ ಇತರರದ್ದು ಎರಡು ಗುಂಪುಗಳಾಗಿದ್ದು ಬಹಿರಂಗ ಸತ್ಯ.

ಬೇರೆಯವರನ್ನು ಅಧ್ಯಕ್ಷರನ್ನಾಗಿಸುವ ಸಂದರ್ಭದಲ್ಲಿ ಪಕ್ಷ ಅಥವಾ ಶಾಸಕರ ಕೈ ಕೆಲಸ ಮಾಡುತ್ತದೋ ಅಥವಾ ಗುಂಪು ಕೆಲಸ ಮಾಡುತ್ತದೋ ಕಾದು ನೋಡಬೇಕು. ಏನಿದ್ದರೂ ಮುಸುಕಿನ ಗುದ್ದಾಟದಲ್ಲಿಯೇ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಮುಂದೆ ಯಾರೂ ಅಧ್ಯಕ್ಷರಾಗುತ್ತಾರೆ ಎನ್ನುವುದಕ್ಕಿಂತಲೂ ಈ ಸ್ಥಾನದಲ್ಲಿದ್ದ ಭವ್ಯಾ ಶೆಟ್ಟಿಯವರಿಂದ ರಾಜೀನಾಮೆ ಕೊಡಿಸುವುದು ಇಲ್ಲವೇ ಅವಿಶ್ವಾಸದ ಮೂಲಕ ಕೆಳಗಿಳಿಸುವುದು ಎಂಬ ಒಂದೇ ವಿಚಾರ ಪ್ರಧಾನವಾಗಿತ್ತು. ಈಗ ಈ ಸಂಗತಿಗಂತೂ
ಜಯ ದೊರೆತಿದೆ ಎಂಬುದು ಹೆಚ್ಚಿನ ಮಹಿಳಾ ಸದಸ್ಯರ ಅಂಬೋಣ.

ನರಸಿಂಹ ಸಾತೊಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next