ಕುಣಿಗಲ್: ತಾಲೂಕಿನ ಹುತ್ರಿದುರ್ಗ ಹೋಬಳಿ ಯಲಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗವೇಣಿ ಕುಮಾರ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಲೀಲಾವತಿ ಪ್ರಕಾಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಯಲಿಯೂರು ಗ್ರಾ.ಪಂ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ನಾಗವೇಣಿ ಕುಮಾರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ನಾಗವೇಣಿ ಕುಮಾರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಮಹಬಲೇಶ್ವರ ಅವರು ಘೋಷಿಸಿದರು.
ನೂತನ ಅಧ್ಯಕ್ಷೆ ನಾಗವೇಣಿ ಕುಮಾರ್ ಮಾತನಾಡಿ, ನಾನು ಅಧ್ಯಕ್ಷೆಯಾಗಲು ಸಂಸದ ಡಿ. ಕೆ. ಸುರೇಶ್, ಶಾಸಕ ಡಾ. ಹೆಚ್. ಡಿ. ರಂಗನಾಥ್ ಹಾಗೂ ಗ್ರಾ.ಪಂ.ನ ಎಲ್ಲಾ ಸದಸ್ಯರ ಸಹಕಾರ ಕಾರಣವಾಗಿದೆ. ಹಾಗಾಗಿ ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ ಯಲಿಯೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ಹಾಗೂ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುವ ಮೂಲಕ ಪಂಚಾಯತ್ ಅನ್ನು ಆದರ್ಶ ಗ್ರಾಮವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು,
ಮುಖಂಡ ಕೋಘಟ್ಟ ರಾಜಣ್ಣ ಮಾತನಾಡಿ, ಸಂಸದ ಡಿ.ಕೆ. ಸುರೇಶ್, ಶಾಸಕ ಡಾ.ಹೆಚ್. ಡಿ.ರಂಗನಾಥ್ ಅವರ ಸಹಕಾರದಿಂದಾಗಿ ಈಗಾಗಲೇ ಯಲಿಯೂರು ಗ್ರಾಮ ಪಂಚಾಯತ್ ಅತ್ಯುತ್ತಮವಾಗಿ ಅಭಿವೃದ್ದಿ ಹೊಂದುವ ಮೂಲಕ ಮಾದರಿ ಪಂಚಾಯತ್ ಆಗಿದೆ. ಇಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಪಕ್ಷಭೇದ ಮರೆತು ಶ್ರಮಿಸಿದ ಕಾರಣ ಪಂಚಾಯತ್ ಗೆ ಒಳ್ಳೆ ಹೆಸರು ಬಂದಿದೆ. ಇದನ್ನು ಹಾಲಿ ಅಧ್ಯಕ್ಷರು ಮುಂದುವರೆಸಿಕೊಂಡು ಹೋಗುವ ವಿಶ್ವಾಸವಿದೆ. ಹಾಗಾಗಿ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲು ಕಾರಣವಾಗಿದೆ ಎಂದು ಹೇಳಿದರು.
ಈ ವೇಳೆ ಗ್ರಾ.ಪಂ. ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಬಿ.ಎನ್.ನಾರಾಯಣ್, ಮಹಮದ್ ಸೆಮಿಉಲ್ಲಾ, ಲೀಲಾವತಿ, ಜಹಿರುದ್ದೀನ್, ಯಶೋಧ, ಶಶಿಕಲಾ, ದೊಡ್ಡೇಗೌಡ, ಗೋವಿಂದಯ್ಯ, ಮಂಜುನಾಥ್, ಸರೋಜ, ರೇವಣ್ಣಗೌಡ, ರಾಣಿ, ವಸಂತ್‌ಕುಮಾರ್, ಪ್ರೇಮಾ, ಶೈಲಜಾ, ತಾ.ಪಂ ಮಾಜಿ ಉಪಾಧ್ಯಕ್ಷ ವೈ.ಎನ್.ಹೊನ್ನೇಗೌಡ ಮತ್ತಿತರರು ಇದ್ದರು.