Advertisement
ಇಲ್ಲಿನ ಬಳೇಮಂಟಪ ಇಡೀ ದೇಶದಲ್ಲೇ ಒಂದೇ ಕಲ್ಲಿನಲ್ಲಿ ಕೆತ್ತಿರುವ ವಿಶಿಷ್ಟ ಕಲ್ಲಿನ ಬಳೆಗಳಿಂದ ವಿಖ್ಯಾತವಾಗಿದೆ. ಗೌರೇಶ್ವರ ಹಾಗೂ ಪಾರ್ವತಾಂಬೆ ದೇಗುಲಗಳಿಗೆ ಇದು ದ್ವಾರ ಮಂಟಪವಾಗಿದೆ. ಇದಕ್ಕೆ 450 ಕ್ಕೂ ಹೆಚ್ಚು ವರ್ಷಗಳ ಐತಿಹ್ಯವಿದೆ. ಇದರ ಹಿಂಭಾಗದಲ್ಲೇ ಪಂಚಲಿಂಗಗಳೂ ಇವೆ. ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನ ಸಮಯದಲ್ಲಿ ಇಲ್ಲೂ ಪಂಚಲಿಂಗಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
Related Articles
Advertisement
ಐದು ಶ್ರಾವಣ ಹಾಗೂ ಐದು ಕಾರ್ತಿಕ ವಾರಗಳು ಬರುವ ವರ್ಷದಲ್ಲಿ ಪಂಚಲಿಂಗ ದರ್ಶನ ನಡೆಯುತ್ತದೆ. ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನ ಸಮಯದಲ್ಲೇ ಯಳಂದೂರು ಪಟ್ಟಣದಲ್ಲಿರುವ ದೇಗುಲದಲ್ಲೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಾರಿ ಕೋವಿಡ್ ಇರುವುದರಿಂದ ಸರಳವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಸೂಚನೆನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಸ್ಯಾನಿಟೈಜರ್ ಬಳಕೆ, ಕಡ್ಡಾಯ ಮಾಸ್ಕ್ ಬಳಕೆಗೆ ಈಗಾಗಲೇ ಪ್ರಚಾರ ಮಾಡಲಾಗಿದೆ. ಈ ದೇಗುಲ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬಂದರೂ ಇದಕ್ಕಾಗಿ ವಿಶೇಷ ಅನುದಾನ ಬರುವುದಿಲ್ಲ. ಹಾಗಾಗಿ ಭಕ್ತರೇ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದು ಸರಳವಾಗಿ ಅರ್ಥಪೂರ್ಣವಾಗಿ ಉತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇಗುಲದ ಅರ್ಚಕ ಮಹೇಶ್ ಚಂದ್ರಮೌಳಿ ದೀಕ್ಷಿತ್ ಮಾಹಿತಿ ನೀಡಿದರು.