ಯಲಬುರ್ಗಾ: ರಂಗಭೂಮಿ ಕಲಾವಿದೆ ಪಟ್ಟಣದ ಶಾಂತಮ್ಮ ಪೂಜಾರ ಅವರಿಗೆ 2019-20ನೇ ಸಾಲಿನ ಜಿಲ್ಲಾ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಒಲಿದಿದೆ.
Advertisement
ಶಾಂತಮ್ಮ ಪೂಜಾರ ಅವರು 1985 ರಿಂದ ರಂಗಭೂಮಿ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಶಾಂತಮ್ಮ ಅವರು ಕಣ್ಣು ನೋವಿನಿಂದ ಬಳಲುತ್ತಿದ್ದು, ಅಂಗವಿಕಲೆಯಾಗಿದ್ದಾರೆ. ಇವರು ಪ್ರಥಮ ಬಾರಿ ಪುತ್ಥಳಿ ಎಂಬ ನಾಟಕದಲ್ಲಿ ಅಭಿನಯಿಸಿದ್ದಾರೆ.
Related Articles
Advertisement
ಇವರಿಗೆ ದಿ. ಗೋಕಾಕ ಬಸವಣೆಪ್ಪ, ಕುಕನೂರಿನ ರಹೆಮಾನವ್ವ ಕಲ್ಮನಿ ರಂಗಭೂಮಿ ಗುರುಗಳು. ಬಾದಾಮಿ, ಸಾಹಿತ್ಯ ಸಮ್ಮೇಳನ ಸೇರಿ ರಾಜ್ಯದ ಇತರೆಡೆಗಳಲ್ಲೂ ಕಲೆ ಪ್ರದರ್ಶಿಸಿ, ಸೈ ಎನಿಸಿಕೊಂಡಿದ್ದಾರೆ.
ಹಲವು ಪ್ರಶಸ್ತಿ: ಇವರಿಗೆ ಈಗಾಗಲೇ ಬಳ್ಳಾರಿ ರಂಗಭೂಮಿ ಕಲಾ ಸಂಸ್ಥೆಯವರು ರಂಗಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ಸಂಘ ಸಂಸ್ಥೆಗಳು ಇವರ ಪ್ರತಿಭೆ ಗುರುತಿಸಿ ಸನ್ಮಾನಿಸಿವೆ. ನಾಟಕಗಳಲ್ಲಿ ಶಾಂತಮ್ಮ ಪಾತ್ರ ಇತ್ತೆಂದರೆ ರಂಗಮಂದಿರದ ತುಂಬಿರುತ್ತಿತ್ತು.
ಇಂದಿನ ಮಹಿಳಾ ಕಲಾವಿದರು ಇವರ ಬಳಿ ಬಂದು ಸಲಹೆ, ಮಾರ್ಗದರ್ಶನ ಪಡೆಯುತ್ತಾರೆ. ಶಾಂತಮ್ಮಗೆ ಓರ್ವ ಪುತ್ರಿ, ಇಬ್ಬರು ಪುತ್ರರಿದ್ದಾರೆ. ಜೀವನ ನಿರ್ವಹಣೆಗೆ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ರಾಜೋತ್ಸವ ಪ್ರಶಸ್ತಿಗೆ ಕೊನೆ ದಿನ 25ರಂದು ಅರ್ಜಿ ಹಾಕಿದ್ದೆ. ಆಯ್ಕೆಯಾಗುವ ಭರವಸೆ ಇರಲಿಲ್ಲ. ಆದರೂ ಪ್ರತಿಭೆ ಗುರುತಿಸಿ ಆಯ್ಕೆ ಮಾಡಿದ್ದು ಸಂತಸ ತಂದಿದೆ ಎಂದರು.
ರಂಗಭೂಮಿಯಿಂದ ಬದುಕು ಉತ್ತಮವಾಗಿದೆ. ಜೀವನ ನಿರ್ವಹಣೆಗೆ ಯಾವುದೇ ತೊಂದರೆಯಾಗಲಿಲ್ಲ, ಆದರೇ ಇಂದಿನ ಪೀಳಿಗೆ ನಾಟಕಗಳಲ್ಲಿ ಅಭಿನಯ ಮಾಡುವವರು ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪ್ರಸ್ತುತ ದಿನಮಾನಗಳಲ್ಲಿ ರಂಗಭೂಮಿ ಕಲೆ ಉಳಿಸಿಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಹಾಗೂ ಜನಪ್ರತಿನಿಧಿ ಗಳು ಗಮನಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ನ. 1ರಂದು ಕೊಪ್ಪಳದಲ್ಲಿ ನಡೆಯುವ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.