Advertisement

ಯಲಬುರ್ಗಾ: ಇಂದಿರಾ ಕ್ಯಾಂಟೀನ್‌ಗೆ ಸಿಗಲಿದೆಯೇ ಮರುಜೀವ?

03:49 PM May 29, 2023 | Team Udayavani |

ಯಲಬುರ್ಗಾ: ಸ್ಥಳೀಯ ಪಟ್ಟಣದ ಜಿಪಂ ಎಂಜನಿಯರಿಂಗ್‌ ಉಪವಿಭಾಗ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ ಅವ್ಯವಸ್ಥೆ ಆಗರವಾಗಿದೆ. ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಮರು ಜೀವ ನೀಡಲು
ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

Advertisement

ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್‌ ಕೂಡ ಒಂದಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುವ ಸಮಯದಲ್ಲಿ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದ ಇಂದಿರಾ ಕ್ಯಾಂಟೀನ್‌ ಕುಂಟುತ್ತಾ ಸಾಗಿದ್ದವು. ಬಡವರ ಹಸಿವು ನೀಗಿಸುವ ಸಲುವಾಗಿ ಸರಕಾರ ಇಂದಿರಾ ಕ್ಯಾಂಟೀನ್‌ ಆರಂಭಿಸಿದೆ. ಪಟ್ಟಣದ ಕ್ಯಾಂಟೀನ್‌ನಲ್ಲಿ ಶುಚಿತ್ವ ಸೇರಿದಂತೆ ಅವ್ಯವಸ್ಥೆ ಎದ್ದು ಕಾಣುತ್ತಿದೆ.

ಬೇಕಾಬಿಟ್ಟಿ ಊಟ ತಯಾರಿಕೆ: ಕಡಿಮೆ ಬೆಲೆಗೆ ಊಟ ಸಿಕ್ಕರೆ ಸಾಕೆಂದು ಕ್ಯಾಂಟೀನ್‌ನತ್ತ ಧಾವಿಸುವವರ ಪೈಕಿ ಬಹುತೇಕ ಜನ ಬಡವರು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಅಲ್ಲಿನ ಉಸ್ತುವಾರಿಗಳು, ಬೇಕಾಬಿಟ್ಟಿ ಆಹಾರ ತಯಾರಿಸಿ ಹಂಚಿಕೆ ಮಾಡುತ್ತಿದ್ದಾರೆ. ಯಾವುದೇ ನಿಯಮ ಇಲ್ಲಿ ಪಾಲನೆಯಾಗುತ್ತಿಲ್ಲ. ತರಕಾರಿ ಬೆಲೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ನಿತ್ಯ ಸೊಪ್ಪಿನ ಸಾಂಬರ್‌ ಸಿದ್ಧವಾಗುತ್ತಿದ್ದು, ರಾತ್ರಿಯ ಊಟವೂ ಅಷ್ಟಕ್ಕಷ್ಟೇ ಎಂಬ ಆರೋಪ ಕೇಳಿಬಂದಿದೆ. ಶುಚಿತ್ವ ಮರಿಚೀಕೆಯಾಗಿದೆ.

ಸರಿಯಾದ ವೇತನ ಇಲ್ಲ: ಅಡುಗೆ ತಯಾರಕರಿಗೆ ಹಾಗೂ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಜತೆಗೆ, ಇತರೆ ಸೌಲಭ್ಯ ಒದಗಿಸಿಲ್ಲ ಎಂಬ ದೂರು ಕೇಳಿಬಂದಿದೆ. ಪ್ರತಿ ತಿಂಗಳು ಪಾವತಿಸುತ್ತಿಲ್ಲ. ಜತೆಗೆ, ಎರಡ್ಮೂರು ತಿಂಗಳಿಗೊಮ್ಮೆ ನೀಡಲಾಗುತ್ತದೆ ಎಂಬ ಅಸಮಾಧಾನ ಕೇಳಿಬಂದಿದೆ.

ಸರಕಾರ ನಿಗದಿಪಡಿಸಿರುವ ಮೆನುವಿನ ಪ್ರಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ನೀಡುತ್ತಿಲ್ಲ. ಇನ್ನು ಇಲ್ಲಿನ ಶೌಚಾಲಯದ ಉಪಯೋಗ ದೂರದ ಮಾತು. ಸಿಬ್ಬಂದಿಗೆ ವೇತನ ಪಾವತಿಸುತ್ತಿಲ್ಲ. ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು. ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗೆ ಆಗುತ್ತಿರುವ ಅನ್ಯಾಯಕ್ಕೆ ಪರಿಹಾರ ಒದಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಕಟ್ಟಡ ಸೋರುತ್ತಿದ್ದು, ಕಿಟಕಿ, ಬಾಗಿಲು, ಚಿಲಕಗಳು ಮುರಿದಿವೆ. ಶುದ್ಧ ಕುಡಿಯುವ ನೀರಿನ ಫಿಲ್ಟರ್‌ ವ್ಯವಸ್ಥೆ ಹಾಳಾಗಿ ಎಂಟು ತಿಂಗಳು ಕಳೆದಿದ್ದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವಾರು
ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲಎಂದು ಸಾರ್ವಜನಿಕರು ದೂರುತ್ತಾರೆ. ಅವ್ಯವಸ್ಥೆ ನಡುವೆಯೂ ನಡೆಯುತ್ತಿರುವ ಕ್ಯಾಂಟೀನ್‌ ನಲ್ಲಿ ಕಡಿಮೆ ದರದಲ್ಲಿ ಸಿಗುವ ಊಟ, ತಿಂಡಿ ತಿನ್ನಲು ಗ್ರಾಮೀಣ ಪ್ರದೇಶದ ನೂರಾರು ಕಾಲೇಜು ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್‌ ಅವಲಂಭಿಸಿದ್ದಾರೆ. ಇನ್ನಷ್ಟು ವ್ಯವಸ್ಥಿತವಾಗಿ ನಡೆದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳಾದ ರವಿ, ಮಂಜು, ಬಸವರಾಜ.

Advertisement

ಇನ್ನಷ್ಟು ಕ್ಯಾಂಟೀನ್‌ಗೆ ಬೇಡಿಕೆ
ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲು ತಾಲೂಕಿನಲ್ಲಿ ಇನ್ನೆರಡು ಹೊಸ ಕ್ಯಾಂಟೀನ್‌ಗಳ  ಆರಂಭ ಕೂಗು ತಾಲೂಕಿನಾದ್ಯಂತ ಕೇಳಿ ಬಂದಿದೆ. ಜೊತೆಗೆ ತಾಲೂಕಿನ ಬೇವೂರು, ಹಿರೇವಂಕಲಕುಂಟಾದಲ್ಲಿ ಆರಂಭ ಮಾಡುವಂತೆ ಸಾರ್ವಜನಿಕರು ನೂತನ ಶಾಸಕ ಬಸವರಾಜ ರಾಯರಡ್ಡಿ ಬಳಿ ಮನವಿ ಮಾಡಲು ಸಿದ್ಧರಾಗಿದ್ದಾರೆ.

ಎಂಟು ತಿಂಗಳಿನಿಂದ ಸರಕಾರ ಬಿಲ್‌ ಪಾವತಿ ಮಾಡಿಲ್ಲ. ಹೀಗಾಗಿ ಕ್ಯಾಂಟೀನ್‌ ನಡೆಸುವುದು ಕಷ್ಟಕರವಾಗಿದೆ. ನೂತನ ರಾಜ್ಯ
ಸರಕಾರ ಇಂದಿರಾ ಕ್ಯಾಂಟೀನ್‌ ಕುರಿತು ಯಾವುದೇ ಆದೇಶ ಬಂದಿಲ್ಲ. ಸರಕಾರ ವರದಿ ಕೇಳಿದೆ. ನೂತನ ರಾಜ್ಯ ಸರಕಾರ ಬಿಲ್‌ ಪಾವತಿ ಮಾಡಬೇಕು.
ಶಶಿಕುಮಾರ, ಇಂದಿರಾ ಕ್ಯಾಂಟೀನ್‌ ಉಸ್ತುವಾರಿ

ಇಂದಿರಾ ಕ್ಯಾಂಟೀನ್‌ನಲ್ಲಿ ಶುದ್ಧ ಕುಡಿವ ನೀರಿನ ಘಟಕ ಕೆಟ್ಟಿದ್ದರ ಬಗ್ಗೆ ಗಮನಕ್ಕೆ ಇದೆ. ಶೀಘ್ರದಲ್ಲೇ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಕ್ಯಾಂಟೀನ್‌ಗೆ ಭೇಟಿ ಕೊಟ್ಟು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇನೆ.
ಪ್ರಕಾಶ ಮಠದ, ಮುಖ್ಯಾಧಿಕಾರಿ ಪಪಂ

ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next