Advertisement

ಕಸಾಯಿಖಾನೆ ಸೇರುತ್ತಿವೆ ರಾಸು

10:49 AM Jan 03, 2019 | Team Udayavani |

ಯಲಬುರ್ಗಾ: ತಾಲೂಕಿನ ಮಟ್ಟಿಗೆ ಗೋಶಾಲೆ ಎಂಬುದು ಗಗನಕುಸುಮವಾಗಿದೆ. ಮಳೆಯಿಲ್ಲದೇ ನಲುಗಿರುವ ರೈತರು ಬರದ ತೀವ್ರತೆಯಿಂದ ಅಕ್ಷರಶಃ ತತ್ತರಿಸಿದ್ದಾರೆ. ವಾಸ್ತವ ಸ್ಥಿತಿ ಗೊತ್ತಿದ್ದರೂ ತಾಲೂಕಾಡಳಿತ ಗೋಶಾಲೆ ತೆರೆಯಲು ವಿಳಂಬ ಮಾಡುತ್ತಿದೆ. ಪಶು ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನಲ್ಲಿ 53,903 ದನಗಳು, 10,953 ಎಮ್ಮೆ, 1,12,784 ಕುರಿ, 32,551 ಮೇಕೆಗಳಿವೆ.

Advertisement

ಈ ಬಾರಿಯ ಬರಗಾಲವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಒಂದೆಡೆ ರಾಜ್ಯ ಸರಕಾರ ಹೇಳುತ್ತಿದೆ. ಆದರೆ ಅವರ ಮಾತು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕುಂಟುನೆಪ ಹೇಳಿ ಕಳುಹಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ. ಗೋಶಾಲೆ ಕುರಿತು ಪ್ರಶ್ನಿಸಿದರೇ ಬರೀ ಪ್ರಸ್ತಾವನೆ ನೆಪ ಹೇಳುತ್ತಾರೆ. ಪ್ರಸ್ತಾವನೆ ಕಳುಹಿಸಿದ್ದೇವೆ ಇನ್ನು ಸರ್ಕಾರದಿಂದ ಆದೇಶ ಬಂದಿಲ್ಲ ಎಂಬ ಉತ್ತರವನ್ನು ನೀಡುತ್ತಾರೆ ಎಂಬುದು ರೈತರ ಅಳಲು.

ತಾಲೂಕಿನ ಹೋಬಳಿಗೊಂದು ಗೋಶಾಲೆಯ ಆರಂಭಿಸಲು ಪಶು ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತಾಲೂಕಿನಲ್ಲಿ ಈ ಬಾರಿ ಭೀಕರ ಬರಗಾಲ ತಲೆದೋರಿದ್ದರೂ ಗೋಶಾಲೆಗಳನ್ನು ಪ್ರಾರಂಭಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದರಿಂದ ಕಂಗಾಲಾಗಿರುವ ರೈತರು ರಾಸುಗಳಿಗೆ ಮೇವು ದೊರೆಯದ ಕಾರಣ ಕಟುಕರಿಗೆ ಮಾರಲು ಮುಂದಾಗಿದ್ದಾರೆ.

ತಾಲೂಕಿನ ಹಿರೇವಂಕಲಕುಂಟಾ, ಗಾಣಧಾಳ, ಕುದರಿಮೋತಿ ಬೇವೂರು, ಚಿಕ್ಕಮ್ಯಾಗೇರಿ, ಕುಕನೂರು, ತಳಕಲ್‌ ನಾನಾ ಹೋಬಳಿಗಳಲ್ಲಿ ಈಗ ಕೆಲವು ದಿನಗಳಿಂದ ಜಾನುವಾರುಗಳು ಕಸಾಯಿಖಾನೆಗೆ ಹೋಗುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ತಾಲೂಕಿನ ರೈತರಿಗೆ ಜಾನುವಾರು ಉಳಿಸಿಕೊಳ್ಳಲು ಒಣ ಅಥವಾ ಹಸಿರು ಮೇವಿನ ಕೊರತೆ ಕಾಡುತ್ತಿದೆ. ಇದಕ್ಕೆ ದುಪ್ಪಟ್ಟು ಹಣ ನೀಡಿ ಒಣ ಮತ್ತು ಹಸಿರು ಮೇವನ್ನು ಖರೀದಿ ಮಾಡಿ ತಮ್ಮ ಜಾನುವಾರಗಳನ್ನು ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಜಾನುವಾರುಗಳ ಮೇವಿಗಾಗಿ ಊರೂರು ಸುತ್ತುತ್ತಿದ್ದಾರೆ. ಆದರೂ ಮೇವು ಸಿಗುತ್ತಿಲ್ಲ.

Advertisement

ಮೇವು ಖರೀದಿಗೆ ಹಣವಿಲ್ಲ: ಸಾಲ ಕೇಳಿದರೂ ಯಾರೂ ಸಾಲ ಕೊಡುತ್ತಿಲ್ಲ. ವರ್ತಕರು ಬರಗಾಲದ ನೆಪವನ್ನೇ ಇಟ್ಕೊಂಡು ಸಾಲ ಇಲ್ಲ ಎಂದು ಹೇಳುತ್ತಿದ್ದಾರೆ. ಜಾನುವಾರುಗಳನ್ನು ಸಾಕಲು ಆಗದೆ ಕಡಿಮೆ ವೆಚ್ಚಕ್ಕೆ ಮಾರಾಟ ಮಾಡುತ್ತಿದ್ದು ಜಾನುವಾರುಗಳು ಕಟುಕರ ಪಾಲಾಗುತ್ತಿವೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಜಾನುವಾರುಗಳಿಗೆ ಉಳಿಗಾಲ ಇರುವುದಿಲ್ಲ ಎನ್ನುವುದು ರೈತರ ಅಭಿಪ್ರಾಯ.

ಮೇವು ಬ್ಯಾಂಕ್‌ ತೆರೆದಿಲ್ಲ: ಶಾಸಕ ಹಾಲಪ್ಪ ಆಚಾರ್‌ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಬರಗಾಲ ಸಭೆಯಲ್ಲಿ ತಾಲೂಕಿನ 4 ಹೋಬಳಿ ವ್ಯಾಪ್ತಿಯಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್‌ ತೆರೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತ ಮತ್ತು ಪಶುಪಾಲನಾ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು. ಇಲ್ಲಿಯವರೆಗೂ ಎಲ್ಲೂ ಮೇವು ಬ್ಯಾಂಕ್‌ ತೆರೆದಿಲ್ಲ. ಒಟ್ಟಾರೆಯಾಗಿ ತಾಲೂಕಿನಲ್ಲಿ ಭೀಕರ ಬರದ ಪರಸ್ಥಿತಿ ಉದ್ಬವಿಸಿದ್ದು, ತಾಲೂಕಾಡಳಿತ ಮಾತ್ರ ನಿದ್ರಾವಸ್ಥೆಯಲ್ಲಿದೆ. ಶೀಘ್ರದಲ್ಲಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಲು ಮುಂದಾಗಬೇಕಿದೆ.

ತಾಲೂಕಾಡಳಿತ ಸರ್ಮಪಕ ಬರ ಎದುರಿಸುವಲ್ಲಿ ವಿಫಲವಾಗುತ್ತಿದೆ. ಗೋಶಾಲೆ ಆರಂಭಿಸಲು ಮೀನಮೇಷ ಎಣಿಸುತ್ತಿದೆ. ನಿತ್ಯ ತಾಲೂಕಿನ ನೂರಾರು ಜಾನುವಾರು ಕಟುಕರ ಪಾಲಾಗುತ್ತಿವೆ. ಶೀಘ್ರದಲ್ಲಿ ಗೋಶಾಲೆ ಆರಂಭಿಸಬೇಕು ಮತ್ತು ರೈತರ ನೆರವಿಗೆ ಧಾವಿಸಬೇಕು.
. ಶ್ರೀಕಾಂತಗೌಡ ಮಾಲಿಪಾಟೀಲ,
  ರೈತ ಮುಖಂಡ

ಗೋಶಾಲೆ ಪ್ರಾರಂಭಿಸಲು ರೈತರಿಂದ ಬೇಡಿಕೆ ಬಂದಿದ್ದನ್ನು ಗಮನಿಸಿದ್ದೇನೆ. ತಾಲೂಕಿನಲ್ಲಿ 4 ಗೋಶಾಲೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆದೇಶ ಬಂದ ನಂತರ ಆರಂಭಕ್ಕೆ ಮುಂದಾಗುತ್ತೇವೆ. 
. ರಮೇಶ ಅಳವಂಡಿಕರ್‌, ತಹಶೀಲ್ದಾರ್‌

ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next