Advertisement

ಬೆಳ್ತಂಗಡಿಯ ಯಾಕೂಬ್, ಕಲಬುರಗಿಯ ಸುರೇಖಾ ಸೇರಿದಂತೆ ಒಟ್ಟು 47 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ

09:46 PM Aug 21, 2020 | Hari Prasad |

ಬೆಂಗಳೂರು: ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್, ಕಲಬುರಗಿಯ ಅಫ್ಷಲ್ ಪುರದ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್ ಸೇರಿದಂತೆ ಒಟ್ಟು 47 ಶಿಕ್ಷಕರಿಗೆ 2020ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನು ಘೋಷಿಸಲಾಗಿದೆ.

Advertisement

ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯವು ಈ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದು ಅದರಲ್ಲಿ ಕರ್ನಾಟಕ ರಾಜ್ಯದ ಇಬ್ಬರು ಶಿಕ್ಷಕರು ಪ್ರಶಸ್ತಿ ಪುರಸ್ಕೃತರಾಗಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ.

ಕೇಂದ್ರೀಯ ವಿದ್ಯಾಲಯ ಸಂಘಟನ್, ಬೆಂಗಳೂರು ಇಲ್ಲಿ ಶಿಕ್ಷಕರಾಗಿರುವ ಚೆಮ್ಮಲರ್ ಷಣ್ಮುಗನ್ ಅವರೂ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ.

ಈ ಸಚಿವಾಲಯವು ನೇಮಕ ಮಾಡಿದ್ದ ಸ್ವತಂತ್ರ ತೀರ್ಪುಗಾರರ ಸಮಿತಿಯು ಈ ಪಟ್ಟಿಯನ್ನು ಅಂತಿಮಗೊಳಿಸಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 7 ಸಾಂಸ್ಥಿಕ ಆಯ್ಕೆ ಸಮಿತಿ ಅಂತಿಮಗೊಳಿಸಿದ್ದ 153 ಶಿಕ್ಷಕರ ಅರ್ಜಿಯನ್ನು ಪರಿಶೀಲಿಸಿ ಒಟ್ಟು 45 ಶಿಕ್ಷಕರನ್ನು ಈ ಬಾರಿಯ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಈ ಬಾರಿಯ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿಯಲ್ಲಿ ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳ ತಲಾ 3 ಶಿಕ್ಷಕರಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಲ, ಜಾರ್ಖಂಡ್ ಮತ್ತು ತಮಿಳುನಾಡು ರಾಜ್ಯಗಳ ಹಾಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಿಂದ ತಲಾ ಇಬ್ಬರು ಶಿಕ್ಷಕರಿಗೆ ಈ ಗೌರವ ಲಭಿಸಿದೆ.

Advertisement

ಇನ್ನುಳಿದಂತೆ ಹರ್ಯಾಣ, ಹಿಮಾಚಲ ಪ್ರದೇಶ, ಪಂಜಾಬ್, ದೆಹಲಿ, ಉತ್ತರಾಖಂಡ, ರಾಜಸ್ಥಾನ, ಗೋವಾ, ಮಹಾರಾಷ್ಟ್ರ, ಪುದುಶ್ಯೇರಿ, ಲಢಾಕ್ (ಕೇಂದ್ರಾಡಳಿತ ಪ್ರದೇಶ), ಛತ್ತೀಸ್ ಗಢ, ಮೇಘಾಲಯ, ತ್ರಿಪುರ, ಅಸ್ಸಾಂ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ತಲಾ ಒಬ್ಬರು ಶಿಕ್ಷಕರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದನ್ನು ಹೊರತುಪಡಿಸಿ, ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಷನ್, ದೆಹಲಿ ; ಅಟೊಮಿಕ್ ಎನರ್ಜಿ ಎಜುಕೇಷನ್ ಸೊಸೈಟಿ, ಮುಂಬಯಿ ; ನವೋದಯ ವಿದ್ಯಾಲಯ ಸಮಿತಿ, ಅಲಪ್ಪುಝ, ಕೇರಳ ; ಏಕಲವ್ಯ ಮಾಡೆಲ್ ರೆಸಿಡೆನ್ಷಿಯಲ್ ಸ್ಕೂಲ್ಸ್, ಉತ್ತರಾಖಂಡ ; ಕೇಂದ್ರೀಯ ವಿದ್ಯಾಲಯ ಸಂಘಟನ್, ಬೆಂಗಳೂರು ; ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ಸ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್, ಜಾರ್ಖಂಡ್ ಇವುಗಳ ತಲಾ ಒಬ್ಬರು ಶಿಕ್ಷಕರೂ ರಾಷ್ಟ್ರಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಬಾರಿ ಶಿಕ್ಷಕರ ರಾಷ್ಟ್ರಪ್ರಶಸ್ತಿ ಪಟ್ಟಿಯಲ್ಲಿ ಭಿನ್ನ ಸಾಮರ್ಥ್ಯ ವಿಭಾಗದಡಿಯಲ್ಲಿ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಇವರಲ್ಲಿ ಒಬ್ಬರು ಗುಜರಾತ್ ಹಾಗೂ ಇನ್ನೊಬ್ಬರು ಬಿಹಾರ ರಾಜ್ಯಕ್ಕೆ ಸೇರಿದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next