Advertisement

ಯಕ್ಷಾಂಗಣ ಪಂಚಮ ವರ್ಷದ ನುಡಿಹಬ್ಬ ಜೋಶಿ ವಾಗರ್ಥ ಸರಣಿ

03:50 PM Nov 24, 2017 | |

ನಮ್ಮ ಕನ್ನಡಪರ ಕಾಳಜಿ ಕೇವಲ ನವೆಂಬರ್‌ ಒಂದರಂದಷ್ಟೇ ಕಂಡು ಬಂದರೆ ಸಾಲದು. ಕನ್ನಡ ನಮ್ಮ ಅನ್ನದ ಭಾಷೆ ಎಂಬ ಭಾವನೆಯಿಂದ ದೈನಂದಿನ ವ್ಯವಹಾರದಲ್ಲಿ ಅದರ ಸೌಂದರ್ಯ ವನ್ನು ಕಾಪಿಡುವ ಕೆಲಸ ಆಗಬೇಕಿದೆ. ಶುದ್ಧ ಕನ್ನಡ ಬೇಕಾದರೆ ನಾವು ಯಕ್ಷಗಾನ ರಂಗಸ್ಥಳದ ಕಡೆಗೇ ಬರಬೇಕು. ಅದರಲ್ಲೂ ತಾಳಮದ್ದಳೆ ಪ್ರಕಾರದಲ್ಲಿ ಒಂದಿನಿತೂ ಅನ್ಯ ಭಾಷೆಯ ಪದ ಪ್ರಯೋಗವಾಗದೆ ಕಾವ್ಯಾತ್ಮಕ ಕನ್ನಡ ಬಳಕೆ ಯಾಗುತ್ತಿರುವುದು ಗಮನಿಸಬೇಕಾದ ಅಂಶ. ಇದನ್ನು ಮನಗಾಣಿಸುವ ನಿಟ್ಟಿನಲ್ಲಿ ಯಕ್ಷಾಂಗಣ ಮಂಗಳೂರು ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ನಡೆಸಿಕೊಂಡು ಬರುತ್ತಿದೆ.

Advertisement

ಯಕ್ಷಗಾನದ ವಾಚಿಕ ವೈಭವಕ್ಕೆ ಸಾಕ್ಷಿಯಾದ ತಾಳಮದ್ದಳೆ ಸಾಹಿತ್ಯದ ಯಾವ ಪ್ರಕಾರಕ್ಕೂ ಕಡಿಮೆ ಯಿಲ್ಲದಂತೆ ವಿಭಿನ್ನ ಪ್ರಸಂಗಗಳ ಹೂರ‌ಣದೊಳಗೆ ಹಲವು ಆಯಾಮಗಳಲ್ಲಿ ತೆರೆದುಕೊಳ್ಳುವ ಬಗೆಯನ್ನು ಕನ್ನಡದ ನುಡಿಹಬ್ಬ ಎಂದರೆ ಅತಿಶಯವಲ್ಲ. ಕಳೆದ ವರ್ಷ ಯಕ್ಷಾಂಗಣ ಸಂಸ್ಥೆ ಕುಂಬಳೆ ಸುಂದರ ರಾಯರ ಪಾತ್ರಕೇಂದ್ರಿತ “ಸುಂದರ‌ ಅರ್ಥಸರಣಿ’ಯನ್ನು ಆಯೋಜಿಸಿತ್ತು. ಈ ಬಾರಿ ಹಿರಿಯ ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಶಿಯವರ ನಿರಂತರ ಪಾಲ್ಗೊಳ್ಳುವಿಕೆಯಲ್ಲಿ ಜೋಶಿ ವಾಗರ್ಥ ಸರಣಿಯನ್ನು ನಡೆಸುತ್ತಿದೆ.

ಯಕ್ಷಗಾನ ಕಲಾ ಪ್ರಕಾರವನ್ನೊಂದು ಚಿಂತನಾ ಕ್ಷೇತ್ರವಾಗಿ ಬೆಳೆಸಿದ ಬೆರಳೆಣಿಕೆಯ ವಿದ್ವಾಂಸರಲ್ಲಿ ಡಾ| ಎಂ. ಪ್ರಭಾಕರ ಜೋಶಿ ಪ್ರಮುಖರು. ಅವರು ಲೇಖಕ, ವಿಮರ್ಶಕ, ಅರ್ಥಧಾರಿ, ಸಂಘಟಕ, ವಾಗ್ಮಿ, ವಿಚಾರವಾದಿ, ಸಾಹಿತಿ, ಸಂಪನ್ಮೂಲ ವ್ಯಕ್ತಿ; ಅದಕ್ಕಿಂತ ಮಿಗಿಲಾಗಿ ವರ್ತಮಾನದ ಶ್ರೇಷ್ಠ ಚಿಂತಕ. ಎಳವೆಯಿಂದಲೂ ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟಗಳಲ್ಲಿ ಪಾತ್ರ ವಹಿಸುತ್ತಿದ್ದ ಜೋಶಿಯವರು ಶೇಣಿ, ಸಾಮಗ, ಪೆರ್ಲ, ಕಾಂತ ರೈ, ತೆಕ್ಕಟ್ಟೆಯವರಂಥ ಹಿರಿಯ ಅರ್ಥಧಾರಿಗಳು ಮೆರೆಯುತ್ತಿದ್ದ ಕಾಲದಲ್ಲೇ ಕಿರಿಯವನಾಗಿ ಪ್ರವೇಶ ಪಡೆದು ಸಮರ್ಥ ಅರ್ಥಧಾರಿಯಾಗಿ ಬೆಳೆದವರು. ಅವರ ಅರ್ಥಗಾರಿಕೆಗೆ ವ್ಯಾಪಕ ಓದಿನ ಹಿನ್ನೆಲೆಯಿದೆ. ಯಕ್ಷಗಾನ ಪ್ರಸಂಗ‌- ಪ್ರಸಂಗ‌ಕರ್ತನ ಆಶಯ, ಪಾತ್ರ ಸೃಷ್ಟಿ, ಸಂವಹನ, ತರ್ಕ, ಭಾವಾಭಿವ್ಯಕ್ತಿ, ಅರ್ಥವಿಸ್ತಾರಗಳಿಂದ ಎದುರಾಳಿಯನ್ನು ತನ್ನ ಜತೆಗೆ ಕರೆದೊಯ್ಯುತ್ತಾ ಮಾತಿನ ಮಹಾ ರೂಪಕವನ್ನು ಅನಾವರಣಗೊಳಿಸುವ ಅಸಾಧಾರಣ ಪ್ರತಿಭೆ ಅವರದು. 

ನವೆಂಬರ್‌ 19ರಿಂದ ಮಂಗಳೂರು ಪುರಭವನದಲ್ಲಿ ನಡೆಯುತ್ತಿರುವ ಯಕ್ಷಾಂಗಣದ ಪಂಚಮ ವರ್ಷದ ನುಡಿಹಬ್ಬದಲ್ಲಿ ಜೋಶಿ ವಾಗರ್ಥ ಸರಣಿ ನಡೆಯುತ್ತಿದೆ. ತಾಳಮದ್ದಳೆ ಸಪ್ತಾಹದ ಎಲ್ಲ ದಿನಗಳಲ್ಲಿ ಡಾ| ಜೋಶಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಅವರ ಮತ್ತೂಂದು ವಿಮಶಾìಸಂಕಲನ “ಕೊರಳಾರ’ ವಾಗರ್ಥ ವೇದಿಕೆಯಲ್ಲಿ ಬಿಡುಗಡೆಗೊಂಡಿದೆ. ಮೈಸೂರಿನ ಗ.ನಾ. ಭಟ್‌ ಸಂಪಾದಿಸಿದ “ಜೋಶಿ ವಾಗರ್ಥ ಗೌರವ’ ಮತ್ತು ಪುತ್ತೂರಿನ ನಾ. ಕಾರಂತ ಪೆರಾಜೆ ಸಂಕಲಿಸಿದ “ಜಾಗರದ ಜೋಶಿ’ ಕೃತಿಗಳೂ ಲೋಕಾರ್ಪಣೆಯಾಗಿವೆ. ನವೆಂಬರ್‌ 25ರಂದು ಸಪ್ತಾಹದ ಸಮಾರೋಪ ವೇದಿಕೆಯಲ್ಲಿ ಡಾ| ಜೋಶಿಯವರಿಗೆ “ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ನಡೆಯುತ್ತದೆ.

ಭಾಸ್ಕರ ರೈ ಕುಕ್ಕುವಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next