Advertisement

ತೆಲುಗರ ನಾಡಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಾಷ್ಟಕಂ

07:57 PM Oct 31, 2019 | mahesh |

ಶಶಿಪ್ರಭಾ ಪರಿಣಯ,ಗದಾಯುದ್ಧ- ರಕ್ತ ರಾತ್ರಿ, ಶ್ರೀ ಕೃಷ್ಣ ಲೀಲಾಮೃತ, ಭಸ್ಮಾಸುರ ಮೋಹಿನಿ,ನಾಗೋದ್ಧರಣ, ಭಕ್ತ ಪ್ರಹ್ಲಾದ,ಬೇಡರ ಕಣ್ಣಪ್ಪ ಮತ್ತು ಏಕಾದಶಿ ದೇವಿ ಮಹಾತ್ಮೆಗಳು ಪ್ರಸಂಗಗಳನ್ನು ಕನ್ನಡ ಪ್ರೇಕ್ಷಕರು ಮಾತ್ರಲ್ಲದೆ ತೆಲುಗು ಪ್ರೇಕ್ಷಕರು ಬೆರಗುಗಣ್ಣುಗಳಿಂದ ಆಸ್ವಾದಿಸಿದರು.

Advertisement

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾದಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ಹೈದರಾಬಾದ್‌ನ ವಿವಿಧೆಡೆಗಳಲ್ಲಿ ಎಂಟು ಪೌರಾಣಿಕ ಆಖ್ಯಾನಗಳು ತೆಂಕುತಿಟ್ಟಿನ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಪ್ರಸ್ತುತಗೊಂಡಿತು. ಶಶಿಪ್ರಭಾ ಪರಿಣಯ,ಗದಾಯುದ್ಧ-ರಕ್ತ ರಾತ್ರಿ, ಶ್ರೀ ಕೃಷ್ಣ ಲೀಲಾಮೃತ,ಭಸ್ಮಾಸುರ ಮೋಹಿನಿ,ನಾಗೋದ್ಧರಣ,ಭಕ್ತ ಪ್ರಹ್ಲಾದ,ಬೇಡರ ಕಣ್ಣಪ್ಪ ಮತ್ತು ಏಕಾದಶಿ ದೇವಿ ಮಹಾತೆ¾ಗಳು ಪ್ರದರ್ಶಿತಗೊಂಡವು.ಕನ್ನಡ ಪ್ರೇಕ್ಷಕರು ಮಾತ್ರಲ್ಲದೆ ಯಕ್ಷಗಾನದ ವೇಷ ಭೂಷಣಗಳನ್ನು,ನಾಟ್ಯ,ಚೆಂಡೆ ಮದ್ದಳೆಗಳ ಝೇಂಕಾರವನ್ನು,ಕಥಾಭಾಗಗಳನ್ನು ತೆಲುಗು ಪ್ರೇಕ್ಷಕರು ಬೆರಗುಗಣ್ಣುಗಳಿಂದ ಆಸ್ವಾದಿಸಿದರು.

ರಾಮಕೃಷ್ಣ ಮಯ್ಯರು ತಮ್ಮ ಸಿರಿಕಂಠದಿಂದ ಮತ್ತು ಇನ್ನೋರ್ವ ಭಾಗವತರಾದ ದಿನೇಶ್‌ ಭಟ್‌ ಯಲ್ಲಾಪುರ ಇವರು ಸುಮಧುರ ಕಂಠದಿಂದ ಮಂತ್ರ ಮುಗ್ಧಗೊಳಿಸುವಲ್ಲಿ ಸಫ‌ಲರಾದರು. ಲವಕುಮಾರ ಐಲ ಮದ್ದಳೆಯಲ್ಲಿ ಮತ್ತು ಚೆಂಡೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ನುಡಿತಗಳ ಛಾಪನ್ನು ಮೂಡಿಸಿದರು.ಚಕ್ರತಾಳದಲ್ಲಿ ನಿಶ್ಚಿತ್‌ ಸಹಕರಿಸಿದರು.

ರಾಧಾಕೃಷ್ಣ ನಾವುಡರು ಗದಾಯುದ್ಧದ ಕೌರವನಾಗಿ, ಕೃಷ್ಣ ಲೀಲೆಯ ಕಂಸನಾಗಿ,ಭಸ್ಮಾಸುರ ಮೋಹಿನಿಯ ಭಸ್ಮಾಸುರನಾಗಿ,ಭಕ್ತ ಪ್ರಹ್ಲಾದದ ಹಿರಣ್ಯಕಶ್ಯಪುವಾಗಿ, ನಾಗೋದ್ಧರಣದ ಕಾಳಿಂಗನಾಗಿ,ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿಯಾಗಿ ಗಾಂಭೀರ್ಯ ಹಾಗೂ ತೂಕದ ಮಾತುಗಳಿಂದ ,ಸೂಕ್ತ ರಂಗ ನಡೆಗಳಿಂದ ರಂಗದರಾಜ ಎಂಬ ನೆಗಳೆ¤ಯನ್ನು ಸಾರ್ಥಕ ಪಡಿಸಿಕೊಂಡರು.

ಸ್ತ್ರೀ ವೇಷಧಾರಿಗಳಾದ ರಾಜೇಶ್‌ ನಿಟ್ಟೆ ಮತ್ತು ರಕ್ಷಿತ್‌ ದೇಲಂಪಾಡಿಯವರು ತಮ್ಮ ನಾಟ್ಯದಿಂದ ಸಭಿಕರ ಹೃನ್ಮನ ಸೆಳೆದರು. ಶಶಿಪ್ರಭಾ ಪರಿಣಯದಲ್ಲಿ ಭ್ರಮರಕುಂತಳೆ -ಶಶಿಪ್ರಭೆ ಹಾಗೂ ನಾಗೋದ್ಧರಣದ ಮತ್ಸé ರಾಣಿಯರ ಜೋಡಿಯಾಗಿ ಅದ್ಭುತ ಅಭಿನಯ ನೀಡಿದರು.ನಿಟ್ಟೆಯವರ ಭಸ್ಮಾಸುರ ಮೋಹಿನಿಯ ಮೋಹಿನಿ ಮತ್ತು ಬೇಡರ ಕಣ್ಣಪ್ಪದ ರಾಣಿಯ ಪಾತ್ರವನ್ನು ಕಂಡ ಸಭಿಕರು ಪುರುಷರೇ ಸ್ತ್ರೀ ಪಾತ್ರವನ್ನು ನಿರ್ವಹಿಸುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.

Advertisement

ಅತಿರೇಕಗಳಿಲ್ಲದ ,ಶುದ್ಧವಾದ, ಹಿತ ಮಿತವಾದ ಹಾಸ್ಯ ಮಹೇಶ್‌ ಮಣಿಯಾಣಿಯವರ¨ªಾಗಿದ್ದು , ರಂಗನಡೆಗೆ ಕೊರತೆ ಬಾರದಂತೆ ಬೇಹಿನ ಚರ,ಅಗಸ,ಕಾಶೀಮಾಣಿ,ದೂತ ,ಅಜ್ಜಿ ಮುಂತಾದ ಪಾತ್ರಗಳಲ್ಲಿ ಹಾಸ್ಯದ ಮೂಲಕ ನೆರೆದ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿದರು. ಅರುವತ್ತರ ಹರೆಯದಲ್ಲಿಯೂ ಚೆಂಡಿನಂತೆ ಪುಟಿಯುವ ಗುಂಡಿಮಜಲು ಗೋಪಾಲ ಭಟ್ಟರ ಅಶ್ವತ್ಥಾಮನನ್ನು ಎಷ್ಟು ಬಣ್ಣಿಸಿದರೂ ಸಾಲದು. ಎಲ್ಲ ಪ್ರಸಂಗಗಳಲ್ಲಿ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡ ಪುಷ್ಪರಾಜ ಜೋಗಿಯವರು ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.ಶಂಭಯ್ಯ ಕಂಜರ್ಪಣೆಯವರ ಇದಿರು ವೇಷಗಳು ಅವರೊಬ್ಬ ಅನುಭವಿ ಕಲಾವಿದ ಎನ್ನುವುದನ್ನು ತೋರಿಸಿಕೊಟ್ಟಿತು.ಶಶಿಕಿರಣ ಕಾವು ಅವರ ಗರುಡ ವೇಷವು ಬಣ್ಣದ ವೇಷಗಳಲ್ಲಿ ಅವರ ಅನುಭವ ,ಹಿಡಿತಗಳನ್ನು ತೋರ್ಪಡಿಸಿತು. ಕೃಷ್ಣನ ಪಾತ್ರ ಹಾಗೂ ಪುಂಡು ವೇಷಗಳಲ್ಲಿ ಪ್ರಕಾಶ್‌ ನಾಯಕ್‌ ನೀರ್ಚಾಲ್‌ ಮಿಂಚಿದರು. ರಕ್ತರಾತ್ರಿ ಪ್ರಸಂಗದಲ್ಲಿ ಪೆರುವೋಡಿ ಸುಬ್ರಹ್ಮಣ್ಯ ಭಟ್ಟರ ಶಿವಶಕ್ತಿ ಅತ್ಯದ್ಭುತವಾಗಿತ್ತು.ಬಲ ಪಾತ್ರಗಳಲ್ಲಿ ಕಾಣಿಸಿಕೊಂಡ ಕಲಾವಿದರು ಉತ್ತಮವಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದರು.ಕೊನೆಯ ದಿನದ ಪ್ರದರ್ಶನ ಏಕಾದಶಿ ದೇವಿ ಮಹಾತ್ಮೆ. ಸುಮಾರು 400 ಕ್ಕೂ ಮಿಕ್ಕಿದ ತೆಲುಗು ಪ್ರೇಕ್ಷಕರು ಭಕ್ತಿ ಭಾವದಿಂದ ಪ್ರಸಂಗವನ್ನು ವೀಕ್ಷಿಸಿದರು.ಒಟ್ಟಂದದಲ್ಲಿ ತಂಡದ ಪ್ರಸ್ತುತಿ ಉತ್ತಮ ವಾಗಿದ್ದು,ಬಹುಕಾಲ ಮನದಲ್ಲಿ ಅಚ್ಚೊಳಿಯುವಂತಾಗಿದೆ.

ರಮಾದೇವಿ,ಹೈದರಾಬಾದ್‌

Advertisement

Udayavani is now on Telegram. Click here to join our channel and stay updated with the latest news.

Next