ಭಟ್ಕಳ: ಯಕ್ಷಗಾನದ ಪಾರಂಪರಿಕ ಪ್ರಾಮುಖ್ಯತೆ ಉಳಿಸಿ ಬೆಳೆಸುವುದರೊಂದಿಗೆ ಬದಲಾವಣೆಯಿಂದಾಗಿ ಮೂಲ ರೂಪವನ್ನೇ ಕಳೆದುಕೊಳ್ಳುತ್ತಿರುವುದನ್ನು ತಡೆಯಬೇಕಾಗಿದೆ ಎಂದು ಯಕ್ಷಗಾನ ಕಲಾವಿದ ಹಾಗೂ ಯಕ್ಷ ಗುರು ಸುಜಯೀಂದ್ರ ಹಂದೆ ಹೇಳಿದರು.
ಅವರು ಮುರ್ಡೇಶ್ವರದ ಯಕ್ಷಧಾಮದಲ್ಲಿ ಯಕ್ಷರಕ್ಷೆ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ನಡೆದ ದಿ| ಯಶೋಧಾ ಭಟ್ಟ ಸಂಸ್ಮರಣಾ ಕಾರ್ಯಕ್ರಮ ಹಾಗೂ ಯಕ್ಷಕಲಾ ಚಿಂತನೆ, ಯಕ್ಷಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ಕಲಾವಿದರು ಯಕ್ಷಗಾನದ ಹಿಂದಿನ ರೂಪ ಮತ್ತು ಪರಂಪರೆ ಕಾಪಾಡಿಕೊಂಡು ಹೋಗ ಬೇಕಾಗಿದೆ. ಬದಲಾವಣೆ ಸನ್ನಿವೇಷದಲ್ಲಿ ಹಿಂದಿನ ಪರಂಪರೆ ತನ್ನ ರೂಪನ್ನೇ ಕಳೆದುಕೊಳ್ಳುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿದರು. ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮದಾಸ ಶೇಟ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಅತಿಥಿ ಕುಂದಾಪುರದ ಪತ್ರಕರ್ತ ಭಾಸ್ಕರ ಶೆಟ್ಟಿ ಮಾತನಾಡಿ, ಯಕ್ಷಗಾನಕ್ಕೆ ತನ್ನದೇ ಆದ ಪರಂಪರೆ ಇದ್ದು, ತೆರೆಯ ಮರೆಯಲ್ಲಿ ಸಾಕಷ್ಟು ಕಲಾವಿದರು, ಕಲಾ ಸಾಧಕರು ಇದ್ದಾರೆ. ಯಕ್ಷಗಾನ ಉಳಿಸಿ ಬೆಳೆಸಲು ಕೊಡುಗೆ ನೀಡಿದಅವರನ್ನೆಲ್ಲಾ ಗುರುತಿಸುವ ಕೆಲಸ ಆಗಬೇಕಾಗಿದೆ ಎಂದರು.
ಮುಖ್ಯ ಅತಿಥಿ ದಂತವೈದ್ಯ ಡಾ| ರಾಘವ ಭಟ್ ಮಾತನಾಡಿ, ಯಕ್ಷರಕ್ಷೆ ಎನ್ನುವುದು ನನ್ನ ತಂದೆ ಡಾ| ಐ.ಆರ್. ಭಟ್ ರ ಕನಸಾಗಿತ್ತು. ಇಂದು ನೂರಾರು ಯಕ್ಷಗಾನ, ಸನ್ಮಾನ, ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದು ಕಲಾವಿದರಿಗೆ ಆಶ್ರಯಧಾತರಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಇದುನಮ್ಮೆಲ್ಲರಿಗೂ ಹೆಮ್ಮೆ ವಿಚಾರವಾಗಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು.
ಯಕ್ಷರಕ್ಷೆ ಅಧ್ಯಕ್ಷ ಡಾ| ಐ.ಆರ್. ಭಟ್ ಉಪಸ್ಥಿತರಿದ್ದರು. ಹಿರಿಯ ಯಕ್ಷಗಾನ ಕಲಾವಿದ ನಾಗಪ್ಪ ಗೌಡ ಗುಣವಂತೆ ಅವರಿಗೆ ಯಕ್ಷಶ್ರೀ ಪ್ರಶಸ್ತಿ, ಕಲಾವಿದ ಸುಬ್ರಾಯ ಭಟ್ ಗುಂಡಿಬೈಲ್ ಅವರಿಗೆ ಕೊಪ್ಪದಮಕ್ಕಿ ಈರಪ್ಪ ಭಾಗವತ ಸಂಸ್ಮರಣಾ ಪ್ರಶಸ್ತಿ, ಪಶುವೈದ್ಯ ಡಾ| ಗೌರೀಶ ಪಡುಕೋಣೆ ಶಿರಾಣಿ ಅವರಿಗೆ ದಿ| ವಸಂತಿ ರಾವ್ ಸಂಸ್ಮರಣಾ ಪ್ರಶಸ್ತಿ ನೀಡಲಾಯಿತು. ಲಯನ್ಸ್ ಕ್ಲಬ್ ಸದಸ್ಯರು, ಸಮಾಜ ಸೇವಕ ನಾಗರಾಜ ಭಟ್, ಗಜಾನನ ಶೆಟ್ಟಿ, ಮಂಜುನಾಥ ದೇವಡಿಗರನ್ನೂ ಸನ್ಮಾನಿಸಲಾಯಿತು. ಯಕ್ಷರಕ್ಕೆ ಕಾರ್ಯದರ್ಶಿ, ಉಪನ್ಯಾಸಕ ಗಣಪತಿ ಕಾಯ್ಕಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಕೃಷ್ಣ ಹೆಗಡೆ ನಿರೂಪಿಸಿದರು. ನಂತರ ಅತಿಥಿ ಕಲಾವಿದರಿಂದ ಇಂದ್ರ ನಂದನ ವಾನರೇಂದ್ರ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.