Advertisement

ಯಕ್ಷಮಂಜುಳಾದ ಯಕ್ಷತ್ರಿವಳಿ ದಶಮ ಸಂಭ್ರಮ

10:30 AM Jan 31, 2020 | mahesh |

ಯಕ್ಷರಂಗದಲ್ಲಿ ಇದೊಂದು ಅಪೂರ್ವ ಕಾರ್ಯಕ್ರಮ. ಒಂದು ಡ‌ಜನ್‌ ಮಹಿಳೆಯರೇ ಸೇರಿ ತಮ್ಮ ಸಂಸ್ಥೆಯ ದಶಮಾನೋತ್ಸವವನ್ನು ಮಹಿಳಾ ಕಾರ್ಯಕ್ರಮವನ್ನಾಗಿಸಿ ಗಂಡಸರಿಗೆ ಸರಿಮಿಗಿಲೆಂಬಂತೆ ನಡೆಸಿಕೊಟ್ಟರು. ಎಲ್ಲಾ ಕಾರ್ಯಕ್ರಮಕ್ಕೂ ಕಿರೀಟಪ್ರಾಯವಾಗಿ ಮೂಡಿ ಬಂದಿದ್ದು ಮಹಿಳೆಯರೇ ಹಿಮ್ಮೇಳವಾದಕರಾಗಿ ಭಾಗವಹಿಸಿ ಮಹಿಳಾ ರಾಗರಂಜಿನಿಯನ್ನು ಪ್ರಸ್ತುತಪಡಿಸಿದ್ದು.

Advertisement

ಮೊದಲ ದಿನದ ಆಖ್ಯಾನ : ಯಕ್ಷ ಮಂಜುಳಾದ ಸದಸ್ಯೆಯರು ಪ್ರದರ್ಶಿಸಿದ ಗದಾಯುದ್ಧ ಪ್ರಶಂಸೆಗೆ ಪಾತ್ರವಾಯಿತು. ಕೌರವ, ಭೀಮ, ಅಶ್ವತ್ಥಾಮ, ಸಂಜಯ, ಬೇಹಿನಚರ, ಧರ್ಮರಾಯ, ಕೃಷ್ಣ, ಅರ್ಜುನ, ಬಲರಾಮ ಪಾತ್ರಗಳನ್ನು ಮಹಿಳೆಯರು ಆಯ್ದಿದ್ದರು. ಪೈಪೋಟಿಗೆ ಬಿದ್ದಂತೆ ಎಲ್ಲರೂ ಅವರವರ ಪಾತ್ರವನ್ನು ನಿರ್ವಹಿಸಿದರು. ಒಟ್ಟಂದದಲ್ಲಿ ಸುಂದರವಾಗಿ ಮೂಡಿ ಬಂತು. ಭವ್ಯಶ್ರೀ ಪೂರ್ವಾರ್ಧದಲ್ಲಿ ಹಾಡಿ ಕತೆಯನ್ನು ನಡೆಸಿಕೊಟ್ಟರು. ಉತ್ತರಾರ್ಧದಲ್ಲಿ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟರು ಭಾಗವತರಾಗಿ ಮಿಂಚಿದರು. ನೋಡಿರಿ ಧರ್ಮಜ ಫ‌ಲುಗುಣಾದಿಗಳು… ಕಪಟ ನಾಟಕರಂಗ… ಹಾಡುಗಳಿಗೆ ಯಕ್ಷಕಂಪನ್ನು ನೀಡಿ ರಂಜಿಸಿದರು. ಮುರಾರಿ ಕಡಂಬಳಿತ್ತಾಯ, ಶಿತಿಕಂಠ ಭಟ್‌ ಉಜಿರೆ, ಲೇಖಕರು ಹಿಮ್ಮೇಳಕ್ಕೆ ಪೂರಕರಾದರು. ಕೌರವನ ಪಾತ್ರ ಉತ್ತಮ ಸ್ವರಭಾರದಿಂದ ಮೆರೆಯಿತು. ಭೀಮನ ಆರ್ಭಟ ಹೆದರಿಸಿತು. ಪೂರ್ಣಿಮಾ ಪ್ರಭಾಕರ ರಾವ್‌ ಪೇಜಾವರ, ಪೂರ್ಣಿಮಾ ಪ್ರಶಾಂತ್‌ ಶಾಸ್ತ್ರಿ, ಸುಧಾ ರಾವ್‌, ರೂಪಾ ರಾಧಾಕೃಷ್ಣ, ಅನುಪಮಾ ಅಡಿಗ, ವನಿತಾ ರಾಮಚಂದ್ರ ಭಟ್‌, ಶೈಲಜಾ ಶ್ರೀಕಾಂತ್‌ ರಾವ್‌, ಅರುಣಾ ಸೋಮಶೇಖರ್‌ರವರು ಪಾತ್ರಧಾರಿಗಳಾದರು.

ಕೋಟಿ-ಚೆನ್ನಯೆ : ಸರಯೂ ಮಹಿಳಾ ವೃಂದದವರು ತುಳು ತಾಳಮದ್ದಳೆ ಕೋಟಿ ಚೆನ್ನಯೆಯನ್ನು ನಡೆಸಿಕೊಟ್ಟರು. ಆಯ್ದ ಪಾತ್ರಗಳು ಪೆರುಮಳ ಬಲ್ಲಾಳೆ, ಕೋಟಿ-ಚೆನ್ನಯರು, ನಾಗಬ್ರಹ್ಮ ಸ್ವಾಮಿ, ಪಯ್ಯ ಬೈದ, ಕಿನ್ನಿದಾರು, ಚಂದುಗಿಡಿ ಮತ್ತು ಮಂಜು ಪೆರ್ಗಡೆ. ವಿಜಯಲಕ್ಷ್ಮೀ ಎಲ್‌., ಪದ್ಮಾವತಿ ಶಿವಪ್ರಸಾದರು ಕೋಟಿಚೆನ್ನಯೆ ಆದರು. ಸುರೇಖಾ ಶೆಟ್ಟಿ ಪೆರುಮಳ ಬಲ್ಲಾಳರಾದರು. ಶಾಂತಾ ಆರ್‌. ಎರ್ಮಾಳ್‌ ಕಿನ್ನಿದಾರು ಆದರು. ಕು| ಪೂರ್ವಿ ಚಂದುಗಿಡಿಯಾದರೆ, ಋತ್ವಿಕಾ ಪಯ್ಯ ಬೈದನಾದರು. ಕು| ತೃಶಾ ಕೋಟ್ಯಾನ್‌ ನಾಗಬ್ರಹ್ಮನಾದರೆ, ಕು| ಯಶಸ್ವಿ ಮಂಜು ಪೆರ್ಗಡೆಯಾದರು.

ಮುಂದಿನದ್ದು ಆಯ್ದ ಮಹಿಳಾ ತಂಡಗಳ ಖ್ಯಾತ ಕಲಾವಿದೆಯರ ಮಿಲನದಿಂದ ದಕ್ಷಯಜ್ಞ. ಪುತ್ತೂರಿನ ಪದ್ಮಾ ಆಚಾರ್‌ರ ಈಶ್ವರನಿಗೆ ಮಂಗಳೂರಿನ ಉರ್ವಾದ ಸುಮಂಗಲಾ ರತ್ನಾಕರ್‌ ಸತಿ ದೇವಿಯಾದರು. ಯಕ್ಷಮಂಜುಳಾದ ಸುಮನಾ ಘಾಟೆ ದೇವೆಂದ್ರನಾದರೆ ಅನುಪಮಾ ಅಡಿಗ ಬ್ರಾಹ್ಮಣನಾದರು. ನಿವೇದಿತಾ ನಂದಕಿಶೋರ್‌ ಶೆಟ್ಟಿ ವೀರಭದ್ರನಾದರು. ಮೂಡಬಿದಿರೆಯ ದೀಪ್ತಿ ಬಾಲಕೃಷ್ಣ ಭಟ್‌ ದಕ್ಷಪ್ರಜಾಪತಿಯಾದರು. ಯಾವುದೇ ಪೂರ್ವತಯಾರಿಯಿಲ್ಲದೆ ಪ್ರತ್ಯುತ್ಪನ್ನಮತಿಯಿಂದ ವೃತ್ತಿ ಕಲಾವಿದರಂತೆಯೇ ಪಾಂಡಿತ್ಯವನ್ನು ಒರೆಗೆ ಹಚ್ಚಿದರು. ಕು| ಅಮೃತಾ ಅಡಿಗ, ಕೌಶಿಕ್‌ ರಾವ್‌ ಪುತ್ತಿಗೆ, ಕೌಶಲ್‌ ರಾವ್‌ ಪುತ್ತಿಗೆ, ಸಂಜೀವ ಕಜೆಪದವು ಹಿಮ್ಮೇಳದಲ್ಲಿ ಸಹಕರಿಸಿದರು. ದಕ್ಷಯಜ್ಞಕ್ಕೆ ಕು| ಅಮೃತಾರು ಕೃಪೆದೋರು ಕಲ್ಯಾಣಿ ಪ್ರಿಯರಾದರು.

ಯಕ್ಷಮಂಜುಳಾದ ಹೈಲೈಟ್‌ ಕಾರ್ಯಕ್ರಮ : ಮಹಿಳಾ ರಾಗರಂಜಿನಿ – ಹಿಮ್ಮೇಳದ ಎಲ್ಲಾ ವಿಭಾಗಗಳಲ್ಲೂ ಮಹಿಳೆಯರೇ ರಂಜಿಸಿದ್ದು ಇತಿಹಾಸ. ಪೂರ್ಣಪ್ರಮಾಣದ ಭಾಗವತಿಕೆ, ಚೆಂಡೆ, ಮದ್ದಳೆ, ಚಕ್ರತಾಳ ಎಲ್ಲವೂ ಹೆಂಗಸರೇ. ಲೀಲಾವತಿ ಬೈಪಾಡಿತ್ತಾಯ, ಭವ್ಯಶ್ರೀ ಹರೀಶ್‌, ಕಾವ್ಯಶ್ರೀ ಗುರುಪ್ರಸಾದ್‌, ಶಾಲಿನಿ ಜೆ. ಹೆಬ್ಟಾರ್‌ ಹಾಗೂ ಕು| ಅಮೃತಾ ಅಡಿಗರು ಪಂಚ ಭಾಗವತರಾಗಿ ಕೇಳುಗರ ಹೃನ್ಮನ ತಣಿಸಿದರು. ಕು| ಅಪೂರ್ವಾ ಸುರತ್ಕಲ್‌ ಚೆಂಡೆವಾದಕಿಯಾಗಿ ಮಿಂಚಿದರು. ನಿಧಾನ, ಶೃಂಗಾರ, ಏರು ಪದ್ಯಗಳಲ್ಲೂ ನುಡಿತ-ಬಡಿತಗಳು ಕೇಳುಗರಲ್ಲಿ ತುಡಿತವನ್ನು ಹೆಚ್ಚಿಸಿದರು. ಕು| ರಕ್ಷಿತಾ ಆರ್‌. ಭಟ್‌, ಕು| ಅನನ್ಯಾ ಅಡಿಗ ಪಾಣಾಜೆ ಮೃದಂಗದಲ್ಲಿ ಪಳಗಿದ ನಡೆೆ‌ಯನ್ನು ನುಡಿಸಿ ಪ್ರಶಂಸೆಗೆ ಪಾತ್ರರಾದರು. ಕು| ರಂಜಿತಾ ಎಲ್ಲೂರು ಚಕ್ರತಾಳಕ್ಕೆ ಸರಿಯಾದರು. ಸ್ತುತಿ ಪದ್ಯ, ಪೀಠಿಕೆ ಪದ್ಯ, ಹಾಸ್ಯ, ಏರುಪದ್ಯ, ಶೃಂಗಾರ, ಕರುಣಾ, ಭಕ್ತಿರಸಗಳ ಹಾಡುಗಳ ಜೊತೆಗೆ ಸಂಕೀರ್ತನಾ ಹಾಡುಗಳನ್ನು ಮಹಿಳೆಯರು ಹಾಡಿ ರಾಗರಂಜಿನಿಯನ್ನು ವಿನೂತನವಾಗಿಸಿದರು.

Advertisement

ನರಕಾಸುರ ಮೋಕ್ಷ : ಅಂತ್ಯಕ್ಕೆ ಪ್ರದರ್ಶಿಸಲ್ಪಟ್ಟ ಆಖ್ಯಾನವಿದು. ನರಕಾಸುರನು ಮಾತಾಪಿತರನ್ನು ಗುರುತಿಸಿದ ನಂತರ ಬಹಳ ಭಾವುಕನಾಗಿ ಮಾತಾಡಿ ಕಲಾರಸಿಕರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡನು. ತನ್ನೆಲ್ಲಾ ಅಂತಃಶಕ್ತಿಯನ್ನು ಹಾಕಿ ನರಕಾಸುರನ ಪಾತ್ರವನ್ನು ಗೆಲ್ಲಿಸಿಕೊಟ್ಟ ಪೂರ್ಣಿಮಾ ಶಾಸ್ತ್ರಿ ಈ ಪ್ರಸಂಗದ ಯಶಸ್ಸಿಗೆ ಕಾರಣ. ಕೃಷ್ಣ-ಭಾಮೆಯರ ಸಂವಾದ ಹಿತಮಿತ ಹಾಸ್ಯದಿಂದ ಕೂಡಿತ್ತು. ನಾರದನ ದುಬೋìಧನೆ, ದೇವೇಂದ್ರನ ಪ್ರತಿಧಾಳಿ, ಕೃಷ್ಣನಲ್ಲಿ ದೂರು ಎಲ್ಲವೂ ಚೆನ್ನಾಗಿ ಮೂಡಿಬಂತು. ದೊರೆತ ಅವಕಾಶದಲ್ಲಿ ಮುರಾಸುರನ ಪಾತ್ರವೂ ಬೆಳಗಿತು.

ವರ್ಕಾಡಿ ರವಿ ಅಲೆವೂರಾಯ

Advertisement

Udayavani is now on Telegram. Click here to join our channel and stay updated with the latest news.

Next