Advertisement
ಮತ್ಯಾಡಿ ನರಸಿಂಹ ಶೆಟ್ಟಿಕುಂದಾಪುರದ ಸಮೀಪದ ಮತ್ಯಾಡಿ ಗ್ರಾಮದಲ್ಲಿ 1927ರಲ್ಲಿ ಜನಿಸಿದ ನರಸಿಂಹ ಶೆಟ್ಟಿ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ ಭಾಗವತಿಕೆಯ ಸೂಕ್ಷ್ಮಗಳನ್ನು ಕರಗತ ಮಾಡಿಕೊಂಡು ಮೊದಲಿಗೆ ಮಲ್ಪೆ ಸಮೀಪದ ಕೊಡವೂರು ಮೇಳದಲ್ಲಿ ರಂಗವೇರಿದರು. ಬಳಿಕ ಪೆರ್ಡೂರು ಮೇಳ ಸೇರಿದ ಇವರು ಅಲ್ಲಿ ಭಾಗವತರಾಗಿದ್ದ ಗುಂಡ್ಮಿ ರಾಮಚಂದ್ರ ನಾವಡರಿಂದ ಕುಂಜಾಲು ಶೈಲಿಯ ಭಾಗವತಿಕೆ ಅಭ್ಯಾಸ ಮಾಡಿದರು. ಬಳಿಕ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಆನಂತರ ಪ್ರಸಿದ್ಧ ಮಂದಾರ್ತಿ ಮೇಳದಲ್ಲಿ ನಾಲ್ಕು ದಶಕಗಳಷ್ಟು ಕಾಲ ಸೇವೆ ಸಲ್ಲಿಸಿದರು. ಬಡಗುತಿಟ್ಟಿನ ಅವಿಸ್ಮರಣೀಯ ಕಲಾವಿದರಾದ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ,ನಾರಾಯಣ ಗಾಣಿಗ ಕೊಕ್ಕರ್ಣೆ ನರಸಿಂಹ ಕಾಮತ್,ಕೊರ್ಗು ಹಾಸ್ಯಗಾರ ಉಡುಪಿ ಬಸವ ವೀರಭದ್ರ ನಾಯಕ್ ಹೀಗೆ ಹಲವು ಕಲಾವಿದರನ್ನು ರಂಗದಲ್ಲಿ ಕುಣಿಸಿದ್ದಾರೆ. ಸುಮಾರು 50 ಪೌರಾಣಿಕ ಪ್ರಸಂಗಗಳನ್ನು ಕಂಠ ಪಾಠ ಬಲ್ಲವರು.
ಸ್ತ್ರೀ ಪಾತ್ರದ ಮೂಲಕ ಉತ್ತಮವಾದ ಮಾತು, ನಾಟ್ಯಶೈಲಿಯೊಂದಿಗೆ ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಪಾತಾಳ ವೆಂಕಟರಮಣ ಭಟ್ ಅವರು ತೆಂಕುತಿಟ್ಟು ಯಕ್ಷಗಾನರಂಗದ ಪ್ರಸಿದ್ಧ ಕಲಾವಿದರಾಗಿ ದ್ದಾರೆ.ದ್ರೌಪದಿ, ಊರ್ವಶಿ, ಮೇನಕೆ, ದಾûಾಯಿಣಿ, ಶ್ರೀದೇವಿ ಮೊದಲಾದ ವೇಷಗಳಲ್ಲಿ ಮಿಂಚಿದ್ದಾರೆ. ಹೆಜ್ಜೆಗಾರಿಕೆ, ಪುರುಷವೇಷಕ್ಕೆ ಸಂವಾದಿಯಾಗಿ ಸ್ತ್ರೀವೇಷ, ವಸ್ತ್ರವಿನ್ಯಾಸ, ಬಣ್ಣಗಾರಿಕೆ ಮುಂತಾದ ವಿಷಯದಲ್ಲಿ ಆಳ ಚಿಂತನೆ ನಡೆಸಿದವರು.ಬೇಲೂರು ಶಿಲಾಬಾಲಿಕೆಯ ಅಲಂಕಾರ ವಿನ್ಯಾಸದಿಂದ ಪ್ರಭಾವಿತರಾದ ಪಾತಾಳರು ಸ್ತ್ರೀಪಾತ್ರಕ್ಕೆ ತನ್ನದೇ ಆದ ಮಾದರಿಯನ್ನು ನೀಡಿ ಯಶಸ್ವಿಯಾಗಿದ್ದಾರೆ. ಎಳವೆಯಲ್ಲಿಯೇ ಕಾಂಚನ ಯಕ್ಷಗಾನ ನಾಟಕ ಕಂಪೆನಿಯಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಬೆಳೆದು ಮುಂದೆ, ಹಲವು ಮೇಳಗಳಲ್ಲಿ ಕಲಾಸೇವೆ ಮಾಡಿದ್ದಾರೆ. ಪೆರುವೋಡಿ ನಾರಾಯಣ ಭಟ್
ಯಕ್ಷಗಾನದ ಪರಂಪರೆಯ ಹಾಸ್ಯದ ಸುಸಂಸ್ಕೃತ ಚೌಕಟ್ಟನ್ನು ತಮ್ಮ ಸೃಜನಶೀಲತೆಯ ಮೂಲಕ ವಿಸ್ತರಿಸಿದ ಪೆರುವೋಡಿ ನಾರಾಯಣ ಭಟ್ಟರು ಹುಟ್ಟಿದ್ದು 1927ರಲ್ಲಿ. ಪೆರುವೋಡಿ ಮತ್ತು ಪದ್ಯಾಣ ಮನೆತನದ ಹಿನ್ನೆಲೆಯಿದ್ದ ಪೆರುವೋಡಿಯವರು ದಿ.ಕುರಿಯ ವಿಠಲ ಶಾಸ್ತ್ರಿಗಳಿಂದ ನಾಟ್ಯ ತರಬೇತಿ ಪಡೆದವರು. 17 ನೇ ವಯಸ್ಸಿನಲ್ಲೇ ಧರ್ಮಸ್ಥಳ ಮೇಳದ ಮೂಲಕ ರಂಗ ಪ್ರವೇಶ ಮಾಡಿದ ಇವರು 57 ವರ್ಷಗಳ ನಿರಂತರ ಕಲಾಸೇವೆಯನ್ನು ಮಾಡಿದ್ದಾರೆ.ಸುರತ್ಕಲ್, ಕೂಡ್ಲು, ಅಮೃತೇಶ್ವರಿ, ಅಳದಂಗಡಿ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ಪ್ರಧಾನ ಹಾಸ್ಯಗಾರರಾಗಿ ಪ್ರಸಿದ್ಧರಾದವರು. ಕೃಷ್ಣಲೀಲೆಯ ವಿಜಯ, ಪಾರಿಜಾತದ ಮಕರಂದ, ನಳದಮಯಂತಿಯ ಬಾಹುಕ, ಪಾಪಣ್ಣ ವಿಜಯದ ಪಾಪಣ್ಣ ಮೊದಲಾದ ಪಾತ್ರಗಳು ಅವಿಸ್ಮರಣೀಯವಾದವುಗಳು.
Related Articles
ಡಾ| ಯನ್. ನಾರಾಯಣ ಶೆಟ್ಟಿ ಶಿಮಂತೂರು ಇವರು ಯಕ್ಷಗಾನ ಛಂದಸ್ಸಿನ ವಿದ್ವಾಂಸರು. ಇವರ “ಯಕ್ಷಗಾನ ಛಂದೋಂಬುಧಿ’ ಸಂಶೋಧನ ಕೃತಿಯು ಯಕ್ಷಗಾನ ಪದ್ಯದಲ್ಲಡಗಿರುವ ಲಕ್ಷಣ ವಿಶೇಷವನ್ನು ಶಾಸ್ತ್ರಧಾರ ಸಮ್ಮತವಾಗಿ ವಿಶ್ಲೇಷಿಸುತ್ತದೆ. ಸಂಸ್ಕೃತ – ಕನ್ನಡ ಛಂದಸ್ಸಿನ ಆಳವಾದ ತಿಳುವಳಿಕೆಯೊಂದಿಗೆ ಜಾನಪದ ಛಂದೋಲಯಗಳ ಸೂಕ್ಷ್ಮವನ್ನು ಅರಿತು ಯಕ್ಷಗಾನ ಛಂದಸ್ಸಿನ ಸ್ವರೂಪವನ್ನೂ, ಲಕ್ಷ್ಯ ಸಹಿತ ವಿವರಣೆಗಳನ್ನು ನೀಡುವ ಈ ಕೃತಿ ಯಕ್ಷಗಾನದ ಛಂದಸ್ಸಿನ ಕುರಿತ ಆಚಾರ್ಯ ಕೃತಿ.
ಧನಂಜಯ ಕುಂಬ್ಳೆ
Advertisement