Advertisement
ಶ್ರೀ ಕೃಷ್ಣ ಮತ್ತು ಗೋಪಿಕಾ ವನಿತೆ ರಾಧೆಯ ಪ್ರೇಮಕಾವ್ಯವನ್ನು ತೆರೆದಿಟ್ಟ ಯಕ್ಷ-ಗಾನ- ನಾಟ್ಯ- ವೈಭವ ಕಥಾ ಪ್ರಸಂಗವೊಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಇತ್ತೀಚೆಗೆ ನಡೆಯಿತು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಭಕ್ತ ವೃಂದದವರು ಮಠದಲ್ಲಿ ಕೃಷ್ಣಂ ವಂದೇ ಜಗದ್ಗುರುಂ ಯಕ್ಷ-ಗಾನ- ನಾಟ್ಯ-ವೈಭವ ಪ್ರದರ್ಶಿಸಿದರು.
Related Articles
Advertisement
ನಾಯಕ ನಾಯಕಿಯರ ತತ್ವ ಸ್ವಾರಸ್ಯವನ್ನು ವರ್ಣಿಸುತ್ತ ಹೋದಂತೆ ಇನ್ನು ಇವರಿಬ್ಬರ ನಡುವಣ ಅನುಸಂಧಾನದ ತಂತುವೆನಿಸಿದ ಸಖೀಯು ಜೀವ- ಬ್ರಹ್ಮಗಳ ಸಾಮರಸ್ಯವನ್ನು ಕಲ್ಪಿಸುವ ವೇದಾಂತರ್ಯವಾಗಿ ರೂಪುಗೊಂಡಿತು. ಶ್ರೀ ಕೃಷ್ಣನು ಪ್ರೀತಿ ಪ್ರಣಯಗಳ ಸುಳಿಗೆ ಸಿಲುಕಿದಾಗ ಸಾಮಾನ್ಯ ಪುರುಷನಾಗುತ್ತಾನೆ. ಹೀಗಾಗಿಯೆ ಈ ಪ್ರಸಂಗದಲ್ಲೂ ಕೂಡ ರಾಧೆಯ ಮುಂದೆ ದಿಟವಾದ ಮಹಾಪುರುಷ ಎಂದೆನಿಸಿಕೊಳ್ಳುವ ಕೃಷ್ಣ ಪಾತ್ರಧಾರಿ ಕು| ದಿಶಾ ಶೆಟ್ಟಿ ಅವರ ನಟನೆ-ಹಾವ-ಭಾವ ಅತ್ಯದ್ಭುತವಾಗಿ ಕಂಡುಬಂತು. ರಾಧೆಯೂ ಅಸೂಯೆ -ಸಂದೇಹಗಳಿಗೆ ತುತ್ತಾಗುತ್ತಾಳೆ. ರಾಧೆ ಪಾತ್ರದಾರಿ ಅದನ್ನು ನಿರ್ವಹಿಸಿದ್ದು ಸುಂದರ ಅವತರಣಿಕೆಯಲ್ಲಿ ಅರ್ಥಪೂರ್ಣವಾಗಿತ್ತು.
ಹೀಗೆ ಅಲೌಕಿಕವಾದ ಶ್ರಂಗಾರ ರಸವು ನಮಗೆ ಈ ಪ್ರಸಂಗದಲ್ಲಿ ಸಿದ್ಧಿಸುತ್ತದೆ. ಇಂತಹ ರಾಧೆಯ ಪಾತ್ರವನ್ನು ಅಚ್ಚುಕಟ್ಟು ಮತ್ತು ಮನಮೋಹಕ ರೀತಿಯಲ್ಲಿ ನಿರ್ವಹಿಸಿದ ವೃತ್ತಿಯಲ್ಲಿ ವೈದ್ಯೆ ಆಗಿರುವ ಡಾ| ವರ್ಷಾ ಶೆಟ್ಟಿ ಅವರ ಅಭಿನಯ ಕಲಾಸಕ್ತರಿಗೆ ಮುದ ನೀಡಿತು. ಕೃಷ್ಣ ರಾಧೆಯರಿಬ್ಬರ ನಾಟ್ಯ-ಅಭಿನಯ- ಮನಮೋಹಕ ನೃತ್ಯಂಜಲಿಗಳು ಕಲಾರಸಿಕರಿಗೆ ಸವಿಯನ್ನು ಉಣಿಸಿತು.
ಅನೇಕ ವ್ಯಾಖ್ಯಾನಗಳಿಗೆ ಪ್ರೀತಿಯ ಸವಿಯನ್ನು ಅನುಭವಿಸಿದ ಜೀವಿಯ ಸಂವೇದನೆಯ ಈ ಯಕ್ಷ-ಗಾನ- ನಾಟ್ಯ-ವೈಭವವು ಮತ್ತೆ ಮತ್ತೆ ನಮ್ಮೊಳಗೆ ಅನುರಣಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಯಕ್ಷಕಾವ್ಯದ ಅಂತರಂಗ ತೆರೆಸಿದ ಈ ಪ್ರಸಂಗದಲ್ಲಿ ಭಾಗವತರು ಹಳೆಯ ರಾಗಗಳನ್ನು ಮಾತ್ರ ಬಳಸದೆ ಆಧುನಿಕ ಪದ್ಯಕ್ಕೆ ಯಕ್ಷಗಾನದಲ್ಲಿ ಇತ್ತೀಚೆಗೆ ಬಳಕೆಯಾಗುವ ಕೆಲ ರಾಗಗಳನ್ನು ಮೂವರು ಭಾಗವತರು ಬಳಸಿಕೊಂಡು ಪ್ರೇಕ್ಷಕರ ಮನ ತಟ್ಟುವಲ್ಲಿ ಯಶಸ್ವಿಯಾದರು.
ಬಾಲಕೃಷ್ಣ ಭೀಮಗುಳಿ