Advertisement

“ಚಲನಶೀಲತೆ, ಸೃಜನಶೀಲತೆಯಿಂದ ಯಕ್ಷಗಾನ ಪರಂಪರೆ ಜೀವಂತ’

12:27 AM May 13, 2019 | Team Udayavani |

ಉಡುಪಿ: ಚಲನಶೀಲತೆ ಮತ್ತು ಸೃಜನಶೀಲತೆಯಿಂದ ಯಕ್ಷಗಾನ ಪರಂಪರೆ ಜೀವಂತವಾಗಿದೆ. ಇದೇ ಕಾರಣಕ್ಕೆ ವಿಶ್ವದ ರಂಗಭೂಮಿಯಲ್ಲಿ ಯಕ್ಷಗಾನ ಕಲೆ ಪ್ರಸಿದ್ದಿ ಪಡೆದಿದೆ ಎಂದು ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಡಾ| ಕೆ.ಚಿನ್ನಪ್ಪ ಗೌಡ ಹೇಳಿದರು.

Advertisement

ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ತಲ್ಲೂರು ಕನಕಾ ಅಣ್ಣಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನ ಕ್ಷೇತ್ರದಲ್ಲಿ ಅಕಾಡೆಮಿಕ್‌ ಮತ್ತು ಶೈಕ್ಷಣಿಕೇತರ ಎಂಬ ಎರಡು ರೀತಿಯ ಬದುಕಿದೆ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ತಮ್ಮ 40 ವರ್ಷಗಳ ಅವಧಿಯಲ್ಲಿ ಮಾಡಿದ ಕೆಲಸ ಅಕಾಡೆಮಿಕ್‌ ನೆಲೆಯಲ್ಲಿದೆ. ಮತ್ತೂಂದು ಕೆಲಸವನ್ನು ಕಲಾರಂಗ ಮಾಡುತ್ತಿದೆ ಎಂದರು.

ಯಕ್ಷಗಾನ ಪರಂಪರೆ, ಸಂರಕ್ಷಣೆ, ಪ್ರಯೋಗಗಳ ಬಗ್ಗೆ ಪ್ರಶ್ನೆಗಳಿವೆ. ಇದಕ್ಕೆ ಬೊಟ್ಟಿಕೆರೆಯವರ ಕೆಲಸದಿಂದ ನಾವು ಉತ್ತರ ಕಂಡುಕೊಳ್ಳಬಹುದು. ಶೈಕ್ಷಣಿಕವಾಗಿ ಅವರ ಕೆಲಸಗಳನ್ನು ಪರಿಶೀಲಿಸಬೇಕು ಎಂದರು.

ಮುಂದಿನ ತಲೆಮಾರಿಗೆ ಯಕ್ಷಗಾನ
ಮುಂದಿನ ತಲೆಮಾರಿಗೆ ಯಕ್ಷಗಾನ ತಲುಪುವ ನಿಟ್ಟಿನಲ್ಲಿ ಕಲಾವಿದರಿಗೆ ಯಕ್ಷಗಾನ ಕಲೆಗೆ ಸಂಬಂಧಿಸಿ ಇರುವ ಸಮಸ್ಯೆ, ಯೋಜನೆ, ಜಾಹೀರಾತು ಸಹಿತ ವಾಣಿಜ್ಯ ಮುಖಗಳ ಅನೇಕ ಪ್ರಶ್ನೆಗಳು ಎರಡನೇ ಬದುಕಿಗೆ ಸಂಬಂಧಿಸಿವೆ ಎಂದರು.

Advertisement

ತೂಕದ ಕಲೆ
ಯಕ್ಷಗಾನ ತೂಕದ ಕಲೆಯಾಗಿದೆ. ಸಾಹಿತ್ಯ ಮತ್ತು ಬಣ್ಣಕ್ಕೆ ತೂಕ ಇದೆ. ಯಕ್ಷಗಾನದ ಔಚಿತ್ಯ, ಲಯದ ಪ್ರತೀಕವಾಗಿ ಬೊಟ್ಟಿಕೆರೆಯವರು ಕಾಣುತ್ತಾರೆ. ಪರಂಪರೆಯ ಗಾಂಭೀರ್ಯ, ಆಧುನಿಕತೆಯ ಉತ್ಸಾಹ ಪೂಂಜಾರಲ್ಲಿದೆ ಎಂದರು.

ಸಮ್ಮಾನ
ಭಾಗವತ, ಬಹುಮುಖ ಪ್ರತಿಭೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ದಂಪತಿಯನ್ನು ತಲ್ಲೂರು ಕನಕಾ ಅಣ್ಣಯ್ಯ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಲಾರಂಗವು ಯಕ್ಷಗಾನಕ್ಕಾಗಿಯೇ ಯಕ್ಷಗಾನ ಆಸಕ್ತರಿಂದ ರಚಿಸಲ್ಪಟ್ಟ ಸಂಸ್ಥೆ. ಕಲಾವಿದರ ಸಮಸ್ಯೆಗಳನ್ನು ನಿವಾರಿಸಿ ಕಲೆ, ಕಲಾವಿದರಿಗೆ ಲೋಪವಾಗದಂತೆ ಯಕ್ಷಗಾನ ಸಾಗುವಂತೆ ಮಾರ್ಗದರ್ಶನ ಮಾಡುವ, ಕಲಾವಿದರಿಗೆ ಪ್ರೋತ್ಸಾಹ ನೀಡುವ, ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹ ನೀಡುವಂತಹ ಘನ ಉದ್ದೇಶವಿರುವ ಸಂಸ್ಥೆ ಎಂದರು.

ಕಲಾವಿದರ ಸಾಮರ್ಥ್ಯ ತಿಳಿಯುವ ಗುಣ
ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್‌ ಅಭಿನಂದನ ಭಾಷಣಗೈದು, ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಕಲಾವಿದರ ಸಾಮರ್ಥ್ಯವನ್ನು ತಿಳಿಯುವ ಗುಣವಿದೆ. ರಂಗದಲ್ಲೇ ಸ್ವಯಂಸ್ಫೂರ್ತಿಯಿಂದ ಆಶುಕವಿತ್ವ ರಚಿಸುವ ಗುಣ ಹೊಂದಿದ್ದು, ಸಾಹಿತ್ಯದ ಮೂಲಕ ವಿಶೇಷ ಮೆರುಗು ಹೊಂದಿದ್ದಾರೆ. ಇವರ ಸಾಹಿತ್ಯ, ಪ್ರಸಂಗ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ. ಬೊಟ್ಟಿಕೆರೆಯವರು ರಂಗಧರ್ಮವನ್ನು ಅರಿತಿರುವ ಭಾಗವತರಾಗಿದ್ದಾರೆ. ರಂಗದೊಳಗೆ ತನ್ನನ್ನು ತಾನು ಲೀನವಾಗಿಸಿಕೊಳ್ಳುತ್ತಾರೆ. ಮರುದಿನ ಅದರ ಮರುವ್ಯಾಖ್ಯಾನವನ್ನೂ ಮಾಡುತ್ತಿದ್ದರು. ಈ ಮೂಲಕ ಅವರು ಕಲಾವಿದರ ಸಾಮರ್ಥ್ಯವನ್ನು ತಿಳಿಯುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಡಾ| ತಲ್ಲೂರು ಶಿವರಾಮ ಶೆಟ್ಟಿ ದಂಪತಿ, ಕಟೀಲು ಮೇಳದ ವ್ಯವಸ್ಥಾಪಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಎಂ.ಎಲ್‌.ಸಾಮಗ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಕೆ.ಗಣೇಶ್‌ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಮುರಲೀ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದದರು.

ಮದುವೆಯಲ್ಲಿ ಯಕ್ಷಗಾನ; ಹೊಸ ಪ್ರಯೋಗ
ಮದುವೆಯಲ್ಲಿ ಯಕ್ಷಗಾನದ ವೇಷ ಹಾಕಿದ ಕಾರಣಕ್ಕೆ ನಮ್ಮ ಪರಂಪರೆ ಹಾಳಾಗುವುದಿಲ್ಲ. ಪ್ರಯೋಗಗಳಿಂದ ಪರಂಪರೆ ಉಳಿಯಬೇಕು. ಇಂತಹ ಪ್ರಯೋಗಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಯಾಕೆಂದರೆ ಅದು ಯಕ್ಷಗಾನ ಪರಂಪರೆಯೊಳಗೆ ಬರುವುದಿಲ್ಲ. 150 ವರ್ಷಗಳ ಹಿಂದಿನ ಯಕ್ಷಗಾನ ಕಲೆಯನ್ನು ಪುನರ್‌ನಿರ್ಮಿಸುವ ಅಗತ್ಯವಿದೆ ಎಂದು ಡಾ| ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next