Advertisement
ಹೊಸ ಪ್ರಯೋಗ?ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಿದ್ವಾಂಸ ಪ್ರೊ| ಎಂ.ಎ. ಹೆಗಡೆ ದಂಟ್ಕಲ್ ರ ನೇತೃತ್ವದ ತಂಡ ಯಕ್ಷಗಾನ ಕಲಿಕಾರ್ಥಿಗಳಿಗಾಗಿ ಹೊಸ ಯೋಜನೆಯೊಂದನ್ನು ರೂಪಿಸಿದೆ. ಗುರುಕುಲ ಮಾದರಿಯ ಯಕ್ಷಗಾನ ತರಬೇತಿ ಕೇಂದ್ರಗಳಲ್ಲಿ ನಿರಂತರವಾಗಿ ಕಲಿಕೆ ಮಾಡುವ ವಿದ್ಯಾರ್ಥಿಗಳಿಗೆ, ಅದನ್ನೇ ವೃತ್ತಿಯಾಗಿ ಪಡೆಯುವ ಆಸಕ್ತಿ ಇರುವವರಿಗೆ ಯಕ್ಷಗಾನ ಅಕಾಡೆಮಿ ಮಾಸಿಕ ಎರಡು ಸಾವಿರ ರೂ. ನೀಡಲಿದೆ. ಉಡುಪಿ, ಹಂಗಾರಕಟ್ಟೆ, ಕೆರೆಮನೆಯ ಗುರುಕುಲ ಮಾದರಿಯ ಕೇಂದ್ರದಲ್ಲಿ ಯಕ್ಷಗಾನ ತರಬೇತಿ ಪಡೆಯುವ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಣವನ್ನು ಅಕಾಡೆಮಿ ವರ್ಗಾವಣೆ ಮಾಡಲಿದೆ. ಮಕ್ಕಳನ್ನು ಇರಿಸಿಕೊಂಡು ಹಗಲಿನಲ್ಲಿ ಶಾಲಾ ಶಿಕ್ಷಣ ಕೊಡಿಸಿ, ಸಂಜೆ ಯಕ್ಷಗಾನ ಕಲಿಸುವ ಕೇಂದ್ರದ ವಿದ್ಯಾರ್ಥಿಗಳಿಗೆ ಮಾಸಿಕ ಐನೂರು ಕೊಡುತ್ತಿದೆ.
ಯಕ್ಷಗಾನ ಕಲಿಯುವ ಆಸಕ್ತರ ಕೊರತೆ ಆಗದೇ ಇದ್ದರೂ ಗುರುಕುಲ ಮಾದರಿಯಲ್ಲಿ ಅಲ್ಲೇ ಇದ್ದು ಕಲಿಯುವವರ ಸಂಖ್ಯೆ ಏರಿಲ್ಲ. ಅದನ್ನೇ ವೃತ್ತಿಯಲ್ಲಿ ಮುಂದುವರಿಯುವವರಿಗೆ ಸಿಗಬೇಕಾದ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಎಷ್ಟೋ ಮಂದಿ ಶಿಕ್ಷಣದ ಬಳಿಕ ಯಕ್ಷಗಾನ ಕಲಿಕೆಗೆ ಮುಂದಾದರೆ ಮನೆಯಲ್ಲಿನ ಕಷ್ಟಕ್ಕೆ ಸ್ಪಂದಿಸುವುದೂ ಕಷ್ಟವಾಗುತ್ತಿತ್ತು. ಈ ಕಾರಣದಿಂದ ಬೇರೆ ಉದ್ಯೋಗ ನೋಡಿ ಯಕ್ಷಗಾನ ಆಸಕ್ತಿ ಇದ್ದರೂ ಕಲಿಕೆಗೆ ಮುಂದೆ ಬರುತ್ತಿರಲಿಲ್ಲ.ಇಂಥ ಸಂದಿಗ್ಧ ವೇಳೆ ಇದೇ ಪ್ರಥಮ ಬಾರಿಗೆ ಅಕಾಡೆಮಿ ಕಲಿಯುವ ಹಾಗೂ ಅದನ್ನೇ ಮುಂದೆ ವೃತ್ತಿಯಾಗಿಸಿಕೊಳ್ಳಲು ಗುರುಕುಲ ಮಾದರಿಯಲ್ಲಿ ತರಬೇತಿ ಪಡೆಯುವವರಿಗೆ ಈ ಯೋಜನೆ ಮಾಡಲು ಮುಂದಡಿ ಇಟ್ಟಿದೆ. ಅಕಾಡೆಮಿಗಳು, ಸರಕಾರ, ಇಲಾಖೆಗಳು ಗುರುಕುಲ ಮಾದರಿ ಕೇಂದ್ರಗಳನ್ನು ಬಲಿಷ್ಠಗೊಳಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಶ್ರೀಮಯ ಕೇಂದ್ರದ ಮುಖ್ಯಸ್ಥ ಶಿವಾನಂದ ಹೆಗಡೆ ಕೆರೆಮನೆ. ತರಬೇತಿಗೂ ಸಹಾಯ ಧನ
ಯಕ್ಷಗಾನ ಕಲಿಸುವ ತರಬೇತಿ ಶಿಬಿರಗಳ ಶಿಕ್ಷಕರಿಗೂ ಪ್ರೋತ್ಸಾಹಿಸಲು ಅಕಾಡೆಮಿ ಯೋಜಿಸಿತ್ತು. ಈಗಾಗಲೇ ಶಿಬಿರದ ಮುಖ್ಯ ಶಿಕ್ಷಕರಿಗೆ 10ಸಾವಿರ, ಸಹ ಶಿಕ್ಷಕರಿಗೆ 5 ಸಾವಿರ ರೂ. ಕೊಡುತ್ತಿದೆ. ಇದಕ್ಕಾಗಿ 20 ಲಕ್ಷ ರೂ. ನಿಗದಿಮಾಡಲಾಗಿದ್ದು, ಇಡೀ ರಾಜ್ಯದ ಸುಮಾರು 64 ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಮೂಡಲಪಾಯದಲ್ಲಿ ವಿನಾಶಕ್ಕೆ ಸರಿದ ಮುಖವೀಣೆ ನುಡಿಸುವುದನ್ನು ಕಲಿಯುವವರಿಗೂ ಮಾಸಿಕ 2 ಸಾವಿರ ರೂ. ನೀಡಲಾಗುತ್ತದೆ.
Related Articles
– ಪ್ರೊ| ಎಂ.ಎ. ಹೆಗಡೆ ದಂಟ್ಕಲ್, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ
Advertisement
ಇದೇ ಪ್ರಥಮಬಾರಿಗೆ ಅಕಾಡೆಮಿ ಗುರುಕುಲದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸ್ಪಂದಿಸಿದ್ದು ಅಭಿನಂದನೀಯ. ಶಿಷ್ಯ ವೇತನದ ಮಾದರಿಯಲ್ಲೇ ಇಲ್ಲಿ ಕಲಿಸುವ ಗುರುಗಳಿಗೂ ನೆರವಾಗಬೇಕಿದೆ. ಗುರುಕುಲ ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ. ಇಲ್ಲವಾದಲ್ಲಿ ಕೇಂದ್ರಗಳೇ ಮರೆಯಾಗುವ ಆತಂಕವೂ ಇದೆ.– ಶಿವಾನಂದ ಹೆಗಡೆ ಕೆರೆಮನೆ, ಮುಖ್ಯಸ್ಥರು, ಶ್ರೀಮಯ ಕಲಾಕೇಂದ್ರ — ರಾಘವೇಂದ್ರ ಬೆಟ್ಟಕೊಪ್ಪ