ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ವೀಕ್ಷಿಸಲು ಮಧ್ಯರಾತ್ರಿಯ ಬಳಿಕ ಜನರೇ ಇರುವುದಿಲ್ಲ ಎಂಬ ಕೊರಗು ಇಂದು ನಿನ್ನೆಯದಲ್ಲ. ಕಳೆದೆರಡು ದಶಕಗಳಿಂದ ಹಲವು ಕಾರಣಗಳಿಂದಾಗಿ ರಾತ್ರಿ ನಿದ್ದೆಗೆಡಲು ಬಯಸದ ಮಂದಿ ಇಳಿ ಹೊತ್ತಿನ ಬಳಿಕ ಮನೆ ಕಡೆ ತೆರಳುತ್ತಿರುವುದು ಜನಜನಿತವಾದ ವಿಚಾರವಾಗಿದೆ.
ದಾಖಲೆಯ ಪ್ರದರ್ಶನ ಕಾಣುವ “ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟದಲ್ಲಂತೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದರೂ ಮಹಿಷಾ ಸುರನ ವಧೆಯ ಬಳಿಕ ನಮಗೆ ಕಾಣ ಸಿಗುವುದು ಬೆರಳೆಣಿಕೆಯ ಮಂದಿಯಷ್ಟೆ. ಎಷ್ಟೇ ಶ್ರೇಷ್ಠ ಪ್ರದರ್ಶನ ನೀಡಿದರೂ ನೋಡುವ ಕಣ್ಣುಗಳಿಲ್ಲದಿದ್ದರೆ, ಮೆಚ್ಚಿ ಉತ್ತೇಜಿಸುವ ಕಲಾಭಿಮಾನಿಗಳಿಲ್ಲದಿದ್ದರೆ ಎಂತಹ ಕಲಾವಿದನಿಗೂ ನಿರಾಸೆ ಮೂಡುವುದು ಸಹಜ.
ಇಂತಹ ಕಾಲಘಟ್ಟದಲ್ಲಿ ರಾತ್ರಿಯಿಡೀ ನಡೆಯು ತ್ತಿದ್ದ ಯಕ್ಷಗಾನ ಬಯಲಾಟಕ್ಕೆ ಇತಿಶ್ರೀ ಹಾಡಿ ಕಾಲಮಿತಿ ಪ್ರಯೋಗಕ್ಕೆ ನಾಂದಿ ಹಾಡಿದ ಶ್ರೇಯಸ್ಸು ಸಲ್ಲಬೇಕಾದದ್ದು ಹೊಸನಗರ ಮೇಳ (ಈಗಿನ ಹನುಮಗಿರಿ ಮೇಳ)ಕ್ಕೆ. ಆ ಬಳಿಕ ಶ್ರೀ ಧರ್ಮಸ್ಥಳ ಮೇಳವೂ ಇದನ್ನು ಅನುಸರಿಸಿತು. ಕಳೆದ ವರ್ಷ ನೂತನವಾಗಿ ತಿರುಗಾಟ ಆರಂಭಿಸಿದ ಪಾವಂಜೆ ಮೇಳವಂತೂ ಕಾಲಮಿತಿ ಪ್ರದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿಯೇ ಮುನ್ನಡೆಯುತ್ತಿದೆ.
ಕೊರೊನಾ ಬಳಿಕ ಯಕ್ಷಗಾನ ರಂಗದಲ್ಲಿ ಹೊಸ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾತ್ರಿಯಿಡೀ ಪ್ರದರ್ಶನ ನೀಡುತ್ತಿದ್ದ ಎಲ್ಲ ಮೇಳಗಳೂ ಕಾಲ ಮಿತಿಗೆ ಇಳಿದು ಹೊಸ ಸಂಚಲನವನ್ನುಂಟು ಮಾಡಿವೆ. ವಾರದ ಎಲ್ಲ ದಿನಗಳಲ್ಲೂ ಬಹುತೇಕ ಮೇಳಗಳ ಯಕ್ಷಗಾನ ಪ್ರದರ್ಶನ ಕಿಕ್ಕಿರಿದ ಜನ ಸಂದಣಿಯಿಂದ ವಿಜೃಂಭಿಸುತ್ತಿದೆ. ವಿಶೇಷವಾಗಿ ಅತ್ಯಧಿಕ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳು ಯಕ್ಷಗಾನದ ಹೊಸ ಪ್ರೇಕ್ಷಕರಾಗಿ ಈ ಬಾರಿ ಕಂಡು ಬಂದದ್ದು ಇಲ್ಲಿ ಉಲ್ಲೇಖನೀಯ.
ಕಾಲಮಿತಿಯ ಪ್ರದರ್ಶನ ಮಾತ್ರ ಯಕ್ಷಗಾನ ವನ್ನು ಉಳಿಸಿ, ಬೆಳೆಸಬಲ್ಲುದು ಎಂಬುದು ಈಗ ಸಾಬೀತಾಗಿದೆ. ಎಲ್ಲ ಮೇಳಗಳ ಯಜಮಾನರು, ಬಯಲಾಟದ ಸಂಘಟಕರು ಹಾಗೂ ಕಲಾಭಿ ಮಾನಿಗಳು “ಕಾಲಮಿತಿ’ ಮನಃಸ್ಥಿತಿಗೆ ಹೊಂದಿ ಕೊಳ್ಳುವುದು ಇಂದಿನ ಅನಿವಾರ್ಯತೆ.
-ಸತೀಶ್ ಶೆಟ್ಟಿ ಕೊಡಿಯಾಲಬೈಲ್, ಮಂಗಳೂರು