Advertisement

ಜಿಜ್ಞಾಸೆಗೆ ಗ್ರಾಸ ಒದಗಿಸಿದ ಭೀಷ್ಮಾರ್ಜುನ 

06:00 AM Nov 30, 2018 | Team Udayavani |

ಕಾರ್ಕಳದ ವೆಂಕಟರಮಣ ಯಕ್ಷಗಾನ ಸಮಿತಿಯವರು ಶ್ರೀನಿವಾಸ ಸಭಾಭವನದಲ್ಲಿ ಸಂಯೋಜಿಸಿದ “ಭೀಷ್ಮಾರ್ಜುನ’ ತಾಳಮದ್ದಳೆ ಶ್ರುತಪ್ರದವಾಗಿ ರಂಜಿಸಿತು. ತತ್ವ ಜಿಜ್ಞಾಸೆಗೆ ಗ್ರಾಸ ಒದಗಿಸಿತು. ರಸರಾಗಯುಕ್ತವಾದ ಭಾವಸ್ಪರ್ಶಿ ಭಾಗವತಿಕೆ, ಉತ್ತಮ ಹಿಮ್ಮೇಳವಾದನ ಅರ್ಥಧಾರಿಗಳಿಗೆ ಸ್ಫೂರ್ತಿ ನೀಡಿತು. ಪುಂಡಿಕಾಯಿ ಗೋಪಾಲಕೃಷ್ಣ ಭಟ್‌ ಅವರ ಸುಮಧುರ ಕಂಠ, ಗುರುಪ್ರಸಾದ್‌ ಬೊಳಿಂಜಡ್ಕ ಅವರ ಸ್ಪುಟವಾದ ಮದ್ದಳೆ ವಾದನ, ರಾಮಕೃಷ್ಣ ಕಾಮತ್‌ ಅವರ ಚೆಂಡೆ ವಾದನ ತಾಳಮದ್ದಳೆಗೆ ಬೆಂಬಲ ನೀಡಿತು.

Advertisement

“ಕೇಳಿರೈ ಮಾದ್ರೇಶ ಮುಖ್ಯರೆಲ್ಲರೂ’ ಪ್ರಸಂಗದ ಪೀಠಿಕೆಯ ಪದ್ಯಕ್ಕೆ ಕೌರವನಾಗಿ ಪಾತ್ರ ನಿರ್ವಹಿಸಿದ ಹಿರಿಯ ಅರ್ಥಧಾರಿ ಪ್ರಭಾಕರ ಜೋಶಿ ಕಥಾಗತಿಗೆ ತಕ್ಕಂತೆ ವಿದ್ವತ್‌ಪ್ರದವಾಗಿ ಅರ್ಥಗಾರಿಕೆ ಮಾಡಿದರು. ಪಾತ್ರ ಪುಷ್ಟಿಗೆ ಬೇಕಾದ ರೀತಿಯಲ್ಲಿ ಸುಯೋಧನ ಸ್ವಭಾವವನ್ನು ಚಿತ್ರಿಸಿದರು. ಕುರುಕ್ಷೇತ್ರದ ಪಶ್ಚಿಮದಲ್ಲಿ ಬೀಡುಬಿಟ್ಟ ಪಾಂಡವಸೇನೆ, ಯುದ್ಧ ನಾಯಕ, ಸೇನಾ ನಾಯಕ, ಪಕ್ಷ ನಾಯಕ ಇತ್ಯಾದಿ ವಿಷಯಗಳನ್ನು ಪ್ರಸ್ತಾವಿಸಿ ಛಲದಂಕನಾದ ಕೌರವನ ಗುಣವನ್ನು ಪ್ರಕಟಿಸಿ ಉತ್ತಮವಾಗಿ ವಿಷಯ ಮಂಡಿಸಿದರು. 

“ಆರು ಸೇನಾಧೀಶರಹರು ನಮ್ಮಯ ಬಲದಿ ಪಾರಮಾರ್ಥದೊಳರುಹಿ’ ಗುರುಗಳಲ್ಲಿ ಕೌರವನ ಹೇಳಿಕೆ ಅರ್ಥವತ್ತಾಗಿತ್ತು. ಗುರು ದ್ರೋಣಾಚಾರ್ಯರಾಗಿ ರಾಮಭಟ್‌ ಅವರು ಸ್ಪಂದನೀಯವಾಗಿ ಪಾತ್ರ ನಿರ್ವಹಿಸಿದರು. ಗುರು ಶಿಷ್ಯರ ಸಂವಾದ ಸೊಗಸಾಗಿತ್ತು. ಭೀಷ್ಮನಾಗಿ ಪ್ರಸಿದ್ಧ ಅರ್ಥಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್‌ ಒಳ್ಳೆಯ ನಿರ್ವಹಣೆಯಿಂದ ರಂಜಿಸಿದರು. “ತ್ಯಾಗೇನೈಕೋ ಅಮೃತತ್ವ ಮಾನುಷ’ ತ್ಯಾಗದಿಂದ ಅಮೃತತ್ವ, “ದೇವಕೀ ಪೂರ್ವ ಸಂಧ್ಯಾಯಂ ಆವಿಭೂìತಂ ಮಹಾತ್ಮಂ’ ಕೃಷ್ಣ ಮಹಿಮೆಯನ್ನು ವಿವರಿಸಿ ಕೌರವನಿಗೆ ನೀತಿ ಸಾರಿದ ಆಚಾರ್ಯ ಭೀಷ್ಮರ ಘನ ವ್ಯಕ್ತಿತ್ವವನ್ನು ಪ್ರಕಟಿಸಿ ವಿಶ್ವೇಶ್ವರ ಭಟ್‌ ಅರ್ಥಗಾರಿಕೆ ನಡೆಸಿದರು. 

ಸೇನಾನಾಯಕನಾಗಲು ಒಪ್ಪಿದ ಭೀಷ್ಮರ ಪ್ರತಿಜ್ಞೆಯಂತೆ ಪ್ರಸಂಗ ಸಾಗಿತು. ಅರ್ಜುನನಾಗಿ ಹರೀಶ ಬಳಂತಿಮಗರು ಪಾತ್ರ ಸಹಜವಾಗಿ ಉತ್ತಮ ಸಂವಾದ ನಡೆಸಿದರು. ಕೃಷ್ಣನಾಗಿ ವಾಸುದೇವ ರಂಗಾ ಭಟ್‌ ಯೋಗ್ಯ ವಿಷಯ ಮಂಡನೆಗಳಿಂದ ಪಾತ್ರ ನಿರ್ವಹಿಸಿದರು. ಶಿವನ ಭಿûಾಸ್ಥಿತಿ, ದೇವೇಂದ್ರನ ಸ್ಥಾನಚ್ಯುತಿ, ಕರ್ಮಸೂತ್ರ, ಅನಿಶ್ಚಿತ ಪರಿಣಾಮ, ಸುನಿಶ್ಚಿತ ಪರಿಣಾಮ ಇತ್ಯಾದಿಗಳ ಬಗ್ಗೆ ಕೃಷ್ಣನ ಮಾತು ಮನಸ್ಪರ್ಶಿಯಾಗಿ ಉತ್ತರಪ್ರದವಾಗಿತ್ತು. 

ಧಾರಣೆ, ಯಜ್ಞ, ಪೂರ್ವಾಗ್ರಹ ಇಲ್ಲದೆ ಕರ್ಮ ನಿರತರಾಗುವುದರ ಬಗ್ಗೆ ಭೀಷ್ಮ ಕೃಷ್ಣರ ಸಂವಾದ ಸೊಗಸಾಗಿತ್ತು. “ಪಂಕಜಾಕ್ಷ ಭೇದವೇಕೋ’ ಭೀಷ್ಮರ ಪ್ರಶ್ನೆ ಅರ್ಹವಾಗಿತ್ತು. ಕರ್ಮಜಾಲದಲ್ಲಿದ್ದವರನ್ನು ಬಿಡಿಸುವ ದೇವರಿಗೆ ಕರ್ಮ ಬಂಧನವಿಲ್ಲ, ಕೃಷ್ಣನಾಗಿ ವಾಸುದೇವ ರಂಗಾ ಭಟ್ಟರ ಉತ್ತರ ಸ್ಪಷ್ಟತೆಯಿಂದ ಕೂಡಿತ್ತು. “ಶೂಲಿ ಸನ್ನಿಭರಾದ ಭೀಷ್ಮಾಚಾರ್ಯರನ್ನು ಹೋರಾಟದಲ್ಲಿ ಜಯಿಸದಿದ್ದರೆ ಕೃಷ್ಣನ ಭಕ್ತನಲ್ಲ’ ಪಾರ್ಥನ ಪಾತ್ರ ನಿರ್ವಹಿಸಿದ ಹರೀಶ ಬಳಂತಿಮೊಗರು ಭಾವನಾತ್ಮಕವಾಗಿ ಮಾತನಾಡಿದರು. 

Advertisement

ಎಲ್‌.ಎನ್‌.ಭಟ್‌ ಮಳಿ

Advertisement

Udayavani is now on Telegram. Click here to join our channel and stay updated with the latest news.

Next